;Resize=(412,232))
ಬೆಂಗಳೂರು : ತಮ್ಮ ಬದುಕಿಗೆ ಅಡ್ಡಿಯಾಗಿದ್ದಾರೆ ಎಂದು ಭಾವಿಸಿ ಹೆತ್ತವರು ಹಾಗೂ ಸೋದರಿ ಕೊಲೆಗೆ ಎರಡು ಬಾರಿ ಶ್ವೇತಾ ಹಾಗೂ ಆಕೆಯ ಪ್ರಿಯಕರ ರೂಪಿಸಿದ್ದ ಸಂಚು ವಿಫಲವಾಗಿತ್ತು ಎಂಬ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ.
ಪುದುಚೇರಿಯಲ್ಲಿ ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನೆತ್‌ನನ್ನು ಬಂಧಿಸಿದ ಬಳಿಕ ನಗರಕ್ಕೆ ಕರೆತಂದು ಕೆ.ಆರ್.ಪುರ ಠಾಣೆ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ತಮ್ಮ ಸಂಚಿನ ಕುರಿತು ಪೂರ್ಣ ಚಿತ್ರಣವನ್ನು ಇಬ್ಬರು ಬಾಯ್ಬಿಟ್ಟಿದ್ದು, ಹತ್ಯೆಗೂ ಮುನ್ನ ಎರಡು ಬಾರಿ ಸಂಚು ವಿಫಲವಾಗಿದ್ದ ಸಂಗತಿ ಬಯಲಾಗಿದೆ ಎಂದು ತಿಳಿದು ಬಂದಿದೆ.
ಸೀಗೇನಹಳ್ಳಿ ಸಮೀಪದ ತಮ್ಮ ಅಪಾರ್ಟ್‌ಮೆಂಟ್‌ಗೆ ಬಂದ ತಂದೆ ಸೋಮಸುಂದರ್, ತಾಯಿ ಮುತ್ತುಲಕ್ಷ್ಮೀ ಹಾಗೂ ತಂಗಿ ಸುಪ್ರಿಯಾ ಅವರನ್ನು ಸೋಮವಾರ ರಾತ್ರಿ ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನೆತ್ ಹತ್ಯೆಗೈದಿದ್ದರು. ಬಳಿಕ ಪುದುಚೇರಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಸ್ಥಳೀಯ ಪೊಲೀಸರ ನೆರವಿನಿಂದ ಬಂಧಿಸಿ ಕೆ.ಆರ್.ಪುರ ಪೊಲೀಸರು ಕರೆತಂದು ವಿಚಾರಣೆಗೊಳಪಡಿಸಿದ್ದಾರೆ.
2.5 ವರ್ಷಗಳಿಂದ ಶ್ವೇತಾ ಹಾಗೂ ಕೆನೆತ್ ಲಿವಿಂಗ್ ಟುಗೆದರ್‌ನಲ್ಲಿ ಸೀಗೇನಹಳ್ಳಿ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ ಉಳಿಸಿದ್ದ 10 ಲಕ್ಷ ರು. ಹಾಗೂ ತಾಯಿ ಹೆಸರಿನಲ್ಲಿ 20 ಲಕ್ಷ ರು. ಸಾಲ ಸೇರಿ ಒಟ್ಟು ಪ್ರಿಯಕರನಿಗೆ 30 ಲಕ್ಷ ರು. ಹಣವನ್ನು ಶ್ವೇತಾ ನೀಡಿದ್ದಳು. ಈ ಹಣದ ಬಗ್ಗೆ ಶ್ವೇತಾ ಹೆತ್ತವರಿಂದ ಆಕ್ಷೇಪ ವ್ಯಕ್ತವಾಗಿತ್ತು. ಈ ಮೊದಲು ತಮ್ಮ ಪ್ರೀತಿಗೆ ವಿರೋಧಿಸಿದ್ದ ಶ್ವೇತಾ ತಂದೆ ಹಾಗೂ ತಾಯಿ ಮೇಲೆ ಕೆನೆತ್ ಸಿಟ್ಟಿತ್ತು. ಈಗ ಹಣಕಾಸು ವಿಚಾರವಾಗಿ ಅವರು ಬೈದಿದ್ದು ಮತ್ತಷ್ಟು ಆತನ್ನನ್ನು ರೊಚ್ಚಿಗೇಳಿಸಿತು. ತಮ್ಮ ಬದುಕಿಗೆ ಅಡ್ಡಿಯಾಗಿರುವ ಶ್ವೇತಾ ಹೆತ್ತವರ ಕೊಲೆಗೆ ಕೆನೆತ್ ತೀರ್ಮಾನಿಸಿದ್ದ. ಇದಕ್ಕೆ ಶ್ವೇತಾ ಸಹ ಸಮ್ಮತಿಸಿದ್ದಳು ಎಂದು ಮೂಲಗಳು ‘ಕನ್ನಡಪ್ರಭ’ ಮಾಹಿತಿ ನೀಡಿವೆ.
ಅಂತೆಯೇ 2 ಬಾರಿ ಕೊಲೆಗೆ ಯತ್ನಿಸಿ ಕೆನೆತ್ ವಿಫಲನಾಗಿದ್ದಾನೆ. ಈ ನಡುವೆ ಸಾಲ ಪಾವತಿಸದ ಕಾರಣಕ್ಕೆ ಶ್ವೇತಾ ತಾಯಿ ಮುತ್ತುಲಕ್ಷ್ಮೀ ಅವರಿಗೆ ಬ್ಯಾಂಕ್‌ನಿಂದ ನೋಟಿಸ್ ಜಾರಿಯಾಗಿದ್ದವು. ಈ ನೋಟಿಸ್ ಬಗ್ಗೆ ಮಗಳಿಗೆ ಕರೆ ಮಾಡಿ ಅವರು ಕೇಳಿದಾಗ ಜಗಳವಾಗಿತ್ತು. ಆಗ ತಾನೇ ನಿಮ್ಮ ಮನೆಗೆ ಬಂದು ಮಾತನಾಡುತ್ತೇನೆ ಎಂದಿದ್ದರು. ಅದರಂತೆ ಮಗಳ ಫ್ಲ್ಯಾಟ್‌ಗೆ ಭಾನುವಾರ ಮುತ್ತುಲಕ್ಷ್ಮೀ ಬಂದಿದ್ದರು. ಆ ರಾತ್ರಿ ಮಗಳ ಮನೆಯಲ್ಲೇ ಅವರು ತಂಗಿದ್ದರು. ಇದಾದ ನಂತರ ಆಕೆಯ ಮನೆಗೆ ಸೋಮವಾರ ರಾತ್ರಿ ತಂದೆ ಸೋಮಸುಂದರ್ ಹಾಗೂ ತಂಗಿ ಸುಪ್ರಿಯಾ ತೆರಳಿದ್ದರು. ಆಗ ಹಣಕಾಸು ವಿಷಯಕ್ಕೆ ಜಗಳವಾಗಿ ಮೊದಲು ತಾಯಿ ಬಳಿಕ ತಂದೆ ಹಾಗೂ ತಂಗಿಯನ್ನು ಪ್ರಿಯಕರನ ಜತೆ ಸೇರಿ ಶ್ವೇತಾ ಹತ್ಯೆ ಮಾಡಿದ್ದಳು. ಈ ಮೂವರಿಗೆ ಕೆನೆತ್ ಚಾಕು ಇರಿದಿದ್ದಾನೆ. ಆತನಿಗೆ ಮೃತರ ಮಗಳು ನೆರವಾಗಿದ್ದಳು ಎಂದು ಮೂಲಗಳು ವಿವರಿಸಿವೆ.