ಚಿತ್ರದುರ್ಗ : ಅಭಿವೃದ್ಧಿಯ ಹರಿಕಾರ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪನವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಎಂದು ಹೇಳುವುದಕ್ಕೆ ಜಯಸಿಂಹ ಖಾಟ್ರೋತ್ ಹಾಗೂ ಅವರ ಗುಂಪಿಗೆ ನೈತಿತಕೆಯಿಲ್ಲ. ಗುಂಪುಗಾರಿಕೆ ಬಿಟ್ಟು ತೆಪ್ಪಗಿದ್ದರೆ ಸರಿ. ಕಾರ್ಯಕರ್ತರು ರೊಚ್ಚಿಗೆದ್ದರೆ ಉಳಿಗಾಲವಿಲ್ಲ ಎಂದು ಹೊಳಲ್ಕೆರೆ ಬಿಜೆಪಿ ಮಂಡಲ ಅಧ್ಯಕ್ಷ ಬಿ.ಎಂ.ಸಿದ್ದೇಶ್ ಎಚ್ಚರಿಸಿದರು.
ನಾಲ್ಕು ವಿಧಾನಸಭೆ ಚುನಾವಣೆಯಲ್ಲಿಯೂ ಎಂ.ಚಂದ್ರಪ್ಪನವರ ವಿರುದ್ಧ ಪಿತೂರಿ ನಡೆಸಿದ ಖಾಟ್ರೋತ್ ಯಾವ ಪಕ್ಷದಲ್ಲಿದ್ದಾರೆನ್ನುವುದೇ ಗೊತ್ತಿಲ್ಲ. ಜೈಲಿಗೆ ಹೋಗಿ ಬಂದು ರೌಡಿ ಶೀಟರ್ ಎನಿಸಿಕೊಂಡಿರುವ ಇವರು, ನಮ್ಮ ಶಾಸಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೆ ನಾವುಗಳು ಸಹಿಸುವುದಿಲ್ಲ. ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಡಾ.ಎಂ.ಚಂದ್ರಪ್ಪನವರು ಮೊದಲಿನಿಂದಲೂ ಬಿ.ಎಸ್.ಯಡಿಯೂರಪ್ಪನವರ ಪರವಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಅವರ ಪುತ್ರ ಎಂ.ಸಿ.ರಘುಚಂದನ್‍ಗೆ ಬಿಜೆಪಿಯಿಂದ ಟಿಕೆಟ್ ಸಿಗಲಿಲ್ಲವೆಂದು ಮುನಿಸಿಕೊಂಡಿದ್ದು ನಿಜ. ಯಾರಿಗಾದರೂ ಅಂತಹ ಸಂದರ್ಭದಲ್ಲಿ ಮನಸ್ತಾಪವಿರುತ್ತದೆ. ಈಗ ಎಲ್ಲವೂ ಸರಿ ಹೋಗಿದೆ. ಹೊಳಲ್ಕೆರೆ ಕ್ಷೇತ್ರದಲ್ಲಿ ಕೆರೆ ಕಟ್ಟೆ, ಚೆಕ್‍ಡ್ಯಾಂ, ಶಾಲಾ-ಕಾಲೇಜು, ಉತ್ತಮ ಗುಣಮಟ್ಟದ ರಸ್ತೆ, ಹೈಟೆಕ್ ಆಸ್ಪತ್ರೆಗಳಾಗಿವೆ. ಇಂತಹ ಕೆಲಸ ಆಗಿಲ್ಲವೆಂದು ಯಾರೂ ಟೀಕಿಸುವಂತಿಲ್ಲ. ಜಯಸಿಂಹ ಖಾಟ್ರೋತ್ ಪಕ್ಷೇತರರಿಂದ ಹಿಡಿದು ಎಲ್ಲಾ ಪಕ್ಷ ಸುತ್ತಾಡಿದ್ದಾರೆ ಎಂದು ಕಿಡಿಕಾರಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತಿಪ್ಪೇಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಆರ್.ಅಶೋಕ್, ಹೊಳಲ್ಕೆರೆ ತಾಲೂಕು ಪಂಚಾಯಿತಿಯ ಶಿವು, ಎಪಿಎಂಸಿ ಮಾಜಿ ಅಧ್ಯಕ್ಷ ಅಂಕಳಪ್ಪ, ಪ್ರವೀಣ್, ಶಂಕರ ನಾಯ್ಕ, ರುದ್ರೇಶ್, ಭದ್ರಾನಾಯ್ಕ, ಬಿಜೆಪಿ ಹಿಂದುಳಿದ ವರ್ಗಗಳ ಅಧ್ಯಕ್ಷ ಗಿರೀಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದಯಾನಾಯ್ಕ ಮುಂತಾದವರು ಹಾಜರಿದ್ದರು.