ಅನಧಿಕೃತ ಕೋಚಿಂಗ್ ಸೆಂಟರ್‌ಗಳಿಗೆ ಅಧಿಕಾರಿಗಳು ಸಾಥ್

KannadaprabhaNewsNetwork | Published : Aug 8, 2024 1:33 AM

ಸಾರಾಂಶ

ಶಹಾಪುರ ತಾಲೂಕಿನಲ್ಲಿ ಅನಧಿಕೃತ ಕೋಚಿಂಗ್ ಸೆಂಟರ್‌ ಹಾಗೂ ವಸತಿ ಶಾಲೆಗಳನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ನಮ್ಮ ಕರ್ನಾಟಕ ಸೇನೆ ವತಿಯಿಂದ ಪ್ರತಿಭಟನೆ ನಡೆಸಿ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ತಾಲೂಕಿನಲ್ಲಿ ಅನಧಿಕೃತ ಕೋಚಿಂಗ್ ಸೆಂಟರ್‌ಗಳು ಶಾಲೆ ಪರವಾನಿಗೆ ಪಡೆದು ಅಕ್ರಮವಾಗಿ ವಸತಿ ಶಾಲೆಗಳನ್ನು ನಡೆಸುತ್ತಿರುವವರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಂಡು ಆಡಳಿತ ಮಂಡಳಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಒತ್ತಾಯಿಸಿ ನಮ್ಮ ಕರ್ನಾಟಕ ಸೇನೆಯ ವತಿಯಿಂದ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಂಘಟನೆಯ ರಾಜ್ಯ ಸಂಚಾಲಕ ಭೀಮಣ್ಣ ಶಖಾಪುರ, ಈ ಅಕ್ರಮಗಳನ್ನು ನಿಯಂತ್ರಿಸಬೇಕಾದ ಶಿಕ್ಷಣ ಇಲಾಖೆ ಅಧಿಕಾರಿಗಳು ಕೆಲ ರಾಜಕೀಯ ಪ್ರಭಾವಿಗಳ ರಕ್ತ ಸಂಬಂಧಿಕರು ಹಾಗೂ ಹಿಂಬಾಲಕರ ಕೃಪಾಕಟಾಕ್ಷದಿಂದ ನಡೆಸುವ ಕೇಂದ್ರಗಳಿಗೆ ಮಣಿದು, ಕಣ್ಣು, ಕಿವಿ, ಬಾಯಿ ಮುಚ್ಚಿಕೊಂಡು ತಮಗರಿವೇ ಇಲ್ಲದಂತೆ ಮೌನವಾಗಿದ್ದಾರೆ. ಅಲ್ಲದೆ ಸರಕಾರಿ ಶಾಲೆಯಲ್ಲಿ ಓದುತ್ತಿರುವ ಕೆಲ ಮಕ್ಕಳು ಕೋಚಿಂಗ್ ಸೆಂಟರ್‌ನಲ್ಲಿ ಕಲಿಯುತ್ತಿದ್ದಾರೆ. ಹಾಜರಾತಿ ಹಾಕಲು ಒಪ್ಪದ ಶಿಕ್ಷಕರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಮಾನಸಿಕ ಹಿಂಸೆ ನೀಡುತ್ತಾರೆ. ಶಿಕ್ಷಕರು ವಿಧಿ ಇಲ್ಲದೆ ಹಾಜರಾತಿ ಹಾಕಲು ಒಪ್ಪಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ತಾಲೂಕಿನಲ್ಲಿ 16 ಕ್ಕೂ ಹೆಚ್ಚು ಖಾಸಗಿ ಶಾಲೆಗಳಲ್ಲಿ ಅಕ್ರಮ ಕೋಚಿಂಗ್ ಹಾಗೂ ವಸತಿ ಶಾಲೆಗಳು ನಡೆಯುತ್ತಿವೆ. ಕಾಟಚಾರಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನೆಪ ನಡೆಸಿ ಇಲಾಖೆ ಕಣ್ಣಿಗೆ ಮಣ್ಣೆರಿಸಿದ್ದಾರೆ ಎಂದು ದೂರಿದರು. ಸಂಘಟನೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಧರಣಿ ನಿರತ ಸ್ಥಳಕ್ಕೆ ಆಗಮಿಸಿ ಖಾಸಗಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಒಂದು ತಿಂಗಳ ಒಳಗಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರಿಂದ ಧರಣಿ ವಾಪಸ್ ಪಡೆದರು.

ಈ ವೇಳೆ ತಾಲೂಕಾಧ್ಯಕ್ಷ ಸಿದ್ದು ಪಟ್ಟೇದಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶ್ರೀದೇವಿ ಕಟ್ಟಿಮನಿ, ನಿಂಗಣ್ಣ ಗೌಡ ಬಿರಾದಾರ್, ಶಕಮೀರ್ ಕನ್ಯಾಕೊಳೂರು, ಅಂಬ್ರೇಶ ತೆಲಗೂರ, ಸಂಗಮೇಶ ರಾಜಾಪುರ, ಶಶಿಪಾಲರೆಡ್ಡಿ ಪಾಟೀಲ್, ಶಾಂತಯ್ಯ ಗುತ್ತೇದಾರ, ಬಾಪುಗೌಡ, ಚಂದು ಹುಲಿಗಿ ಏವೂರ, ರಾಜು ಗುಂಡಗುರ್ತಿ, ನಭಿ ಪಟೇಲ್ ರಾಜಾಪುರ, ಕಿರಣ್ ಗುಂಟ್ನೂರು ಇತರರಿದ್ದರು.

Share this article