ಕ್ಷೇತ್ರ ಅಭಿವೃದ್ಧಿ ಅಭ್ಯರ್ಥಿಗಳ ಹೊಣೆಗಾರಿಕೆಯಾಗಲಿ: ತರಳಬಾಳು ಶ್ರೀ

KannadaprabhaNewsNetwork |  
Published : Apr 02, 2024, 01:05 AM IST
ಚಿತ್ರ:ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ತರಳಬಾಳು ಜಗದ್ಗುರುಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು. | Kannada Prabha

ಸಾರಾಂಶ

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ತರಳಬಾಳು ಜಗದ್ಗುರುಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಕ್ಷೇತ್ರದ ಅಭಿವೃದ್ಧಿಯ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣಾ ಪ್ರಚಾರ ಮಾಡುವುದು ಎಲ್ಲ ಅಭ್ಯರ್ಥಿಗಳ ಹೊಣೆಗಾರಿಕೆ ಆಗಬೇಕು ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ತಿಳಿಸಿದರು.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಸದ್ಧರ್ಮ ನ್ಯಾಯಪೀಠದಲ್ಲಿ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಸಂದರ್ಭದಲ್ಲಿ ಕಿವಿಮಾತುಗಳನ್ನು ಹೇಳಿದ ಶ್ರೀಗಳು, ಯಾವುದೇ ಪಕ್ಷದ ದುರೀಣರಾಗಿರಲಿ, ಯಾರ ಬಗ್ಗೆಯೂ ವೈಯುಕ್ತಿಕ ನಿಂದನೆಗಳನ್ನು ಮಾಡಬಾರದು ಎಂದರು.

ತಾವು ಜಯಶಾಲಿಗಳಾದರೆ ಕ್ಷೇತ್ರದಲ್ಲಿ ಮಾಡುವ ಕೆಲಸಗಳ ಪಟ್ಟಿಯನ್ನು ಮುಂದಿಟ್ಟುಕೊಂಡು ಮತದಾರರ ಮನವೊಲಿಸುವತ್ತ ಅಭ್ಯರ್ಥಿಗಳು ಗಮನ ಹರಿಸಬೇಕು ಎಂದರು.

ರಾಜಕೀಯ ಪಕ್ಷಗಳಲ್ಲಿ ಶಿಸ್ತು ಬರಬೇಕು. ಪಕ್ಷವೊಂದರ ಪ್ರಾಥಮಿಕ ಸದಸ್ಯತ್ವ ಪಡೆದು ಐದು ವರ್ಷಗಳು ಮುಗಿಯುವ ತನಕ ಯಾವುದೇ ಅಧಿಕಾರ ಅಂತಸ್ತು ಗಳನ್ನು ಯಾವುದೇ ಪಕ್ಷ ನೀಡಬಾರದು. ಆಗ ತಾನಾಗಿಯೇ ಪಕ್ಷಾಂತರ ಮಾಡುವ ಪದ್ಧತಿಗೆ ಕಡಿವಾಣ ಬೀಳುತ್ತದೆ ಎಂದರು.

ಎಲ್ಲಾ ಪಕ್ಷಗಳಲ್ಲಿನ ಪ್ರಾಥಮಿಕ ಸದಸ್ಯತ್ವ ಪಡೆದ ಸದಸ್ಯರ ಪಟ್ಟಿಯನ್ನು ಚುನಾವಣಾ ಆಯೋಗದಲ್ಲಿ ನೋಂದಾಯಿಸಬೇಕು. ಐದು ವರ್ಷಗಳ ಕಾಲ ಸದಸ್ಯ ನಾಗಿರದ ವ್ಯಕ್ತಿಗೆ ಪಕ್ಷಗಳು ಚುನಾವಣೆಯಲ್ಲಿ ಟಿಕೇಟ್‌ ಕೊಟ್ಟರೆ ಅಂತಹವರನ್ನು ಪುರಸ್ಕರಿಸಬಾರದು. ಆ ಅಧಿಕಾರ ಚುನಾವಣಾ ಆಯೋಗಕ್ಕೆ ಇರಬೇಕು ಎಂದು ಶ್ರೀಗಳು ಹೇಳಿದರು.

ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ತರಳಬಾಳು ಶ್ರೀಗಳು ಶಾಲು, ಫಲ ಪುಷ್ಪ ನೀಡಿ ಆಶೀರ್ವದಿಸಿದರು. ಭಾರತೀಯ ಜನತಾ ಪಾರ್ಟಿ ಚಿಕ್ಕಮಗಳೂರು ಜಿಲ್ಲೆಯ ಅಧ್ಯಕ್ಷ ದೇವರಾಜ್ ಶೆಟ್ಟಿ, ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಮುರುಡಪ್ಪ, ಹಿಂದುಳಿದ ವರ್ಗದ ಮೋರ್ಚಾದ ರಾಜ್ಯ ಕಾರ್ಯದರ್ಶಿ ರಾಜಪ್ಪ, ಭಾರತೀಯ ಜನತಾ ಪಾರ್ಟಿ ಚಿಕ್ಕಮಗಳೂರು ಜಿಲ್ಲೆಯ ಉಪಾಧ್ಯಕ್ಷ ನಿರಂಜನ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸೋಮಶೇಖರ್, ಚಿಕ್ಕ ಮಗಳೂರು ಜಿಲ್ಲೆಯ ರೈತ ಮೋರ್ಚಾದ ಮಂಡಲ ಅಧ್ಯಕ್ಷ ಉಮೇಶ್, ಚಿಕ್ಕಮಗಳೂರು ಜಿಲ್ಲೆಯ ರೈತ ಮೋರ್ಚಾದ ಕಾರ್ಯದರ್ಶಿ ಸುಧಾಕರ್, ಪಿಳ್ಳೆನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ರಮೇಶ್ ಇವರೆಲ್ಲರೂ ಉಪಸ್ಥಿತರಿದ್ದರು.

PREV