ಮುಖ್ಯಮಂತ್ರಿ ವಿರುದ್ಧ ಸಂಸದರ ನಿರಂತರ ವಾಗ್ದಾಳಿ: ಕಾಂಗ್ರೆಸ್ ಶಾಸಕರ ಮೌನ

KannadaprabhaNewsNetwork | Published : Mar 12, 2024 2:01 AM

ಸಾರಾಂಶ

ಅನಂತಕುಮಾರ ಹೆಗಡೆ ಅವರು ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪರವಾಗಿ ಪ್ರಚಾರಕ್ಕೇ ಬರಲಿಲ್ಲ. ಹೋಗಲಿ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಒಂದು ಹೇಳಿಕೆಯನ್ನೂ ನೀಡಲಿಲ್ಲ.

ಕಾರವಾರ: ಒಂದೆಡೆ ಸಂಸದ ಅನಂತಕುಮಾರ ಹೆಗಡೆ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದರೆ, ಜಿಲ್ಲೆಯ ಕೆಲ ಕಾಂಗ್ರೆಸ್ ಶಾಸಕರು ದಿವ್ಯ ಮೌನ ತಾಳಿದ್ದಾರೆ. ಲೋಕಸಭೆ ಚುನಾವಣೆಗೆ ಟಿಕೆಟ್‌ ನೀಡಿಕೆ ತನಕ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.

ಅನಂತಕುಮಾರ ಹೆಗಡೆ ಅವರು ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪರವಾಗಿ ಪ್ರಚಾರಕ್ಕೇ ಬರಲಿಲ್ಲ. ಹೋಗಲಿ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಒಂದು ಹೇಳಿಕೆಯನ್ನೂ ನೀಡಲಿಲ್ಲ. ಹಾಗಂತ ಅನಂತಕುಮಾರ ಹೆಗಡೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಈ ಶಾಸಕರೆಲ್ಲ ಹೆಗಡೆ ಅವರನ್ನು ಬೆಂಬಲಿಸಿದ್ದರು. ಆದರೂ ಅನಂತಕುಮಾರ್ ಬಿಜೆಪಿ ಅಭ್ಯರ್ಥಿಗಳ ಬೆಂಬಲಕ್ಕೆ ನಿಲ್ಲಲಿಲ್ಲ. ಕಾರವಾರದಲ್ಲಿ ರೂಪಾಲಿ ನಾಯ್ಕ, ಶಿರಸಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ, ಹಳಿಯಾಳದಲ್ಲಿ ಸುನೀಲ ಹೆಗಡೆ ಅಲ್ಪ ಮತಗಳ ಅಂತರದಿಂದ ಸೋಲನ್ನು ಅನುಭವಿಸಿದರು. ಕುಮಟಾದಲ್ಲಿ ಬಿಜೆಪಿಯ ದಿನಕರ ಶೆಟ್ಟಿ ಅತ್ಯಲ್ಪ ಮತಗಳ ಅಂತರದಿಂದ ಹಾಗೂ ಯಲ್ಲಾಪುರದಲ್ಲಿ ಶಿವರಾಮ ಹೆಬ್ಬಾರ್ ಅಲ್ಪ ಮತಗಳಿಂದ ಗೆದ್ದರು. ಅನಂತಕುಮಾರ ಹೆಗಡೆ ಚುನಾವಣೆ ಸಂದರ್ಭದಲ್ಲಿ ನಿಷ್ಕ್ರಿಯವಾಗಿ ಉಳಿಯುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಸಹಾಯ ಮಾಡಿದ್ದಾರೆ. ಈಗ ಅನಂತಕುಮಾರ ಹೆಗಡೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದಲ್ಲಿ ಅವರಿಗೆ ಋಣ ಸಂದಾಯ ಮಾಡಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ವಿಧಾನಸಭೆ ಚುನಾವಣೆಯ ನಂತರ ಕಾರವಾರಕ್ಕೆ ಬಂದ ಅನಂತಕುಮಾರ ಹೆಗಡೆ ಕಾಂಗ್ರೆಸ್ ಶಾಸಕ ಸತೀಶ ಸೈಲ್ ಅವರನ್ನು ಆಲಂಗಿಸಿಕೊಳ್ಳುವ ಮೂಲಕ ಚರ್ಚೆಯಾಗುತ್ತಿರುವ ವಿಷಯಗಳಿಗೆ ಪುಷ್ಟಿ ನೀಡಿದರು. ಇದೆಲ್ಲ ಕಾರಣಗಳಿಂದ ಅನಂತಕುಮಾರ ಹೆಗಡೆ ಸಿದ್ದರಾಮಯ್ಯ ವಿರುದ್ಧ ಹಿಗ್ಗಾಮುಗ್ಗಾ ದಾಳಿ ನಡೆಸುತ್ತಿದ್ದರೂ ಶಾಸಕರಾದ ಸತೀಶ ಸೈಲ್, ಭೀಮಣ್ಣ ನಾಯ್ಕ, ಸಚಿವ ಮಂಕಾಳ ವೈದ್ಯ ತಮಗೆ ಸಂಬಂಧವೇ ಇಲ್ಲ ಎಂಬಂತೆ ಇದ್ದಾರೆ. ಗಂಭೀರವಾಗಿ ಹೆಗಡೆ ವಿರುದ್ಧ ತಿರುಗಿಬೀಳುವ ಪ್ರಯತ್ನವನ್ನೇ ಮಾಡಲಿಲ್ಲ.

ಇನ್ನು ಲೋಕಸಭೆ ಚುನಾವಣೆಯಲ್ಲಿ ಅನಂತಕುಮಾರ ಹೆಗಡೆ ಅವರನ್ನು ಬದಿಗಿಟ್ಟು ಬೇರೆಯವರಿಗೆ ಟಿಕೆಟ್ ನೀಡಿದಲ್ಲಿ ಕಾಂಗ್ರೆಸ್ ಶಾಸಕರು ಸಕ್ರಿಯರಾಗಲಿದ್ದಾರೆ. ಆಗ ಮೈ ಕೊಡವಿಕೊಂಡು ಬಿಜೆಪಿ ಅಭ್ಯರ್ಥಿ ವಿರುದ್ಧ ಹೋರಾಟ ನಡೆಸಲಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ಬಿಜೆಪಿ ಯಾರಿಗೆ ಟಿಕೆಟ್ ನೀಡಲಿದೆ ಎನ್ನುವುದು ಮಹತ್ವವನ್ನು ಪಡೆದುಕೊಂಡಿದೆ. ಅನಂತಕುಮಾರ ಹೆಗಡೆ ಅವರ ಬಗ್ಗೆ ಕಾಂಗ್ರೆಸ್ ಶಾಸಕರ ಮೃದು ಧೋರಣೆಯಿಂದಾಗಿಯೇ ಕಾಂಗ್ರೆಸ್‌ನಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಭಾರೀ ಪೈಪೋಟಿಯೇ ಕಂಡುಬರುತ್ತಿಲ್ಲ. ಕೇವಲ 2- 3 ಆಕಾಂಕ್ಷಿಗಳು ಮಾತ್ರ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಆದರೆ ಬಿಜೆಪಿಯಲ್ಲಿ ಮಾತ್ರ 8- 10 ಆಕಾಂಕ್ಷಿಗಳು ಭಾರೀ ಪೈಪೋಟಿ ನಡೆಸುತ್ತಿದ್ದಾರೆ.ಟಿಕೆಟ್‌ ನೀಡಿಕೆಯ ಮೇಲೆ ಪರಿಣಾಮ ಸಾಧ್ಯತೆ

ಅನಂತಕುಮಾರ ಹೆಗಡೆ ಸಂವಿಧಾನ ಬದಲಾವಣೆ ಕುರಿತು ಮಾತನಾಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿಯ ಟಿಕೆಟ್ ಘೋಷಣೆ ಅಂತಿಮ ಹಂತದಲ್ಲಿರುವಾಗ ಹೆಗಡೆ ಈ ಹೇಳಿಕೆ ನೀಡಿರುವುದರಿಂದ ಟಿಕೆಟ್ ನೀಡಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂಬ ಅಭಿಪ್ರಾಯವೂ ಕೇಳಿಬಂದಿದೆ.

Share this article