ಪ್ರವಾಹ ಬಗ್ಗೆ ನಿರಂತರ ನಿಗಾ, ಮುನ್ನೆಚ್ಚರಿಕೆ ವಹಿಸಿ: ಡಿಸಿ ಜಾನಕಿ

KannadaprabhaNewsNetwork |  
Published : Jun 14, 2024, 01:07 AM IST
ಬಾಗಲಕೋಟೆಯ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ  ಅಧ್ಯಕ್ಷೆ ವಹಿಸಿದ್ದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹಾಗೂ ಜಿಲ್ಲೆಯ ಇತರ ಅಧಿಕಾರಿಗಳು | Kannada Prabha

ಸಾರಾಂಶ

ಬಾಗಲಕೋಟೆ ಜಿಲ್ಲೆಯಲ್ಲಿ ಮುಂಗಾರು ಮಳೆ ಪ್ರಾರಂಭಗೊಂಡಿದ್ದು, ಪ್ರವಾಹ ಉಂಟಾಗುವ ಸಾಧ್ಯತೆ ಕಂಡುಬಂದಲ್ಲಿ ಆ ಬಗ್ಗೆ ನಿರಂತರ ನಿಗಾವಹಿಸುವುದರ ಜೊತೆಗೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಡಿಸಿ ಜಾನಕಿ ಕೆ.ಎಂ. ಸೂಚಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ಜಿಲ್ಲೆಯಲ್ಲಿ ಮುಂಗಾರು ಬಳೆ ಪ್ರಾರಂಭಗೊಂಡಿದ್ದು, ಪ್ರವಾಹ ಉಂಟಾಗುವ ಸಾಧ್ಯತೆ ಕಂಡುಬಂದಲ್ಲಿ ಆ ಬಗ್ಗೆ ನಿರಂತರ ನಿಗಾವಹಿಸುವುದರ ಜೊತೆಗೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಅವರು ಅಧಿಕಾರಿಗಳಿಗೆ ಸೂಚಿಸಿದರು.ಬಾಗಲಕೋಟೆಯ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿಯೊಂದು ಇಲಾಖೆಗಳು ಪ್ರವಾಹ ನಿಯಂತ್ರಣ ಕುರಿತು ಕೈಗೊಳ್ಳಬೇಕಾದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ತಾಲೂಕುವಾರು ನೋಡಲ್ ಅಧಿಕಾರಿಗಳನ್ನು ನೇಮಿಸಿ, ಪ್ರವಾಹ ಬಾಧಿತ ಗ್ರಾಮಗಳಲ್ಲಿ ಹವಾಮಾನದ ಮುನ್ನೆಚ್ಚರಿಕೆ ಕ್ರಮ, ಚರಂಡಿ ಸ್ವಚ್ಛತೆ ಕೈಗೊಂಡು ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು ಎಂದು ಹೇಳಿದರು.

ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ತಾಲೂಕಾವಾರು ಶಿಥಿಲಾವಸ್ಥೆಯಲ್ಲಿರುವ ಶಾಲಾ-ಕಾಲೇಜು ಹಾಗೂ ವಸತಿ ನಿಲಯಗಳಲ್ಲಿ ಗುರುತಿಸದ ಕಾಳಜಿ ಕೇಂದ್ರಗಳಲ್ಲಿ ಅಗತ್ಯ ಮೂಲ ಸೌಲಭ್ಯಗಳು ಇರುವ ಬಗ್ಗೆ ಮಾಹಿತಿ ನೀಡಬೇಕು. ಒಟ್ಟು ಜಿಲ್ಲೆಯಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟ ಹಾಗೂ ಬಾಡಿಗೆ ಕಟ್ಟಡಗಳ ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೆ ಶೆಡ್‌ ಗಳಲ್ಲಿ ಅಂಗನವಾಡಿ ನಡೆಸಬಾರದೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬೋಟ್ ಗಳನ್ನು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಂಡು ತಾಲೂಕುವಾರು ನಾವಿಕರ ಮಾಹಿತಿ, ರಕ್ಷಣಾ ಸಾಮಗ್ರಿಗಳ ವಿವರ, ತರಬೇತಿ ಪಡೆದ ನುರಿತ ಸಿಬ್ಬಂದಿ ಮಾಹಿತಿ ಇಟ್ಟುಕೊಂಡು ಪ್ರವಾಹ ಸಂಭವಿಸಿದಲ್ಲಿ ನಿಯಂತ್ರಣ ಕಾರ್ಯಕ್ಕೆ ಸಜ್ಜಾಗಿರಬೇಕು. ಲೋಕೋಪಯೋಗಿ ಇಲಾಖೆಯವರು ರಸ್ತೆ ಮೇಲೆ ನೀರು ನಿಲ್ಲದ ಹಾಗೆ ಕ್ರಮವಹಿಸಬೇಕು. ಪ್ರವಾಹ ಬಾಧಿತ ಗ್ರಾಮಗಳಲ್ಲಿ ಅಗ್ನಿಶಾಮಕ ದಳದಿಂದ ಅಣಕು ಪ್ರದರ್ಶನ ಕಾರ್ಯ ಕೈಗೊಳ್ಳಲು ಸೂಚಿಸಿದರು.

ಪ್ರತಿ ತಾಲೂಕುವಾರು ವಿಪತ್ತು ನಿರ್ವಹಣೆ ಪ್ರಾಧಿಕಾರದ ಸಭೆ ನಡೆಸಿ ಮನೆ ಹಾನಿ, ಸಿಡಿಲು ಬಡಿತದಿಂದಾದ ಸಾವು-ನೋವು ಮಾಹಿತಿಯನ್ನು ಪಡೆದು ಪರಿಹಾರಕ್ಕೆ ಕ್ರಮ ವಹಿಸಬೇಕು. ಸ್ವಯಂಕೃತವಾಗಿ ಮಾಡುವ ತಪ್ಪುಗಳಿಗೆ ಅಧಿಕಾರಿಗಳೇ ಜವಾಬ್ದಾರರು. ಮುಂಜಾಗ್ರತೆ ಕುರಿತು ಈವರೆಗೆ ಮಾಹಿತಿ ನೀಡದ ಇಲಾಖೆಗಳು 24 ಗಂಟೆಯೊಳಗಾಗಿ ಮಾಹಿತಿ ನೀಡಬೇಕು. ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಜಿಲ್ಲೆಯಲ್ಲಿ ಮುಂಗಾರು ಮಳೆ ಉತ್ತಮವಾಗಿದ್ದು, ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚಳವಾದ ಬಗ್ಗೆ ಪರೀಕ್ಷೆ ಮಾಡಬೇಕು. ಒಂದು ವೇಳೆ ಅಂತರ್ಜಲ ಮಟ್ಟ ಹೆಚ್ಚಾಗಿದ್ದರೆ, ಆ ಭಾಗದಲ್ಲಿ ಖಾಸಗಿ ಕೊಳವೆ ಬಾವಿಗಳಿಂದ ಪಡೆಯುತ್ತಿರುವ ನೀರನ್ನು ಸ್ಥಗಿತಗೊಳಿಸಿ ಸರ್ಕಾರಿ ಬೋರವೆಲ್‌ ಗಳಿಂದ ನೀರು ಪೂರೈಸಲು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ, ಪ್ರವಾಹ ಉಂಟಾಗುವ ಸಂದರ್ಭದಲ್ಲಿ ಸಾವು ಸಂಭವಿಸದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ವಹಿಸಬೇಕು. ಸಮಸ್ಯೆ ಕಂಡುಬಂದಲ್ಲಿ ತಕ್ಷಣ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸುವಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಇವರ ಜೊತೆಗೆ ಸಂಬಂಧಿಸಿದ ಇಲಾಖೆಯವರು ಹಾಜರಾಗಬೇಕು. ಒಂದು ಕುಟುಂಬದ ಸದಸ್ಯರಾಗಿ ಕೆಲಸ ನಿರ್ವಹಿಸುವ ಕಾರ್ಯವಾಗಬೇಕು. ಮನೆ ಬಿದ್ದಾಗ ತಕ್ಷಣ ಅಧಿಕಾರಿಗಳು ಧಾವಿಸಬೇಕು. ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿಗಳನ್ನು ಗುರುತಿಸಿ ಮಕ್ಕಳು ಸುರಕ್ಷಿತವಾಗಿ ಇರುವಂತೆ ಮಾಡಬೇಕು. ಯಾವುದೇ ರೀತಿಯ ಅನಾಹುತವಾಗದಂತೆ ಮುಂಜಾಗ್ರತಾ ಕ್ರಮವಹಿಸಲು ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಕಳ್ಳೇನ್ನವರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರವೀಂದ್ರ ಹಕಾಟೆ, ಲೋಕೋಪಯೋಗಿ ಇಲಾಖೆ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ರಾಜಶೇಖರ ಕಡಿವಾಲರ, ನಗರಸಭೆ ಪೌರಾಯುಕ್ತ ವಾಸಣ್ಣ ಆರ್. ತಹಸೀಲ್ದಾರ್ ಅಮರೇಶ ಪಮ್ಮಾರ ಸೇರಿದಂತೆ ಆಯಾ ತಾಲೂಕಿನ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಪತ್ತು ಸಂದರ್ಭದಲ್ಲಿ ಹೆಲ್ಪ್‌ಲೈನ್ ಇಲ್ಲಿದೆ

ಮುಂಗಾರು ಮಳೆ ಮತ್ತು ವಿಪತ್ತು ನಿರ್ವಹಣೆಯ ತುರ್ತು ಸಂದರ್ಭದಲ್ಲಿ ವಿವಿಧ ಸಮಸ್ಯೆಗಳಿಗೆ ಸ್ಪಂಧಿಸುವ ನಿಟ್ಟಿನಲ್ಲಿ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ ಸಹಾಯವಾಣಿ (1077), ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಹಾಯವಾಣಿ (112), ಹೆಸ್ಕಾಂ ಸಹಾಯವಾಣಿ (1912), ಅಗ್ನಿಶಾಮಕ ದಳ ಸಹಾಯವಾಣಿ (101), ಅರಣ್ಯ ಇಲಾಖೆ ಸಹಾಯವಾಣಿ (1926) ಗೆ ಕರೆ ಮಾಡಬಹುದಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ