ಪೇದೆ ಪರಶುರಾಮ್‌ಗೆ ಜಿಲ್ಲಾ ಪೊಲೀಸ್‌ನಿಂದ ಮಿಡಿದ ಕಂಬನಿ

KannadaprabhaNewsNetwork | Published : Apr 28, 2025 12:45 AM

ಸಾರಾಂಶ

ಹನೂರು ತಾಲೂಕಿನ ರಾಮಾಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಪೇದೆ ಪರಶುರಾಮ್ ಹೃದಯಾಘಾತದಿಂದ ಮೃತಪಟ್ಟ ಹಿನ್ನೆಲೆ ಕುಟುಂಬದವರಿಗೆ ಜಿಲ್ಲೆಯ ಪೊಲೀಸ್ ಇಲಾಖೆಯ ಸ್ನೇಹಿತರ ಬಳಗದ ವತಿಯಿಂದ ಒಂದುವರೆ ಲಕ್ಷ ರೂಪಾಯಿ ಸಹಾಯ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ರಾಮಾಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ವೇಳೆ ಹೃದಯಘಾತದಿಂದ ಮೃತಪಟ್ಟಿದ್ದ ಪರಶುರಾಮ್ ಕುಟುಂಬದವರಿಗೆ ಜಿಲ್ಲೆಯ ಪೊಲೀಸ್ ಇಲಾಖೆಯ ಸ್ನೇಹಿತರ ಬಳಗದ ವತಿಯಿಂದ ಒಂದುವರೆ ಲಕ್ಷ ರುಪಾಯಿ ಸಹಾಯ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ ಕಂಬನಿ ಮಿಡಿದಿದ್ದಾರೆ.

ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಹಾಲಬಾವಿ ಗ್ರಾಮದ ಪರಶುರಾಮ್ ಅವರು ಕಳೆದ 9 ವರ್ಷಗಳಿಂದ ಚಾ.ನಗರ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕಳೆದ ಮೂರು ವರ್ಷಗಳಿಂದ ಹನೂರು ತಾಲೂಕಿನ ರಾಮಾಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಕಳೆದ ಮೂರು ತಿಂಗಳಿನಿಂದ ಎಸ್ ಬಿ ಕರ್ತವ್ಯ ಮಾಡುತ್ತಿದ್ದರು ಶನಿವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಹೃದಯಘಾತವಾಗಿ ಕೆಳಗೆ ಬಿದ್ದಿದ್ದಾಗ ಇವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದರು.

ಇವರ ಕುಟುಂಬದವರಿಗೆ ಪರಶುರಾಮ್ ಆಧಾರ ಸ್ತಂಭವಾಗಿದ್ದರು, ಏಕಾಏಕಿ ಹೃದಯಘಾತದಿಂದ ಮೃತಪಟ್ಟ ಹಿನ್ನೆಲೆ ಬನ್ನೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮನೋಜ್ ಕುಮಾರ್ 5 ಸಾವಿರ, ಇನ್ಸ್‌ಪೆಕ್ಟರ್ ಶೇಖರ್ ೫ ಸಾವಿರ ಸೇರಿದಂತೆ 200ಕ್ಕೂ ಹೆಚ್ಚು ಪೊಲೀಸ್ ಇಲಾಖೆಯ ಸ್ನೇಹಿತರು ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿ ₹1,56,800 ಲಕ್ಷ ಹಣವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಇನ್ಸ್‌ಪೆಕ್ಟರ್‌ಗಳಾದ ಮನೋಜ್ ಕುಮಾರ್, ಶೇಖರ್ ಜೊತೆ ಹಲವು ವರ್ಷಗಳ ಕಾಲ ಪರಶುರಾಮ್ ಕರ್ತವ್ಯ ನಿರ್ವಹಿಸಿದ್ದ ಹಿನ್ನೆಲೆ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿದ್ದಾರೆ, ಇವರ ಈ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಸ್ಪಿಯಿಂದ ಅಂತಿಮ ದರ್ಶನ:

ಹೃದಯಘಾತದಿಂದ ಮೃತಪಟ್ಟಿದ್ದ ಪರಶುರಾಮ್ ಅವರ ಅಂತಿಮ ದರ್ಶನವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ ಟಿ ಕವಿತಾ ಹಾಗೂ ಹಿರಿಯ ಅಧಿಕಾರಿಗಳು ಪಡೆದ ನಂತರ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಇನ್ನು ಅಂತಿಮ ವಿಧಿವಿಧಾನ ಮಾಡಲು ಸ್ವಗ್ರಾಮ ರಾಯಚೂರು ಜಿಲ್ಲೆಗೆ ಮೃತ ದೇಹವನ್ನು ಕೊಂಡೊಯ್ಯಲು ಪೊಲೀಸ್ ಇಲಾಖೆ ವತಿಯಿಂದಲೇ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು.ಕಂಬನಿ ಮಿಡಿದ ಸ್ನೇಹಿತರು:

ಕಳೆದ 9 ವರ್ಷಗಳಿಂದ ಚಾಮರಾಜನಗರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಪರಶುರಾಮರವರು ಸಹೋದ್ಯೋಗಿಗಳ ಜೊತೆ ಆತ್ಮೀಯದಿಂದಲೇ ಇರುತ್ತಿದ್ದರು. ಹೃದಯಾಘಾತದಿಂದ ಏಕಾಏಕಿ ಮೃತಪಟ್ಟ ಹಿನ್ನೆಲೆ ಪ್ರತಿಯೊಬ್ಬ ಸ್ನೇಹಿತರು ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಕಂಬನಿ ಮಿಡಿದಿದ್ದಾರೆ.

ಪರಶುರಾಮ್ ಅಂತ್ಯಸಂಸ್ಕಾರದಲ್ಲಿ ರಾಯಚೂರು ಜಿಲ್ಲಾ ಪೊಲೀಸರು ಭಾಗವಹಿಸಿ ಗೌರವ ಸಲ್ಲಿಸಿದ್ದಾರೆ. ಪರಶುರಾಮ್ ಅವರ ಸ್ವಗ್ರಾಮಕ್ಕೆ ರಾಮಪುರ ಪೊಲೀಸ್ ಠಾಣೆಯ ಎಎಸ್ಐ ಗುರುಸ್ವಾಮಿ ಮುಖ್ಯ ಪೇದೆಗಳಾದ ಗಿರೀಶ್, ಪೇದೆ ರಾಜು, ಕರಿಯಪ್ಪ ಸೇರಿದಂತೆ ಸಿಬ್ಬಂದಿ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಪರಶುರಾಮ್ ತಾಯಿರವರಿಗೆ ಪೊಲೀಸರು ನೀಡಿದ್ದ ಹಣವನ್ನು ಹಸ್ತಾಂತರಿಸಿದ್ದಾರೆ.

Share this article