ಹಗರಿಬೊಮ್ಮನಹಳ್ಳಿ: ಮತ ಪರಿಷ್ಕರಣೆ ನೆಪದಲ್ಲಿ ಸಂವಿಧಾನದ ಅಡಿಪಾಯವನ್ನೇ ಬುಡಮೇಲು ಮಾಡುವ, ದೇಶದ ೧೨ ಕೋಟಿಗೂ ಹೆಚ್ಚು ಜನರನ್ನು ಮತದಾನದಿಂದ ಹೊರಗಿಡುವ ಸಂಚನ್ನು ಎಸ್‌ಐಆರ್ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಾಚರಣೆಗೆ ಇಳಿದಿದ್ದಾರೆ ಎಂದು ರೈತ ಸಂಘದ ರಾಜ್ಯ ಕಾರ್ಯಾದ್ಯಕ್ಷ ಜೆ.ಎಂ. ವೀರಸಂಗಯ್ಯ ವಾಗ್ದಾಳಿ ನಡೆಸಿದರು.ರಾಜ್ಯದ ಪ್ರಗತಿಪರ ಸಂಘಟನೆಗಳು, ಜಾತ್ಯತೀತ ಪಕ್ಷಗಳ ಒಕ್ಕೂಟ ಹಮ್ಮಿಕೊಂಡಿರುವ ಎಸ್‌ಐಆರ್ ವಿರೋಧಿ ಜನ ಜಾಗೃತಿ ಜಾಥಾ ಬುಧವಾರ ಪಟ್ಟಣಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಹಗರಿ ಆಂಜನೇಯ ದೇವಸ್ಥಾನದ ಬಳಿ ಆಯೋಜಿಸಲಾಗಿದ್ದ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು.
ಎಸ್‌ಐಆರ್ ಎನ್ನುವುದು ದುರುದ್ದೇಶಪೂರಿತ ರಾಜಕೀಯ ಬುಲ್ಡೋಜರ್. ಈ ಮೂಲಕ ದೇಶದ ಜನತೆಯ ಜನ್ಮಸಿದ್ಧ ಮತದಾನದ ಹಕ್ಕನ್ನು ಕಸಿಯುವ, ಇಸ್ರೇಲಿನ ರೀತಿ ಮತದಾನದ ಹಕ್ಕಿಲ್ಲದ, ಯಾವುದೇ ಸರ್ಕಾರಿ ಸೌಲಭ್ಯವಿಲ್ಲದ ಎರಡನೇ ದರ್ಜೆಯ ಬೃಹತ್ ಜನ ವರ್ಗವನ್ನು ಸೃಷ್ಟಿಸುವ ಸಂಚಾಗಿದೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ, ರಾಜ್ಯವನ್ನು ಉಳಿಸಲು ವಿಶೇಷ ಅಧಿವೇಶನ ಕರೆದು ಮುಕ್ತ ಚರ್ಚೆ ನಡೆಸಿ ಪರಿಣಾಮಕಾರಿಯಾದ ದಿಟ್ಟ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಜಿಪಂ ಮಾಜಿ ಸದಸ್ಯರಾದ ಅಕ್ಕಿ ತೋಟೇಶ್, ಹೆಗ್ಡಾಳು ರಾಮಣ್ಣ, ಮಹಿಳಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಸಾಹಿರಾಬಾನು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋರಿ ಗೋಣಿಬಸಪ್ಪ, ಪುರಸಭೆ ಮಾಜಿ ಅಧ್ಯಕ್ಷ ಮರಿರಾಮಣ್ಣ, ಅಂಬೇಡ್ಕರ್ ಸಂಘದ ದೊಡ್ಡಬಸಪ್ಪ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಪಿ. ದೇವರಾಜ್, ಸಾಹಿತಿ ಹುರಕಡ್ಲಿ ಶಿವಕುಮಾರ್ ಎಸ್‌ಐಆರ್ ಪ್ರಕ್ರಿಯೆ ವಿರೋಧಿಸಿ ಮಾತನಾಡಿದರು.