ದೇಶದ ಅಭಿವೃದ್ಧಿಗಿಂತ ದುರಾಸೆಯ ಅಭಿವೃದ್ಧಿ ಹೆಚ್ಚಾಗಿದೆ

KannadaprabhaNewsNetwork |  
Published : Aug 19, 2025, 01:00 AM IST
೧೮ ವೈಎಲ್‌ಬಿ ೦೧ಯಲಬುರ್ಗಾದ ಸಾಯಿ ಪ್ಯಾಲೇಸ್‌ನಲ್ಲಿ ಹಮ್ಮಿಕೊಂಡಿದ್ದ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಜಿ.ಪಲ್ಲೇದ ಅವರ ಆತ್ಮಕಥನ ಗ್ರಂಥ ಬಿಡುಗಡೆ ಕಾರ್ಯಕ್ರಮವನ್ನು ನಿವೃತ್ತ ನ್ಯಾಯಾಧೀಶ ಎನ್.ಸಂತೋಷ ಹೆಗ್ಡೆ ಉದ್ಘಾಟಿಸಿದರು. | Kannada Prabha

ಸಾರಾಂಶ

ಅಧಿಕಾರ ಎಂದರೆ ಸುಲಿಗೆ ಮಾಡುವುದು ಎಂದರ್ಥ. ಇದೇ ರೀತಿ ಮುಂದುವರಿದರೆ ದೇಶದ ಗತಿ ಏನಾಗುತ್ತೆ? ಇದರಿಂದ ಯುವಕ-ಯುವತಿಯರ ಭವಿಷ್ಯ ಏನಾಗುತ್ತದೆ ಎಂದು ನಿವೃತ್ತ ಲೋಕಾಯುಕ್ತ ಎನ್. ಸಂತೋಷ ಹೆಗ್ಡೆ ಪ್ರಶ್ನಿಸಿದ್ದಾರೆ.

ಯಲಬುರ್ಗಾ:

ದೇಶದ ಅಭಿವೃದ್ಧಿಗಿಂತ ದುರಾಸೆಯ ಅಭಿವೃದ್ಧಿ ಹೆಚ್ಚಾಗಿದೆ. ದುರಾಸೆ ಎನ್ನುವ ರೋಗಕ್ಕೆ ಎಲ್ಲೂ ಮದ್ದು ಇಲ್ಲ ಎಂದು ನಿವೃತ್ತ ಲೋಕಾಯುಕ್ತ ಎನ್. ಸಂತೋಷ ಹೆಗ್ಡೆ ಹೇಳಿದರು.

ಪಟ್ಟಣದ ಸಾಯಿ ಪ್ಯಾಲೇಸ್‌ನಲ್ಲಿ ಪಲ್ಲೇದ ಕುಟುಂಬದಿಂದ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಜಿ. ಪಲ್ಲೇದ ಅವರ ಆತ್ಮಕಥನ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು. ನಾನು ಲೋಕಾಯುಕ್ತಕ್ಕೆ ಬಂದಾಗ ಬಹಳಷ್ಟು ಅನ್ಯಾಯ ಕಂಡಿದ್ದೇನೆ. ಸಮಾಜದಲ್ಲಿ ಈಗ ಪ್ರಾಮಾಣಿಕರಿಗೆ ಬೆಲೆ ಇಲ್ಲದಾಗಿದೆ. ಶ್ರೀಮಂತರಾಗುವುದು, ದೊಡ್ಡ ದೊಡ್ಡ ಹುದ್ದೆಗೆ ಹೋಗುವುದು ತಪ್ಪಲ್ಲ. ಆದರೆ, ಇನ್ನೊಬ್ಬರ ಜೇಬಿಗೆ ಕತ್ತರಿ ಹಾಕಿ ದೊಡ್ಡವರಾಗುವುದು ಮಹಾತಪ್ಪು. ಒಬ್ಬ ರಾಜಕಾರಣಿಯ ಮನೆಯಲ್ಲಿ ದಾಳಿ ವೇಳೆ ₹ ೨೫೨ ಕೋಟಿ ಹಣ ಪತ್ತೆ ಆಗಿತ್ತು. ತೆರಿಗೆ ವಂಚನೆ ಮಾಡಿದ ಹಣವಾಗಿದ್ದು, ವಾಪಸ್ ಅವರಿಗೆ ಬರಲಿಲ್ಲ. ಅಧಿಕಾರಸ್ಥರಿಂದ ನಡೆಯುವ ಭ್ರಷ್ಟಾಚಾರ, ದುರಾಸೆ ಎನ್ನುವ ರೋಗಕ್ಕೆ ಮದ್ದಿಲ್ಲ ಎಂದರು.

೫೦ರ ದಶಕದಲ್ಲಿ ರಾಷ್ಟ್ರದಲ್ಲಿ ಅನೇಕ ಭ್ರಷ್ಟಾಚಾರ ನಡೆದಿವೆ. ಬೋಫೋರ್ಸ್, ಜೀಪ್ ಹಗರಣ, ಕಾಮನ್‌ವೆಲ್ತ್ ಗೇಮ್ಸ್ ಹಗರಣದಲ್ಲಿ ₹೭೦ ಸಾವಿರ ಕೋಟಿ ಕೊಳ್ಳೆ ಹೊಡೆಯಲಾಗಿದೆ. ೨ಜಿ ಹಗರಣದಲ್ಲಿ ₹೧.೭೫ ಲಕ್ಷ ಕೋಟಿ ಹಗರಣ ನಡೆದಿದೆ. ೧೯೬೮ರಲ್ಲಿ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಅಭಿವೃದ್ಧಿಗೆ ₹೧೦೦ ಕಳುಹಿಸಿದರೆ, ೧೫ ಪೈಸೆ ತಲುಪುತ್ತಿತ್ತು ಎಂದಿದ್ದರು. ಅಧಿಕಾರ ಎಂದರೆ ಸುಲಿಗೆ ಮಾಡುವುದು ಎಂದರ್ಥ. ಇದೇ ರೀತಿ ಮುಂದುವರಿದರೆ ದೇಶದ ಗತಿ ಏನಾಗುತ್ತೆ? ಇದರಿಂದ ಯುವಕ-ಯುವತಿಯರ ಭವಿಷ್ಯ ಏನಾಗುತ್ತದೆ? ಎಂದು ಪ್ರಶ್ನಿಸಿದರಲ್ಲದೆ, ಅಧಿಕಾರಸ್ಥರಿಂದ ಭ್ರಷ್ಟಾಚಾರ ನಡೆಯುತ್ತಲೆ ಇದ್ದರೆ ಮುಂದೊಂದು ದಿನ ಜನಸಾಮಾನ್ಯರಿಂದ ಕ್ರಾಂತಿ ನಡೆಯುವುದು ಶತಸಿದ್ಧ ಎಂದು ಭವಿಷ್ಯ ನುಡಿದರು.ಅಂದಿನ ಸಮಾಜದಲ್ಲಿ ಮೌಲ್ಯಗಳಿಗೆ ಬೆಲೆ ಇತ್ತು. ಇಂದು ಮಾನವೀಯತೆ ಎಲ್ಲಿದೆ ಎಂದು ಹುಡುಕಬೇಕಿದೆ. ಹಿರಿಯರು ಇದ್ದುದರಲ್ಲೇ ತೃಪ್ತಿ ಪಡಬೇಕು ಎನ್ನುತ್ತಿದ್ದರು. ಹಿರಿಯರು ಕಟ್ಟಿದ ಮೌಲ್ಯದಿಂದ ತೃಪ್ತಿ ಪಡಬೇಕು. ತೃಪ್ತಿ ಮತ್ತು ಮೌಲ್ಯಗಳನ್ನು ಮಕ್ಕಳಲ್ಲಿ ಅಳವಡಿಸಿದರೆ ಬದಲಾವಣೆ ಸಾಧ್ಯ. ದೇಶದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಬೇಕಾದರೆ ಯುವಕ-ಯುವತಿಯರು ಬದಲಾಗಬೇಕು. ಪಾಲಕರು ಮಕ್ಕಳಿಗೆ ನೈತಿಕತೆಯ ಪಾಠ ಹೇಳಿಕೊಡಬೇಕು. ಬದಲಾವಣೆ ನಮ್ಮಿಂದಲೇ ಬರಬೇಕೆ ಹೊರತು ಇತರರಿಂದಲ್ಲ ಎಂದು ತಿಳಿಯಬೇಕಿದೆ ಎಂದರು.ಈ ವೇಳೆ ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ, ರೋಣದ ಗುಲಗಂಜಿಮಠದ ಗುರುಪಾದ ದೇವರು, ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಎಸ್. ಮಿಟ್ಟಲಕೋಡ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ. ಕಣವಿ, ಸಾಹಿತಿ ಸಿದ್ದು ಯಾಪಲಪರವಿ ಹಾಗೂ ಪಲ್ಲೇದ ಕುಟುಂಬಸ್ಥರು ಇತರರು ಇದ್ದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?