ಶಿರಸಿ: ಮುಖ್ಯಮಂತ್ರಿ ಸೂಚನೆಯಂತೆ ಪೊಲೀಸ್ ಬೀಟ್‌ಅನ್ನು ಇನ್ನಷ್ಟು ಬಲಿಷ್ಠಗೊಳಿಸಿ, ನೊಂದವರಿಗೆ ಹಾಗೂ ದೂರುದಾರರಿಗೆ ನ್ಯಾಯ ಒದಗಿಸಲು ಒಂದು ಬೀಟ್‌ಗೆ ಇಬ್ಬರು ಪೊಲೀಸ್ ಸಿಬ್ಬಂದಿ ನೇಮಕ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ತಿಳಿಸಿದರು.
ಶುಕ್ರವಾರ ಮಾಧ್ಯಮದವರ ಜತೆ ಮಾತನಾಡಿ, ಈಗಾಗಲೇ ಬೀಟ್ ವ್ಯವಸ್ಥೆ ಉತ್ತಮವಾಗಿದ್ದು, ಸಿಬ್ಬಂದಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೊಲೆ, ಸುಲಿಗೆ, ದರೋಡೆ ಸೇರಿದಂತೆ ಇನ್ನಿತರ ಗಂಭೀರ ಪ್ರಕರಣಗಳ ಆರೋಪಿಗಳ ಪತ್ತೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯೋನ್ಮುಖರಾಗಿದ್ದಾರೆ. ದೂರುದಾರರು ಮತ್ತು ನೊಂದವರಿಗೆ, ಆರೋಪಿಗಳ ಪತ್ತೆ ಹಾಗೂ ಪ್ರಕರಣದ ಕುರಿತು ತಿಳಿಸಲು ಪ್ರತಿ ಬೀಟ್‌ಗೆ ಇಬ್ಬರು ಪೊಲೀಸ್ ಸಿಬ್ಬಂದಿ ನೇಮಕ ಮಾಡುವ ಕುರಿತು ಚಿಂತನೆ ನಡೆಸಲಾಗಿದೆ ಎಂದರು.ಶಿರಸಿಗೆ ಟ್ರಾಫಿಕ್ ಠಾಣೆಯನ್ನು ೨೦೨೩ರಲ್ಲಿ ಸರ್ಕಾರ ಮಂಜೂರು ಮಾಡಿದೆ. ಠಾಣೆಯ ವ್ಯಾಪ್ತಿಯ ಗುರುತು ಮಾಡುವ ಕೆಲಸ ಪ್ರಗತಿಯಲ್ಲಿದೆ. ಆದಷ್ಟು ಶೀಘ್ರವಾಗಿ ಶಿರಸಿಯಲ್ಲಿ ಟ್ರಾಫಿಕ್ ಠಾಣೆ ಕಾರ್ಯಾರಂಭಿಸಲು ಕ್ರಮ ವಹಿಸಲಾಗುತ್ತದೆ ಎಂದರು.
ವಸತಿಗೃಹಗಳು ಗುಣಮಟ್ಟದ ಕೊರತೆಯಿಂದ ಮಳೆಗಾಲದಲ್ಲಿ ಸೋರುತ್ತಿದೆ ಎಂದು ಮಾಧ್ಯಮದವರು ಗಮನಕ್ಕೆ ತಂದಾಗ, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿಯುವುದರಿಂದ ಬೇರೆ ಪ್ರದೇಶದ ಮಾದರಿಯಲ್ಲಿ ಇಲ್ಲಿ ವಸತಿ ಗೃಹಗಳನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂಬುದನ್ನು ಮನಗಂಡು, ಈ ಭಾಗಕ್ಕೆ ಪ್ರತ್ಯೇಕ ಮಾದರಿಯಲ್ಲಿ ವಸತಿಗೃಹಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತದೆ ಎಂದರು.ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರಿಗೆ ಮತ್ತು ಪೊಲೀಸ್ ಉಪನಿರೀಕ್ಷಕರಿಗೆ ಸೇರಿ ಕೇವಲ ಒಂದು ವಾಹನವಿದೆ. ಗ್ರಾಮೀಣ ಠಾಣೆಯ ವ್ಯಾಪ್ತಿ ವಿಶಾಲವಾಗಿದೆ. ಇನ್ನೊಂದು ಜೀಪ್ ಒದಗಿಸಬೇಕು ಎಂದು ಮಾಧ್ಯಮದವರು ಐಜಿಪಿ ಅಮಿತ್ ಸಿಂಗ್ ಗಮನಸೆಳೆದಾಗ, ಇನ್ನೊಂದು ವಾಹನ ಒದಗಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತಿಳಿಸಿದರು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ., ಡಿಎಸ್‌ಪಿ ಕೆ.ಎಲ್. ಗಣೇಶ, ಸಿಪಿಐ ಶಶಿಕಾಂತ ವರ್ಮಾ ಇದ್ದರು.