ಶುಲ್ಕ ಪಾವತಿಸದವರ ನಿವೇಶನ ಮುಟ್ಟುಗೋಲಿಗೆ ಚಿಂತನೆ

KannadaprabhaNewsNetwork |  
Published : Jun 10, 2025, 04:02 AM IST
 9ಕೆಆರ್ ಎಂಎನ್ 3.ಜೆಪಿಜಿರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ನಿವೇಶನದಾರರ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಶುಲ್ಕ ಪಾವತಿ ದಿನಾಂಕವನ್ನು ಎರಡು ಬಾರಿ ವಿಸ್ತರಣೆ ಮಾಡಲಾಗಿದೆ. ಇದೀಗ ಅಂತಿಮವಾಗಿ ಜೂ. 30 ಗಡುವು ನಿಗದಿಪಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ರಾಮನಗರರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಮೂರು ಬಡಾವಣೆಗಳ ನಿವೇಶನದಾನರರಿಗೆ ಪ್ರತಿ ಚದರ ಅಡಿಗೆ 200 ರುಪಾಯಿ ಅಭಿವೃದ್ಧಿ ಶುಲ್ಕ ಪಾವತಿಸಲು ನಿಗದಿ ಪಡಿಸಿದ್ದ ಗಡುವನ್ನು ಜೂನ್ 30ರವರೆಗೆ ವಿಸ್ತರಣೆ ಮಾಡಲಾಗಿದೆ. ಈ ಅವಧಿಯೊಳಗೆ ಶುಲ್ಕ ಪಾವತಿಸದವರ ನಿವೇಶನ ಮುಟ್ಟುಗೋಲಿಗೆ ಚಿಂತನೆ ನಡೆಸಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ ಎಚ್ಚರಿಕೆ ನೀಡಿದರು.ಪ್ರಾಧಿಕಾರದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, ನಿವೇಶನದಾರರ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಶುಲ್ಕ ಪಾವತಿ ದಿನಾಂಕವನ್ನು ಎರಡು ಬಾರಿ ವಿಸ್ತರಣೆ ಮಾಡಲಾಗಿದೆ. ಇದೀಗ ಅಂತಿಮವಾಗಿ ಜೂ. 30 ಗಡುವು ನಿಗದಿ ಪಡಿಸಲಾಗಿದೆ ಎಂದರು.ರಾಮನಗರದ ಜೀಗೇನಹಳ್ಳಿ, ಹೆಲ್ತ್ ಸಿಟಿ ಮತ್ತು ಚನ್ನಪಟ್ಟಣದ ಕಣ್ವ ಬಡಾವಣೆಗಳ ಅಭಿವೃದ್ಧಿಗಾಗಿ ಮಾಜಿ ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಇಕ್ಬಾಲ್ ಹುಸೇನ್ ರವರು ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ಪ್ರತಿ ಚದರ ಅಡಿಗೆ ಸಾಧಾರಣ ಮೊತ್ತ 200 ರುಪಾಯಿ ಅಭಿವೃದ್ಧಿ ಶುಲ್ಕ ನಿಗದಿ ಮಾಡಿಸಿದ್ದರು.11 ಕೋಟಿ ಅಭಿವೃದ್ಧಿ ಶುಲ್ಕ ಪಾವತಿ:ಈ ಮೊದಲು ಮಾರ್ಚ್ 31ರೊಳಗೆ ಅಭಿವೃದ್ಧಿ ಶುಲ್ಕ ಪಾವತಿಸುವಂತೆ ನಿವೇಶನದಾರರಿಗೆ ಸೂಚನೆ ನೀಡಲಾಗಿತ್ತು. ಆನಂತರ ಮೇ 30ರವರೆಗೆ ದಿನಾಂಕ ವಿಸ್ತರಣೆ ಮಾಡಲಾಗಿತ್ತು. ಅಭಿವೃದ್ಧಿ ಶುಲ್ಕದಿಂದ ಒಟ್ಟು 88 ಕೋಟಿ ರುಪಾಯಿ ನಿರೀಕ್ಷೆ ಮಾಡಲಾಗಿದ್ದು, ಇಲ್ಲಿವರೆಗೆ 1661 ನಿವೇಶನದಾರರ ಪೈಕಿ 491 ನಿವೇಶನದಾರರು 11 ಕೋಟಿ ರು. ಅಭಿವೃದ್ಧಿ ಶುಲ್ಕ ಪಾವತಿಸಿದ್ದಾರೆ ಎಂದು ಹೇಳಿದರು. ಈ ಹಣದಿಂದ ಬಡಾವಣೆಗಳಿಗೆ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗುವುದಿಲ್ಲ. ಎಲ್ಲ ಫಲಾನುಭವಿಗಳು ಅಭಿವೃದ್ಧಿ ಶುಲ್ಕ ಪಾವತಿಸಿದರಷ್ಟೇ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಯುಜಿಡಿ, ಚರಂಡಿ, ರಸ್ತೆ ನಿರ್ಮಾಣದಂತಹ ಕೆಲಸ ಕೈಗೆತ್ತಿಕೊಳ್ಳಲು ಸಾಧ್ಯ. ಬಾಕಿ ಉಳಿದಿರುವ 1170 ಮಂದಿ ನಿವೇಶನದಾರರು ಕಡ್ಡಾಯವಾಗಿ ಜೂನ್ 30ರೊಳಗೆ ಅಭಿವೃದ್ಧಿ ಶುಲ್ಕ ಪಾವತಿಸಿ ಬಡಾವಣೆಗಳ ಅಭಿವೃದ್ಧಿಗೆ ಸಹಕಾರ ನೀಡಿ ಪ್ರಾಧಿಕಾರದೊಂದಿಗೆ ಕೈಜೋಡಿಸಬೇಕು. ಶುಲ್ಕ ಪಾವತಿಗೆ ಹಿಂದೇಟು ಹಾಕಿದಲ್ಲಿ ಅಂತಹ ನಿವೇಶನದಾರರಿಗೆ ಬಡ್ಡಿ ಸಮೇತ ಹಣ ವಾಪಸ್ ನೀಡಿ ನಿವೇಶನ ಮುಟ್ಟುಗೋಲು ಹಾಕಿಕೊಳ್ಳಬಾರದು ಎಂಬ ಚಿಂತನೆಯೂ ಪ್ರಾಧಿಕಾರ ಮಾಡಿದ್ದು, ಈ ಬಗ್ಗೆ ಪ್ರಾಧಿಕಾದ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.ಮುಟ್ಟುಗೋಲಿಗೆ ಸರ್ಕಾರಕ್ಕೆ ಪ್ರಸ್ತಾವನೆ :ನಿವೇಶನ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಇದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಅಭಿವೃದ್ಧಿ ಶುಲ್ಕ ಪಾವತಿಸಲಾಗದ ನಿವೇಶನದಾರರಿಗೆ ಬಡ್ಡಿ ಸಮೇತ ಹಣ ಮರು ಪಾವತಿಸಿ, ಅವರ ನಿವೇಶನ ಮುಟ್ಟುಗೋಲು ಹಾಕಿಕೊಳ್ಳುವ ಸಂಬಂಧ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದು ಚೇತನ್ ಕುಮಾರ್ ಉತ್ತರಿಸಿದರು.ರಾಜ್ಯ ಸರ್ಕಾರ ನಿವೇಶನದಾರರಿಂದ ಅಭಿವೃದ್ಧಿ ಶುಲ್ಕ ವಸೂಲಿಗೆ ಆದೇಶಿಸಿ ಮೂರು ತಿಂಗಳು ಕಳೆದಿದ್ದು,ಆ ಶುಲ್ಕವನ್ನು ಅದೇ ಬಡಾವಣೆಗಳಿಗೆ ಮೂಲಸೌಲಭ್ಯ ಕಲ್ಪಿಸಲು ವಿನಿಯೋಗಿಸಬೇಕೆಂದು ಸೂಚನೆ ನೀಡಿದೆ. ಜೊತೆಗೆ ಪ್ರಾಧಿಕಾರವು ಆರು ತಿಂಗಳೊಳಗೆ ಬಡಾವಣೆಗಳಿಗೆ ಮೂಲ ಸೌಕರ್ಯ ಕಲ್ಪಿಸಿ ಅಭಿವೃದ್ಧಿ ಪಡಿಸುವ ಭರವಸೆ ನೀಡಿತ್ತು. ನಿವೇಶನದಾರರ ನಿರ್ಲಕ್ಷ್ಯದಿಂದ ಎಲ್ಲ ಕಾರ್ಯಗಳು ತಡವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಸದಸ್ಯರಾದ ಪ್ರವೀಣ್ , ಶ್ರೀದೇವಿ, ಶ್ರೀನಿವಾಸ್ , ಆಯುಕ್ತ ಶಿವನಂಕಾರಿಗೌಡ ಇದ್ದರು.

...ಕೋಟ್ ...

ರಾಮನಗರದ ಜೀಗೇನಹಳ್ಳಿ, ಹೆಲ್ತ್ ಸಿಟಿ ಮತ್ತು ಚನ್ನಪಟ್ಟಣದ ಕಣ್ವ ಬಡಾವಣೆಗಳ ನಿವೇಶನದಾರರು ಆರ್ಥಿಕ ಸಂಕಷ್ಟದಲ್ಲಿದ್ದರೆ, ಅವರಿಗೆ ಬ್ಯಾಂಕ್ ಗಳ ಮೂಲಕ ಅಭಿವೃದ್ಧಿ ಶುಲ್ಕದಷ್ಟು ಸಾಲವನ್ನು ಕೊಡಿಸಲು ಪ್ರಾಧಿಕಾರ ಸಿದ್ಧವಿದೆ. ಈ ಸಂಬಂಧ ನಾಲ್ಕೈದು ಬ್ಯಾಂಕುಗಳ ಮ್ಯಾನೇಜರ್ ಗಳು ಪ್ರಾಧಿಕಾರದೊಂದಿಗೆ ಚರ್ಚೆ ನಡೆಸಿದ್ದು, ನಿವೇಶನದಾರರು ಸೂಕ್ತ ದಾಖಲೆಗಳನ್ನು ಒದಗಿಸಿ ಸಾಲ ಸೌಲಭ್ಯ ಪಡೆಯಬಹುದಾದಿಗೆ.- ಎ.ಬಿ.ಚೇತನ್ ಕುಮಾರ್ , ಅಧ್ಯಕ್ಷ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ----- 9ಕೆಆರ್ ಎಂಎನ್ 3.ಜೆಪಿಜಿರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.------

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ