ಗುರಿ ಮುಟ್ಟಲು ನಿರಂತರ ಶ್ರಮ ಅಗತ್ಯ: ಜಿ. ಮಲ್ಲಿಕಾರ್ಜುನ್

KannadaprabhaNewsNetwork | Published : Sep 17, 2024 12:49 AM

ಸಾರಾಂಶ

ಮಕ್ಕಳು ತಮ್ಮ ಗುರಿ ಸಾಧಿಸಲು ಚಿಕ್ಕ ವಯಸ್ಸಿನಿಂದಲೇ ಶ್ರಮ ಹಾಕಬೇಕಿದೆ ಎಂದು ಮುಂಬೈನ ಸಂಜಯಗಾಂಧಿ ನ್ಯಾಷನಲ್ ಪಾರ್ಕ್ ನಿರ್ದೆಶಕ, ಅರಣ್ಯ ಇಲಾಖೆ ಮುಖ್ಯ ಅಧೀಕ್ಷಕ ಜಿ. ಮಲ್ಲಿಕಾರ್ಜುನ್ ಮಕ್ಕಳಿಗೆ ಕಿವಿ ಮಾತು ಹೇಳಿದರು.

ಕನ್ನಡಪ್ರಭವಾರ್ತೆ ಹೊಳಲ್ಕೆರೆಮಕ್ಕಳು ತಮ್ಮ ಗುರಿ ಸಾಧಿಸಲು ಚಿಕ್ಕ ವಯಸ್ಸಿನಿಂದಲೇ ಶ್ರಮ ಹಾಕಬೇಕಿದೆ ಎಂದು ಮುಂಬೈನ ಸಂಜಯಗಾಂಧಿ ನ್ಯಾಷನಲ್ ಪಾರ್ಕ್ ನಿರ್ದೆಶಕ, ಅರಣ್ಯ ಇಲಾಖೆ ಮುಖ್ಯ ಅಧೀಕ್ಷಕ ಜಿ. ಮಲ್ಲಿಕಾರ್ಜುನ್ ಮಕ್ಕಳಿಗೆ ಕಿವಿ ಮಾತು ಹೇಳಿದರು.ಹೊಳಲ್ಕೆರೆ ಪಟ್ಟಣದ ಸ್ನೇಹ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ಶೈಕ್ಷಣಿಕ ಪ್ರಗತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಂದು ಬೀಜವನ್ನು ಹಾಕಿ ಅದಕ್ಕೆ ಸರಿಯಾದ ರೀತಿಯಲ್ಲಿ ಪೋಷಣೆ ಮಾಡಿದರೆ ಅದು ಮುಂದಿನ ದಿನದಲ್ಲಿ ದೊಡ್ಡ ಮರವಾಗಲಿದೆ. ಅದೇ ರೀತಿ ದೇಶದ ಮುಂದಿನ ಭಾವಿ ಪ್ರಜೆಗಳಿಗೆ, ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡಿದರೆ ಉತ್ತಮ ಪ್ರಜೆಗಳಾಗುವುದರಲ್ಲಿ ಸಂದೇಹ ಇಲ್ಲವೆಂದರು.ಜೀವನ ಎಂದ ಮೇಲೆ ಸುಖ-ಕಷ್ಟಗಳು ಬರುವುದು ಸಾಮಾನ್ಯ. ಇದೇ ರೀತಿ ಶೈಕ್ಷಣಿಕ ವಾತಾವರಣದಲ್ಲಿಯೂ ಸಹಾ ಏಳು-ಬೀಳು ಬರುವುದು ಸಾಮಾನ್ಯ. ಕಷ್ಟ ಬಂದಾಗ ಎಂದೆಗುಂದದೆ ಧೈರ್ಯದಿಂದ ಎದುರಿಸಬೇಕಿದೆ. ಕೆಲಸವನ್ನು ಪ್ರಾಮಾಣಿಕ, ನಿಷ್ಠೆಯಿಂದ ಮಾಡಿದರೆ ಜೀವನದಲ್ಲಿ ಯಶಸ್ಸು ದೊರಕಲು ಸಾಧ್ಯವಿದೆ. ನಿಮ್ಮ ಸಾಧನೆಯ ಹಿಂದೆ ನಿಮ್ಮ ಪೋಷಕರು, ಶಿಕ್ಷಕರ ಶ್ರಮ ಇದೆ. ಅದನ್ನು ಮರೆಯಬೇಡಿ ಎಂದರು. ಶಿಕ್ಷಣ ಮಹಾ ವಿದ್ಯಾಲಯದ ಉಪನ್ಯಾಸಕ ಹಾಲೇಶ್ ಮಾತನಾಡಿ, ನಮ್ಮ ಪಾಲಿಗೆ ಬಂದಿರುವ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕಿದೆ. ನಮಗೆ ಆಸಕ್ತಿ ಇರುವ ವಿಷಯದ ಕಡೆಗೆ ಹೆಚ್ಚಿನ ಗಮನವನ್ನು ನೀಡುವುದರ ಮೂಲಕ ಸಾಧನೆ ಮಾಡಿ. ಮುಂದೆ ನಾನೇನಾಗಬೇಕು ಎಂದು ಈಗಲೇ ತೀರ್ಮಾನಿಸಿ ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳಿ ಎಂದು ಮಕ್ಕಳಿಗೆ ತಿಳಿ ಹೇಳಿದರು.ಸ್ನೇಹ ಪಬ್ಲಿಕ್ ಶಾಲೆಯ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಇಂದಿನ ಪೋಷಕರು ನಮ್ಮ ಮಕ್ಕಳು ಇಂಜಿನಿಯರ್ ಡಾಕ್ಟರ್ ಆಗಬೇಕೆಂದು ಕನಸು ಕಾಣುತ್ತಾರೆ. ಅದರೆ ಇವುಗಳನ್ನು ಬಿಟ್ಟು ಬೇರೆ ಕನಸುಗಳಿದ್ದು ಅವುಗಳ ಕಡೆ ಗಮನ ಹರಿಸಬೇಕು. ಮುಂದೆ ನಾನೇನಾಗಬೇಕು ಎಂದು ಈಗಿನಿಂದಲೇ ನಿರ್ಧಾರ ಮಾಡುವಂತೆ ಕರೆ ನೀಡಿದರು.

ದಾವಣಗೆರೆ ವಿವಿಧ ಸಹಾಯಕ ಪ್ರಾಧ್ಯಾಪಕರಾದ ಡಾ. ಪ್ರಸನ್ನ, ಸ್ನೇಹ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ವಸಂತ್, ಆಡಳಿತಾಧಿಕಾರಿ ಛಾಯಾ ಮಂಜುನಾಥ್ ಉಪಸ್ಥಿತರಿದ್ದರು. ನಯನ ಪ್ರಾರ್ಥಿಸಿದರೆ, ಪ್ರಾಂಶುಪಾಲ ವೇಣುಗೋಪಾಲ್ ಸ್ವಾಗತಿಸಿದರು.

Share this article