ಪೇದೆ ನೇಮಕ ಎಕ್ಸಾಂ: ಹಳೇ ಗ್ಯಾಂಗ್‌ ಮೇಲೆ ಕಣ್ಣು!

KannadaprabhaNewsNetwork |  
Published : Jul 19, 2026, 03:00 AM ISTUpdated : Jul 19, 2026, 11:52 AM IST
Umesh Kumar

ಸಾರಾಂಶ

ಪೊಲೀಸ್ ಕಾನ್‌ಸ್ಟೇಬಲ್‌ ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಗೆ ಒಂದೂವರೆ ತಿಂಗಳ ಮುನ್ನವೇ ಹಳೇ ಪರೀಕ್ಷಾ ಹಗರಣಗಳ ದಂಧೆಕೋರರು ಹಾಗೂ ಕಳಂಕಿತ ಕೋಚಿಂಗ್ ಸೆಂಟರ್‌ಗಳ ಚಲನವಲನಗಳ ಮೇಲೆ ಬಿಗಿ ಕಣ್ಗಾವಲಿಡುವಂತೆ ಅಧಿಕಾರಿಗಳಿಗೆ ರಾಜ್ಯ ಪೊಲೀಸ್ ನೇಮಕಾತಿ ವಿಭಾಗದ ಡಿಜಿಪಿ ಆದೇಶ ಹೊರಡಿಸಿದ್ದಾರೆ.

ಗಿರೀಶ್ ಮಾದೇನಹಳ್ಳಿ

 ಬೆಂಗಳೂರು :  ಪೊಲೀಸ್ ಕಾನ್‌ಸ್ಟೇಬಲ್‌ ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಗೆ ಒಂದೂವರೆ ತಿಂಗಳ ಮುನ್ನವೇ ಹಳೇ ಪರೀಕ್ಷಾ ಹಗರಣಗಳ ದಂಧೆಕೋರರು ಹಾಗೂ ಕಳಂಕಿತ ಕೋಚಿಂಗ್ ಸೆಂಟರ್‌ಗಳ ಚಲನವಲನಗಳ ಮೇಲೆ ಬಿಗಿ ಕಣ್ಗಾವಲಿಡುವಂತೆ ಅಧಿಕಾರಿಗಳಿಗೆ ರಾಜ್ಯ ಪೊಲೀಸ್ ನೇಮಕಾತಿ ವಿಭಾಗದ ಡಿಜಿಪಿ ಆದೇಶ ಹೊರಡಿಸಿದ್ದಾರೆ.

ಸಬ್ ಇನ್‌ಸ್ಪೆಕ್ಟರ್ ನೇಮಕಾತಿ ಹಗರಣದ ಐದು ವರ್ಷ ಬಳಿಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹೊಸ ನೇಮಕಾತಿ ಪರ್ವ ಶುರುವಾಗಿದ್ದು, ಇದರ ಹೊಣೆಗಾರಿಕೆ ಮತ್ತೆ ಪೊಲೀಸ್ ನೇಮಕಾತಿ ವಿಭಾಗದ ಹೆಗಲಿಗೆ ಬಿದ್ದಿದೆ.

ಕಳೆದ ಬಾರಿ ನೇಮಕಾತಿ ಸಂಬಂಧ ರಾಷ್ಟ್ರಮಟ್ಟದಲ್ಲಿ ಇಲಾಖೆಯ ಗೌರವಕ್ಕೆ ಧಕ್ಕೆ ಉಂಟಾದ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಮತ್ತೆ ಅಕ್ರಮಗಳಿಗೆ ಅಸ್ಪದ ನೀಡದಂತೆ ಮುಂಜಾಗ್ರತೆ ವಹಿಸಿರುವ ನೇಮಕಾತಿ ವಿಭಾಗದ ಡಿಜಿಪಿ ಉಮೇಶ್ ಕುಮಾರ್ ಅವರು, ಸೆಪ್ಟೆಂಬರ್‌ ತಿಂಗಳಲ್ಲಿ ಮೂರು ಹಂತಗಳಲ್ಲಿ ನಡೆಯಲಿರುವ 8 ಸಾವಿರ ಕಾನ್‌ಸ್ಟೇಬಲ್‌ ನೇಮಕಾತಿ ಲಿಖಿತ ಪರೀಕ್ಷೆ ಮುನ್ನ ಹಳೇ ಪರೀಕ್ಷಾ ದಂಧೆಕೋರರ ಮೇಲೆ ಕಣ್ಗಾವಲಿಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಸಂಬಂಧ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ)ಗಳಿಗೆ ಮಾರ್ಗಸೂಚಿ ನೀಡಿದ್ದಾರೆ.

ತನಿಖೆ ನಡೆಸಿದವರೇ ನೇಮಕಾತಿ ಮುಖ್ಯಸ್ಥರು:

ಐದು ವರ್ಷಗಳ ಹಿಂದೆ 545 ಸಿವಿಲ್ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿಯಲ್ಲಿ ಭಾರಿ ಅಕ್ರಮ ಬೆಳಕಿಗೆ ಬಂದಿತ್ತು. ಈ ಕೃತ್ಯದಲ್ಲಿ ಆಗಿನ ನೇಮಕಾತಿ ವಿಭಾಗದ ಮುಖ್ಯಸ್ಥ ಹಾಗೂ ಎಡಿಜಿಪಿ ಅಮೃತ್ ಪಾಲ್ ಸೇರಿ ಅಧಿಕಾರಿಗಳ ವಿರುದ್ಧ ಆರೋಪ ಬಂದಿತ್ತು. ಈ ಹಗರಣ ದೇಶದಲ್ಲೇ ಪೊಲೀಸ್ ನೇಮಕಾತಿಯಲ್ಲಿ ಮುಕ್ತ ಹಾಗೂ ಪ್ರಾಮಾಣಿಕತೆಗೆ ಹೆಸರಾಗಿದ್ದ ರಾಜ್ಯ ಪೊಲೀಸ್ ಇಲಾಖೆಯ ಹಿರಿಮೆಗೆ ಕಳಂಕ ಮೆತ್ತಿಕೊಳ್ಳುವಂತೆ ಮಾಡಿತ್ತು. ಇದಾದ ಬಳಿಕ ಅಂದು ತಡೆಹಿಡಿಯಲಾಗಿದ್ದ 545 ಹಾಗೂ 420 ಪಿಎಸ್‌ಐ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಪೊಲೀಸ್ ನೇಮಕಾತಿ ವಿಭಾಗದ ಬದಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸರ್ಕಾರ ವಹಿಸಿತ್ತು. ನಂತರ ಹೊಸ ನೇಮಕಾತಿ ಸಹ ಸ್ಥಗಿತವಾಯಿತು. ಈಗ ಐದು ವರ್ಷಗಳ ಬಳಿಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹೊಸ ನೇಮಕಾತಿ ಆರಂಭವಾಗಿದೆ. ಅಲ್ಲದೆ ಅಂದು ಪಿಎಸ್ಐ ನೇಮಕಾತಿ ಹಗರಣದ ರಾಜ್ಯ ಪೊಲೀಸ್ ತನಿಖಾ ಇಲಾಖೆ (ಸಿಐಡಿ)ಯ ತನಿಖಾ ತಂಡದ ಸಾರಥ್ಯವಹಿಸಿದ್ದ ಡಿಜಿಪಿ ಉಮೇಶ್ ಕುಮಾರ್ ಅವರೇ, ಇಂದು ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಹೀಗಾಗಿ ತಾವೇ ಪತ್ತೆ ಹಚ್ಚಿದ್ದ ಅಕ್ರಮಗಳು ಮತ್ತೆ ಮರುಕಳಿಸದಂತೆ ಪ್ರತಿ ಹಂತದಲ್ಲೂ ಅವರು ಮುಂಜಾಗ್ರತೆ ವಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಡಿಜಿಪಿ ಸೂಚನೆಗಳಿವು?:

1.ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿ ಅಕ್ರಮಗಳು ನಡೆಯದಂತೆ ಬಿಗಿಯಾದ ಭದ್ರತಾ ವ್ಯವಸ್ಥೆ ರೂಪಿಸಬೇಕು. ಹಳೇ ಪರೀಕ್ಷಾ ಹಗರಣಗಳ ಆರೋಪಿಗಳು ಹಾಗೂ ಶಂಕಿತರ ಚಲನವನಗಳ ಮೇಲೆ ಹದ್ದಿನ ಕಣ್ಗಾವಲಿಟ್ಟು ಅವರ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಅಲ್ಲದೆ, ಅಗತ್ಯವಿದ್ದರೆ ಕೆಲವರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆಯಬಹುದು.

2.ಶಂಕಾಸ್ಪದ ಚಟುವಟಿಕೆಗಳು ನಡೆಸುವ ಕೋಚಿಂಗ್ ಸೆಂಟರ್‌ಗಳ ಮೇಲೂ ನಿಗಾ ಇಡಬೇಕು. ಈ ಹಿಂದೆ ಪರೀಕ್ಷಾ ಅಕ್ರಮಗಳಲ್ಲಿ ಕೆಲ ಕೋಚಿಂಗ್ ಸೆಂಟರ್‌ಗಳ ಪಾತ್ರ ಪತ್ತೆಯಾಗಿದೆ. ಹೀಗಾಗಿ ಪರೀಕ್ಷೆಯಲ್ಲಿ ನೆರವಾಗುವುದಾಗಿ ನಂಬಿಸಿ ಹಣ ಪಡೆದು ಅಭ್ಯರ್ಥಿಗಳಿಗೆ ಕೆಲವರು ತರಬೇತಿ ನೀಡಬಹುದು. ಇಂಥ ಸುಳ್ಳು ಭರವಸೆ ನೀಡಿ ಪರೀಕ್ಷಾ ಅಕ್ರಮಕ್ಕೆ ಯತ್ನಿಸುವ ಕೇಂದ್ರಗಳು ಹಾಗೂ ವ್ಯಕ್ತಿಗಳ ಕುರಿತು ಹೆಚ್ಚಿನ ಗಮನಹರಿಸಬೇಕು.

3.ಪರೀಕ್ಷೆಗೂ ಮುನ್ನ ಸುಳ್ಳು ವದಂತಿ ಹಬ್ಬುವ ಸಾಧ್ಯತೆಗಳಿರುತ್ತದೆ. ಹೀಗಾಗಿ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಟ್ಟು ಸುಳ್ಳು ಸುದ್ದಿ ಹರಡುವವರ ಮೇಲೆ ಕ್ರಮ ಜರುಗಿಸಬೇಕು. ಅಲ್ಲದೆ, ಈ ಸಂಬಂಧ ಸ್ಥಳೀಯ ಮಟ್ಟದಿಂದ ಗುಪ್ತ ಮಾಹಿತಿ ಸಂಗ್ರಹಿಸಿ ಮುಂಜಾಗ್ರತಾ ಕ್ರಮಗಳನ್ನು ಜರುಗಿಸಬೇಕು.

ಸೆಪ್ಟೆಂಬರ್‌ನಲ್ಲಿ 3 ಹಂತದ ಪರೀಕ್ಷೆ

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಿವಿಲ್‌, ನಗರ ಸಶಸ್ತ್ರ (ಸಿಆರ್‌) ಹಾಗೂ ರಾಜ್ಯ ಸಶಸ್ತ್ರ ಮೀಸಲು ಪಡೆ (ಕೆಎಸ್‌ಆರ್‌ಪಿ) ವಿಭಾಗಗಳಿಗೆ 8 ಸಾವಿರ ಕಾನ್‌ಸ್ಟೇಬಲ್‌ಗಳ ನೇಮಕಾತಿಗೆ ಇಲಾಖೆ ಪ್ರಕ್ರಿಯೆ ಆರಂಭವಾಗಿದೆ. ಸೆ.2ರಂದು ಸಿವಿಲ್‌, ಸೆ.6 ಸಶಸ್ತ್ರ ಮೀಸಲು ಪಡೆ ಹಾಗೂ ಸೆ.20ರಂದು ಕೆಎಸ್‌ಆರ್‌ಪಿ ಕಾನ್‌ಸ್ಟೇಬಲ್‌ ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪೊಲೀಸ್ ನೇಮಕಾತಿಯಲ್ಲಿ ಅಕ್ರಮಗಳ ತಡೆಗೆ ಮುಂಜಾಗ್ರತೆವಹಿಸಲಾಗಿದ್ದು, ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಹೊಣೆಗಾರಿಕೆ ನೀಡಲಾಗಿದೆ. ಕಾನೂನುಬಾಹಿರ ಕೃತ್ಯ ನಡೆದರೆ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಲಾಗುತ್ತದೆ.

-ಉಮೇಶ್ ಕುಮಾರ್, ಡಿಜಿಪಿ, ರಾಜ್ಯ ಪೊಲೀಸ್ ನೇಮಕಾತಿ ವಿಭಾಗ 253 ಪಿಎಸ್ಐ ಹುದ್ದೆಗಳು

ಕಾನ್‌ಸ್ಟೇಬಲ್‌ಗಳ ಬಳಿಕ ಸಬ್ ಇನ್‌ಸ್ಪೆಕ್ಟರ್‌ ನೇಮಕಾತಿಗೆ ರಾಜ್ಯ ಹಸಿರು ನಿಶಾನೆ ತೋರಿದೆ. ಈ ಬೆನ್ನಲ್ಲೇ 253 ಪಿಎಸ್‌ಐ ಹುದ್ದೆಗಳ ಭರ್ತಿಗೆ ಪೊಲೀಸ್ ಇಲಾಖೆ ಮುಂದಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗೆ ಬಿಲ್ಡರ್‌ಗಳು ಎಲ್ಲಾ ದಾಖಲೆ ನೀಡಬೇಕು
ಸಂಪುಟಕ್ಕೆ ಈಗ ಕೋಟಾ ಸಂಕಟ ! - ರಾಜ್ಯದಿಂದ 3, ವರಿಷ್ಠರಿಂದ 2 ಪಟ್ಟಿ