ಧರ್ಮಸ್ಥಳ ವಿರುದ್ಧ ಸಂಚು: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ

KannadaprabhaNewsNetwork |  
Published : Aug 19, 2025, 01:00 AM IST
18ಕೆಎಂಎನ್ ಡಿ18 | Kannada Prabha

ಸಾರಾಂಶ

ಒಂದು ಜವಾಬ್ದಾರಿಯುತ ಸರ್ಕಾರ ಮಾಡಬೇಕಾದ ಕೆಲಸವನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ. ಇಂದು ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಲು ಶ್ರೀಕ್ಷೇತ್ರದ ಕೊಡುಗೆ ದೊಡ್ಡದು. ರೈತರ ನೆರವಿಗೆ ಧಾರ್ಮಿಕ ಸಂಸ್ಥೆಯೊಂದು ಕೆಲಸ ಮಾಡುತ್ತಿರುವುದು ಇಡೀ ದೇಶದಲ್ಲಿಯೆ ಪ್ರಪ್ರಥಮವಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಶ್ರೀಕ್ಷೇತ್ರ ಧರ್ಮಸ್ಥಳ ವಿರುದ್ಧ ಸಂಚು ಹೂಡುತ್ತಿರುವ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಧರ್ಮಸ್ಥಳ ಅಭಿಮಾನಿಗಳ ವೇದಿಕೆ ಆಗಸ್ಟ್ 20ರಂದು ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ ಎಂದು ವೇದಿಕೆ ಸದಸ್ಯ, ತಾಲೂಕು ಪಿಎಲ್ ಡಿ ಬ್ಯಾಂಕ್ ಮಾಜಿ ನಿರ್ದೇಶಕ ಅಕ್ಕಿಹೆಬ್ಬಾಳು ರಘು ತಿಳಿಸದರು.

ಪಟ್ಟಣದ ಮಲ್ಲಿಕಾರ್ಜುನ ಚಾರಿಟೇಬಲ್ ಟ್ರಸ್ಟ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ತೆಂಡೇಕೆರೆ ಸುಕ್ಷೇತ್ರದ ಪೀಠಾಧ್ಯಕ್ಷ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಸುಕ್ಷೇತ್ರ ಕಾಪನಹಳ್ಳಿ ಗವಿಮಠದ ಸ್ವತಂತ್ರ ಚೆನ್ನವೀರ ಸ್ವಾಮೀಜಿ, ಸುಕ್ಷೇತ್ರ ಬೇಬಿ ಮಠದ ಶಿವಬಸವ ಸ್ವಾಮೀಜಿ ನೇತೃತ್ವದಲ್ಲಿ ತಾಲೂಕಿನ ಸಹಸ್ರಾರು ಅಭಿಮಾನಿಗಳು ಪ್ರವಾಸಿ ಮಂದಿರ ವೃತ್ತದಿಂದ ತಾಲೂಕು ಕಚೇರಿಯವರೆಗೂ ಮೆರವಣಿಗೆ ನಡೆಸಿ ತಹಸೀಲ್ದಾರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಲಾಗುವುದು ಎಂದರು.

ಒಂದು ಜವಾಬ್ದಾರಿಯುತ ಸರ್ಕಾರ ಮಾಡಬೇಕಾದ ಕೆಲಸವನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ. ಇಂದು ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಲು ಶ್ರೀಕ್ಷೇತ್ರದ ಕೊಡುಗೆ ದೊಡ್ಡದು. ರೈತರ ನೆರವಿಗೆ ಧಾರ್ಮಿಕ ಸಂಸ್ಥೆಯೊಂದು ಕೆಲಸ ಮಾಡುತ್ತಿರುವುದು ಇಡೀ ದೇಶದಲ್ಲಿಯೆ ಪ್ರಪ್ರಥಮವಾಗಿದೆ ಎಂದರು.

ಧರ್ಮಸ್ಥಳದ ವಿರುದ್ಧ ಯಾರೋ ಒಬ್ಬ ಮುಸುಕುದಾರಿ ಬಂದು ಹೇಳಿದ ತಕ್ಷಣ ಎಸ್‌ಐಟಿ ತನಿಖೆ ಮಾಡುತ್ತಿರುವುದೆ ತಪ್ಪು. ಕಳೆದ 15 ದಿನಗಳಿಂದ ನೆಲ ಅಗೆಸಿ ಬುರುಡೆ ಬಿಡುತ್ತಿರುವ ಮುಸುಕುದಾರಿಯನ್ನು ಏಕೆ ಬಂಧಿಸಿಲ್ಲ ಎಂದು ರಘು ಕಿಡಿಕಾರಿದರು.

ನಿವೃತ್ತ ಪ್ರಾಂಶುಪಾಲ ಕೆ.ಕಾಳೇಗೌಡ ಮಾತನಾಡಿ ಮಹೇಶ್‌ಶೆಟ್ಟಿ ತಿಮರೋಡಿ ಒಬ್ಬ ನಯವಂಚಕ ಆಸಾಮಿ. ಇನ್ನು ಕೊಟ್ಟ ಕೆಲಸವನ್ನೆ ಸರಿಯಾಗಿ ಮಾಡದೆ ಪೊಲೀಸ್ ಇಲಾಖೆಯನ್ನೆ ಬಿಟ್ಟು ಬಂದು ಧರ್ಮಸ್ಥಳದಲ್ಲಿ ಡ್ರಾಮಾ ಕಂಪೆನಿಯನ್ನು ನಡೆಸುತ್ತಿರುವ ಇವರಿಬ್ಬರೂ ಕೂಡಾ ಧರ್ಮ ಭ್ರಷ್ಟರು ಎಂದು ಆರೋಪಿಸಿದರು.

ಕೆಲ ಯೂ ಟ್ಯೂಬರ್‌ಗಳು ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುತ್ತಿದ್ದಾರೆ. ಇವರೆಲ್ಲರಿಗೂ ಬುದ್ಧಿ ಕಲಿಸುವ ಕೆಲಸವನ್ನು ಸರ್ಕಾರ ಮಾಡುವವರೆವಿಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಇವರಿಗೆ ಆರ್ಥಿಕ ಸಹಕಾರ ನೀಡುತ್ತಿರುವವರ ವಿರುದ್ಧವೂ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಈ ವೇಳೆ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಆರ್‌ಟಿಒ ಮಲ್ಲಿಕಾರ್ಜುನ್, ಮಾಜಿ ಅಧ್ಯಕ್ಷ ಕೆ.ಎಸ್.ರಾಜೇಶ್, ಎಂಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕರಾದ ಎಸ್.ಎಂ.ಚನ್ನಬಸಪ್ಪ, ತೋಂಟಪ್ಪಶೆಟ್ಟಿ, ವೀರಶೈವ ಮಹಾಸಭಾದ ಅಧ್ಯಕ್ಷ ಸುಜೇಂದ್ರಕುಮಾರ್, ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಪ್ರೆಸ್ ಕುಮಾರಸ್ವಾಮಿ, ನಿರಂಜನ, ಸಾವಯವ ಕೃಷಿಕ ಎಚ್.ಕೆ.ಹರೀಶ್, ನಳಿನಿ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ