ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರಿಗೆ ಅನ್ಯಾಯ ಮಾಡಿದ್ದರಿಂದಲೇ ಈ ಬಾರಿ ಕೇಂದ್ರ ಬಿಜೆಪಿ ಸ್ವತಂತ್ರ ಆಡಳಿತಕ್ಕೆ ಬರಲು ಸಾಧ್ಯವಾಗಲಿಲ್ಲ. ಜತೆಗೆ ಜಾತಿ ಧರ್ಮದ ಮಧ್ಯೆ ಕೋಮುವಾದಗಳನ್ನು ಸೃಷ್ಟಿಸಿ ಜನರನ್ನು ದಾರಿ ತಪ್ಪಿಸಿ ಅಧಿಕಾರದ ಗದ್ದುಗೆ ಹಿಡಿದಿದ್ದಾರೆ ವಿನಃ ಸಂಪೂರ್ಣ ಜನಮತದಿಂದ ಅಧಿಕಾರಕ್ಕೆ ಬಂದಿಲ್ಲ ಎಂಬುವುದನ್ನು ಅರ್ಥೈಸಿಕೊಳ್ಳಬೇಕು. ಸಿಎಂ ಸಿದ್ದರಾಮಯ್ಯನವರನ್ನು ನೇರವಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಎದುರಿಸಲು ಸಾಧ್ಯವಾಗುತ್ತಿಲ್ಲ. ಹಿಂಬಾಗಿಲಿನಿಂದ ಅಧಿಕಾರ ಹಿಡಿಯುವ ಹವಣಿಕೆ ಈ ಹಿಂದೆಯೂ ಇತ್ತು, ಈಗಲೂ ಇದೆ. ಈಗ ಸಿದ್ದರಾಮಯ್ಯನವರ ಹೆಸರು ಹಾಳು ಮಾಡಿದರೇ ಮುಂದೆ ಬಿಜೆಪಿಗೆ ಅನುಕೂಲ ಆಗುತ್ತೆಂಬ ದುರುದ್ದೇಶದಿಂದ ಈ ರೀತಿ ಸಂಚು ರೂಪಿಸುತ್ತಿದ್ದಾರೆ. ಇದರಿಂದ ಸಿಎಂ ಸಿದ್ದರಾಮಯ್ಯನವರ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಸಮಸ್ಯೆಯ ಮಾತೇ ಇಲ್ಲ ಎಂದರು.ರಾಜ್ಯದ ಜನರು ಕಾಂಗ್ರೆಸ್ ಸರ್ಕಾರಕ್ಕೆ ಸಂಪೂರ್ಣ ಬಹುಮತ ಕೊಟ್ಟಿದ್ದಾರೆ. ಮುಂದಿನ 4 ವರ್ಷ ಈ ರಾಜ್ಯದ ಜನರ ಸೇವೆ ಮಾಡುವ ಅವಕಾಶವನ್ನು ಜನರು ಕೊಟ್ಟಿದ್ದಾರೆ. ಯಾರೂ ಏನೇ ತಿಪ್ಪರಲಗಾ ಹಾಕಿದರೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯರ ಪಾತ್ರ ಇಲ್ಲವೆಂದು ಗೊತ್ತಿದ್ದರೂ ಹೆಸರಿಗೆ ಕಳಂಕ ತರಲು ಷಡ್ಯಂತ್ರ ರೂಪಿಸಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ ಎಂದು ದೂರಿದರು. ಸದ್ಯ ನಮ್ಮ ಸರ್ಕಾರವೇನು ಕೈಕಟ್ಟಿ ಕುಳಿತಿಲ್ಲ. ಸದ್ಯದಲ್ಲಿಯೇ ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಬಿಜೆಪಿಯವರ ಮಾಡಿರುವ ಬ್ರಹ್ಮಾಂಡ ಭ್ರಷ್ಟಾಚಾರ ಬಗ್ಗೆ ಎಳೆ ಎಳೆಯಾಗಿ ನಮ್ಮ ಸರ್ಕಾರ ತನಿಖೆ ಕೈಗೊಳ್ಳಲಿದೆ. ಆಗ ಭ್ರಷ್ಟಾಚಾರಿಗಳ್ಯಾರು, ಜನಸೇವಕ ಯಾರು ಎಂಬುವುದು ಸ್ಪಷ್ಟವಾಗಲಿದೆ ಎಂದರು.
ಕೋಟ್...ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಬಾರದು ಸಂವಿಧಾನ ಬದ್ಧ ನಿಲುವು ಕೈಗೊಳ್ಳಬೇಕು. ಸಿದ್ದರಾಮಯ್ಯನವರಿಗೆ ನೋಟಿಸ್ ಕೊಡುವ ಮುಂಚೆ ತನಿಖೆಯ ಅಂಶಗಳ ಬಗ್ಗೆ ಪರಾಮರ್ಶಿಸಿ ತೀರ್ಮಾನ ಕೈಗೊಳ್ಳಬೇಕಿತ್ತು. ಆದರೆ, ಯಾರೋ ಒಬ್ಬರು ಮನವಿ ಕೊಟ್ಟಕೂಡಲೇ ಒಬ್ಬ ಹಿಂದುಳಿದ ಸಮಾಜದ ಜನಪ್ರಿಯ ಮುಖ್ಯಮಂತ್ರಿಗಳಿಗೆ ಶೊಕಾಸ್ ನೋಟಿಸ್ ನೀಡಿದ್ದು ಸರಿಯಲ್ಲ.
-ಸಿ.ಎಸ್.ನಾಡಗೌಡ(ಅಪ್ಪಾಜಿ), ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರು.