ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖಂಡರು, ಹೇಮಾವತಿ ಜಲಾಶಯ ಬರಿದಾಗಿದ್ದರೂ ನೀರು ಮತ್ತು ವಿದ್ಯುತ್ ಪೂರೈಕೆ ಬಗ್ಗೆ ಜನರಿಗೆ ತಪ್ಪು ಸಂದೇಶ ನೀಡುತ್ತಿರುವ ಶಾಸಕರ ಕಾರ್ಯವೈಖರಿಯನ್ನು ಖಂಡಿಸಿದರು.
ಕಾಂಗ್ರೆಸ್ ಮುಖಂಡ ಬಿ.ಎಲ್.ದೇವರಾಜು ಮಾತನಾಡಿ, ಕಾವೇರಿ ಜಲ ವಿವಾದ ಇನ್ನೂ ಮುಗಿದಿಲ್ಲ. ನೀರು ಹಂಚಿಕೆ ವಿಚಾರದಲ್ಲಿ ಕಾವೇರಿ ನ್ಯಾಯಾಧೀಕರಣದ ತೀರ್ಪನ್ನು ಪಾಲಿಸಬೇಕು. ನ್ಯಾಯಾಧೀಕರಣದ ಆದೇಶ ಮೀರಿದರೆ ಕೇಂದ್ರ ಸರ್ಕಾರ ಮಿಲಿಟರಿ ತಂದು ನಮ್ಮ ಅಣೆಕಟ್ಟೆಗಳ ಬೀಗದ ಕೀ ಕಿತ್ತುಕೊಳ್ಳುತ್ತದೆ ಎಂದರು.ತೀವ್ರ ಬರದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೇಮಾವತಿ ಜಲಾಶಯದಿಂದ ಒಂದಷ್ಟು ಪ್ರಮಾಣದ ನೀರನ್ನು ನೆರೆಯ ತುಮಕೂರು ಜಿಲ್ಲೆಗೆ ಬಿಟ್ಟಿದೆ. ಇದು ಮಾನವೀಯ ನೆಲೆಗಟ್ಟಿನಲ್ಲಿ ತೆಗೆದುಕೊಂಡ ನಿರ್ಧಾರ ಎಂದು ತಿಳಿಸಿದರು.
ಕುಡಿಯುವ ನೀರಿಗೆ ಬರ ಇರುವಾಗ ಬೆಳೆ ರಕ್ಷಣೆಗೆ ನೀರು ಬಿಡಲು ಸಾಧ್ಯವಿಲ್ಲ. ಹೇಮೆ ನೀರು ಬಿಡಲು ಶಾಸಕರು ಸರ್ಕಾರಕ್ಕೆ ಕೇವಲ ಪತ್ರ ಬರೆದರೆ ಸಾಲದು. ವಾಸ್ತವತೆ ನೆಲೆಗಟ್ಟಿನಲ್ಲಿ ಒತ್ತಡ ಹಾಕಬೇಕು. ನೀರಿನ ಸಮಸ್ಯೆಯಿಂದ ತಾಲೂಕಿನ 14 ಗ್ರಾಪಂ ವ್ಯಾಪ್ತಿಯಲ್ಲಿ ಟ್ಯಾಂಕರ್ ಮೂಲಕ ಜನರಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಚುನಾವಣೆಗೂ, ಬರ ನಿರ್ವಹಣಾ ಸಮಿತಿ ಸಭೆ ಕರೆದು ಪರಿಶೀಲನೆ ಮಾಡುವುದಕ್ಕೂ ಯಾವುದೇ ಸಂಬಂಧವಿಲ್ಲ. ಚುನಾವಣೆ ಮುಗಿದಿದ್ದರೂ ಶಾಸಕರು ಇದುವರೆಗೂ ಟಾಸ್ಕ್ ಪೋರ್ಸ್ ಸಭೆ ನಡೆಸಿಲ್ಲ ಎಂದು ದೂರಿದರು.
ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮಾತನಾಡಿ, ಹೇಮಾವತಿ ಜಲಾಶಯ ಹಾಸನ ಜಿಲ್ಲಾ ಉಸ್ತುವಾರಿ ಸಚಿವರ ನಿಯಂತ್ರಣದಲ್ಲಿದೆ. ಸಮಿತಿಯಲ್ಲಿ ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಕೂಡ ಸದಸ್ಯರು. ಹೇಮೆ ನೀರು ಬಿಡುವಲ್ಲಿ ತಾರತಮ್ಯವಾಗಿದ್ದರೆ ಇದನ್ನು ಹಾಸನ ಜಿಲ್ಲಾ ಉಸ್ತುವಾರಿ ಸಚಿವರು, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯ ನೀರಾವರಿ ಸಚಿವರ ಗಮನಕ್ಕೆ ತರಬೇಕು. ನ್ಯಾಯ ದೊರಕದಿದ್ದರೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನೀರಿಗಾಗಿ ಒತ್ತಾಯ ಮಾಡಬೇಕು. ಅದನ್ನು ಬಿಟ್ಟು ನೀರು ಬಿಟ್ಟು ಕೇವಲ ಪತ್ರ ಬರೆದರೆ ಸಾಲದು ಎಂದು ಸಲಹೆ ನೀಡಿದರು.