ರಾಜಕಾರಣಿಗಳು, ಉದ್ಯಮಿಗಳು, ಖಾವಿಧಾರಿಗಳನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಮಾಡುತ್ತಿರುವುದು ವರದಿಯಾಗುತ್ತಿದೆ. ಕೂಡಲ ಸಂಗಮದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧದ ಲೈಂಗಿಕ ಕಿರುಕುಳ ಆರೋಪವೂ ಇಂತಹದ್ದೇ ದೊಡ್ಡ ಷಡ್ಯಂತ್ರವಾಗಿದೆ. ಈ ಪ್ರಕರಣವನ್ನು ಉನ್ನತಮಟ್ಟದ ತನಿಖೆಗೆ ಒಪ್ಪಿಸುವಂತೆ ಜೆಡಿಎಸ್ ಮಾಜಿ ಶಾಸಕ, ಪಂಚಮಸಾಲಿ ಮುಖಂಡ ಎಚ್.ಎಸ್. ಶಿವಶಂಕರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
- ಇಡೀ ಪ್ರಕರಣ ಸಮಗ್ರ ತನಿಖೆಗೆ ಒತ್ತಾಯ । ದಾಖಲೆ ಪರಿಶೀಲನೆಗೆ ಮಹಿಳಾ ಆಯೋಗಕ್ಕೆ ಸಲಹೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜಕಾರಣಿಗಳು, ಉದ್ಯಮಿಗಳು, ಖಾವಿಧಾರಿಗಳನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಮಾಡುತ್ತಿರುವುದು ವರದಿಯಾಗುತ್ತಿದೆ. ಕೂಡಲ ಸಂಗಮದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧದ ಲೈಂಗಿಕ ಕಿರುಕುಳ ಆರೋಪವೂ ಇಂತಹದ್ದೇ ದೊಡ್ಡ ಷಡ್ಯಂತ್ರವಾಗಿದೆ. ಈ ಪ್ರಕರಣವನ್ನು ಉನ್ನತಮಟ್ಟದ ತನಿಖೆಗೆ ಒಪ್ಪಿಸುವಂತೆ ಜೆಡಿಎಸ್ ಮಾಜಿ ಶಾಸಕ, ಪಂಚಮಸಾಲಿ ಮುಖಂಡ ಎಚ್.ಎಸ್. ಶಿವಶಂಕರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟದ ಪ್ರವರ್ತಕರಾದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ದೊಡ್ಡ ಷಡ್ಯಂತ್ರವೇ ನಡೆದಿದೆ. ಶ್ರೀಗಳ ಮೇಲೆ ಮಾಡಿರುವ ಲೈಂಗಿಕ ಕಿರುಕುಳದ ಆಪಾದನೆ ಖಂಡಿಸುತ್ತೇನೆ. ಉತ್ತುಂಗದಲ್ಲಿ ಇರುವವರನ್ನು ಗುರಿಯಾಗಿಸಿ, ಹನಿಟ್ರ್ಯಾಪ್ ಮಾಡಿದ್ದನ್ನೂ ನೋಡಿದ್ದೇವೆ ಎಂದರು.
ಹನಿಟ್ರ್ಯಾಪ್ ಪ್ರಕರಣ ಹೆಚ್ಚುತ್ತಿದ್ದು, ಅಂತಹವರು ಗೌರವಕ್ಕೆ ಚ್ಯುತಿ ಬರುತ್ತದೆಂಬ ಭಯದಿಂದಿರುವ ವಾತಾವರಣವಿದೆ. ಮಾನ- ಮರ್ಯಾದೆಗೆ ಅಂಜಿ ಕೆಲ ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲ ಖಾವಿಧಾರಿಗಳು ಪೀಠತ್ಯಾಗ ಮಾಡಿದ್ದಾರೆ. ಇಂತಹ ಅನೇಕ ನಿದರ್ಶನಗಳು ಇವೆ. ಸಮಾಜ ಸೇವೆ ಮಾಡುವವರನ್ನು, ಉತ್ತಮರನ್ನು, ಅಧಿಕಾರಸ್ಥರು, ಪ್ರಭಾವಿಗಳನ್ನೇ ಗುರಿಯಾಗಿಸಿಕೊಂಡು, ಹನಿಟ್ರ್ಯಾಪ್‌ಗೆ ಕೆಡವಲಾಗುತ್ತಿದೆ. ಸರ್ಕಾರ ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ತಪ್ಪು ಮಾಡಿದವರು, ಉಪ್ಪನ್ನು ತಿಂದವರು ನೀರು ಕುಡಿಯಲೇಬೇಕು. ಕೂಡಲ ಸಂಗಮದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಬೆಂಗಳೂರಿನ ಗುಂಪೊಂದು ಆಪಾದನೆ ಮಾಡುತ್ತಿದೆ. ಮಹಿಳಾ ಆಯೋಗಕ್ಕೆ ಸ್ವಾಮೀಜಿ ವಿರುದ್ಧ ಅರ್ಜಿ ಕೊಟ್ಟವರೆ ಕಾಣೆಯಾಗಿದ್ದಾರೆ. ನಡೆ, ಹೋರಾಟವನ್ನು ತೇಜೋವಧೆ ಮಾಡುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಶ್ರೀಗಳ ಮೇಲಿನ ಆಪಾದನೆಗಳ ಬಗ್ಗೆ ಸಮಗ್ರ ತನಿಖೆಯಾಗಲಿ. ಪ್ರಕರಣದಲ್ಲಿ ಅನೇಕರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಸ್ವಾಮೀಜಿ ಏಳಿಗೆ ಸಹಿಸದೇ, ನಮ್ಮ ಸಮಾಜದವರೇ ಯಾರೋ ಈ ಕೆಲಸ ಮಾಡಿದ್ದಾರೆ. ಯಾರ ಹೆಸರನ್ನೂ ಹೇಳಲು ನಾನು ಇಚ್ಛಿಸುವುದಿಲ್ಲ. ಸ್ವಾಮೀಜಿ ವಿರುದ್ಧ ಆಪಾದನೆ ಮಾಡಿದವರಿಗೆ ಮನುಷ್ಯತ್ವ, ಮರ್ಯಾದೆ ಇದ್ದರೆ ತಕ್ಷಣ ತಮ್ಮ ದೂರು ಹಿಂಪಡೆಯಲಿ. ಇಲ್ಲವೇ, ನಿಮ್ಮ ಬಳಿ ಇರುವ ದಾಖಲೆಗಳನ್ನು ನೀಡಿ, ಸತ್ಯವನ್ನು ಹೊರಹಾಕಿ. ಆದರೆ, ಸ್ವಾಮೀಜಿ ಬದುಕನ್ನು ನಾಶಪಡಿಸುವ, ತೇಜೋವಧೆ ಮಾಡುವ, ಕಳಂಕ ತರುವ ಕೆಲಸ ಮಾಡಬೇಡಿ ಎಂದು ಅವರು ತಿಳಿಸಿದರು.
ಎಐ ತಂತ್ರಜ್ಞಾನ ಬಂದ ನಂತರ ಕುಳಿತವರನ್ನು ಮಲಗಿಸುತ್ತಾರೆ, ಮಲಗಿದವರನ್ನು ಕೂಡಿಸುವಂತಹ ಕೆಲಸವಾಗುತ್ತಿದೆ. ಇದರಿಂದ ಅನಾಹುತ ಹೆಚ್ಚುತ್ತಿವೆ. ತಂತ್ರಜ್ಞಾನ ಬಳಸಿ, ಸ್ವಾಮೀಜಿ, ಪೀಠಕ್ಕೆ ಕೆಟ್ಟ ಹೆಸರು ತರುವ ಕೆಲಸ ನಡೆದಿದೆ. ಅನ್ಯ ಸಮಾಜದ ಮುಂದೆ ತಲೆತಗ್ಗಿಸುವಂತಹ ಕೆಲಸ ಕೆಲವರು ಮಾಡಿದ್ದಾರೆ. ನಮ್ಮ ಕೂಡಲ ಸಂಗಮದ ಪೀಠದ ಹೆಸರನ್ನು ಹಾಳು ಮಾಡುವ ದುಷ್ಟಶಕ್ತಿಗಳಿಗೆ ಕಡಿವಾಣ ಹಾಕಬೇಕು. ಹನಿಟ್ರ್ಯಾಪ್, ಬ್ಲ್ಯಾಕ್ ಮೇಲ್ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಹಿಳಾ ಆಯೋಗಕ್ಕೆ ಮನವಿ:
ದೂರುದಾರಳ ಊರು ಒಮ್ಮೆ ಬೆಂಗಳೂರು, ಮತ್ತೊಮ್ಮೆ ವಿಜಯಪುರ, ಬೆಳಗಾವಿ ಎಂಬುದಾಗಿ ತೋರಿಸುತ್ತಿದ್ದು, ಸರ್ಕಾರ ಇಂತಹ ವಿಷಯಗಳನ್ನು ಹಗುರವಾಗಿ ತೆಗೆದುಕೊಳ್ಳಬಾರದು. ದಾಖಲೆ ಇಲ್ಲದೇ ಕೇಸ್ ದಾಖಲಿಸಿಕೊಳ್ಳಬಾರದು. ಮಹಿಳಾ ಆಯೋಗದ ಅಧ್ಯಕ್ಷರಿಗೂ ಮನವಿ ಮಾಡುತ್ತೇನೆ. ಯಾರಾದರೂ ಅರ್ಜಿ ಕೊಟ್ಟ ತಕ್ಷಣವೇ ಅದನ್ನೇ ದೊಡ್ಡದಾಗಿ ಬಿಂಬಿಸುವುದು ಬೇಡ. ದಾಖಲೆ, ಸಾಕ್ಷ್ಯಗಳ ಸತ್ಯಾಸತ್ಯತೆ ಪರಿಶೀಲಿಸಬೇಕು. ಯಾವುದೇ ಮಹಿಳೆಗೂ ಅನ್ಯಾಯ ಆಗಬಾರದು. ಸತ್ಯ ಹೊರಬರಲಿ. ಆಯೋಗ ಒಮ್ಮೆ ಗಂಭೀರವಾಗಿ ಕೆಲಸ ಮಾಡಿದರೆ, ಮತ್ತೊಮ್ಮೆ ಸಾಫ್ಟ್ ಆಗಿ ಬಿಹೇವ್ ಮಾಡುತ್ತದೆ. ಇಂತಹ ದ್ವಿಮುಖ ಧೋರಣೆ ಏಕೆ ಎಂದು ಎಚ್.ಎಸ್. ಶಿವಶಂಕರ ಪ್ರಶ್ನಿಸಿದರು.
ಸಮಾಜದ ಯುವ ಘಟಕದ ರಾಜ್ಯಾಧ್ಯಕ್ಷ, ಮಾಜಿ ಮೇಯರ್ ಬಿ.ಜಿ. ಅಜಯಕುಮಾರ, ಗಂಗಾಧರ ಕಾರಿಗನೂರು, ವಕೀಲ ಯೋಗೇಶ, ಶಿವಾನಂದ, ಎಂ.ಜಿ. ಪರಮೇಶ್ ಗೌಡ, ಭರತ್ ಇತರರು ಇದ್ದರು.
- - -
(ಬಾಕ್ಸ್)
* ಕಾಶೆಪ್ಪನೋರ ಬಗ್ಗೆ ಮಾತಾಡೋ ಶಕ್ತಿ ಇಲ್ಲ ಪಂಚಮಸಾಲಿ ಸಮಾಜ ಎಲ್ಲೋ ಒಂದು ಕಡೆ ನೋವಿನಲ್ಲಿದೆ. ನಾವೆಲ್ಲರೂ ಸತ್ಯ, ಧರ್ಮ, ನ್ಯಾಯದ ಪರವಾಗಿ ಇರುವಂತಹವರು. ಸರ್ಕಾರ ಜವಾಬ್ದಾರಿಯುತ ಅಧಿಕಾರಿಗಳನ್ನು ಪ್ರಕರಣದ ತನಿಖೆಗೆ ನೇಮಿಸಬೇಕು. ಪಾರದರ್ಶಕ ತನಿಖೆಗೆ ಸರ್ಕಾರ ಮುಂದಾಗಬೇಕು. ಬೆಂಕಿ ಇಲ್ಲದೇ ಹೊಗೆ ಆಯಾಡುವುದಿಲ್ಲವೆಂಬ ಶಾಸಕ ವಿಜಯಾನಂದ ಕಾಶೆಪ್ಪನವರ ಹೇಳಿದ್ದಾರೆ. ಕಾಶೆಪ್ಪನವರು ಸಮಾಜದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಅಂತಹವರ ಬಗ್ಗೆ ಮಾತನಾಡುವ ಶಕ್ತಿ ನಮಗ್ಯಾರಿಗೂ ಇಲ್ಲ. ಕಾಶೆಪ್ಪನವರ್ ಸಹ ಪಾರದರ್ಶಕ ತನಿಖೆಗೆ ಸಹಕರಿಸಲಿ. ಅದನ್ನು ಬಿಟ್ಟು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಬಾರದು ಎಂದು ಎಚ್.ಎಸ್. ಶಿವಶಂಕರ ಹೇಳಿದರು.
- - -
(ಕೋಟ್) ದೂರುದಾರ ಮಹಿಳೆಗೆ ₹3 ಕೋಟಿಗಳನ್ನು ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ನೀಡಿದ್ದಾರೆಂಬ ಚರ್ಚೆ ನಡೆಯುತ್ತಿದೆ. ನಮ್ಮ ಸ್ವಾಮೀಜಿ ಹಣ ಮಾಡಿಲ್ಲ. ಐಷಾರಾಮಿ ಮಠವನ್ನೂ ಕಟ್ಟಿಲ್ಲ. ರಾಜ್ಯ ಪೊಲೀಸ್ ಇಲಾಖೆ ಮೇಲೆ ನಮಗೆ ವಿಶ್ವಾಸವಿದೆ. ಇಡೀ ಪ್ರಕರಣ ಬಗ್ಗೆ ಸಮಗ್ರ ತನಿಖೆಯಾಗಿ, ಸತ್ಯಾಸತ್ಯತೆ ಹೊರಬರಲಿ. - ಎಚ್.ಎಸ್.ಶಿವಶಂಕರ, ಪಂಚಮಸಾಲಿ ಮುಖಂಡ, ಮಾಜಿ ಶಾಸಕ.
- - -
-11ಕೆಡಿವಿಜಿ1, 2:
ದಾವಣಗೆರೆಯಲ್ಲಿ ಶನಿವಾರ ಜೆಡಿಎಸ್ ಮಾಜಿ ಶಾಸಕ, ಪಂಚಮಸಾಲಿ ಸಮಾಜ ಮುಖಂಡ ಎಚ್.ಎಸ್.ಶಿವಶಂಕರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.