ಸಂವಿಧಾನಕ್ಕೆ ಕಾಂಗ್ರೆಸ್‌ನಿಂದ 128 ಬಾರಿ ತಿದ್ದುಪಡಿ: ಸಿ.ಎಸ್‌.ಪುಟ್ಟರಾಜು

KannadaprabhaNewsNetwork |  
Published : Apr 20, 2024, 01:05 AM IST
19ಕೆಎಂಎನ್‌ಡಿ-3ಮಂಡ್ಯದ ಎಸ್‌.ಬಿ.ಸಮುದಾಯ ಭವನದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಸಮನ್ವಯ ಸಮಾವೇಶವನ್ನು ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು ಉದ್ಘಾಟಿಸಿದರು. ರಘು ಕೌಟಿಲ್ಯ, ಕೆ.ಟಿ.ಶ್ರೀಕಂಠೇಗೌಡ, ಡಾ.ಸಿದ್ದರಾಮಯ್ಯ, ಡಾ.ಇಂದ್ರೇಶ್‌ ಇತರರಿದ್ದರು. | Kannada Prabha

ಸಾರಾಂಶ

ಭಾರತ ದೇಶದಲ್ಲಿ ಹಿಂದುಳಿದ ವರ್ಗಗಳ ನಾಯಕರೆಂದರೆ ಅದು ನರೇಂದ್ರ ಮೋದಿ ಮತ್ತು ದೇವೇಗೌಡರು ಮಾತ್ರ, ಉತ್ತಮ ನಾಯಕತ್ವ ನೀಡಿ ಜಗತ್ತಿನಲ್ಲಿ ಮೋದಿ ಅವರು ಹೆಸರು ತಂದಿದ್ದಾರೆ, ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗುವುದನ್ನು ತಪ್ಪಿಸಲು ಮೋದಿ ಅವರು ಪ್ರಧಾನಿ ಆಗಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಅಂಬೇಡ್ಕರ್‌ ಅವರು ಲೋಕಸಭೆಗೆ ಸ್ಪರ್ಧಿಸಿದಾಗ ಸೋಲಿಸಿದ್ದು ಕಾಂಗ್ರೆಸ್‌, ಸಂವಿಧಾನವನ್ನು 128 ಬಾರಿ ತಿದ್ದುಪಡಿ ಮಾಡಿದ್ದೂ ಕಾಂಗ್ರೆಸ್‌. ಈ ದೇಶದಲ್ಲಿ ತುರ್ತು ಪರಿಸ್ಥಿತಿ ತಂದವರು ಕಾಂಗ್ರೆಸ್ಸಿಗರು ಎಂದು ಮಾಜಿ ಸಚಿವ ಸಿ.ಎಸ್‌. ಪುಟ್ಟರಾಜು ಟೀಕಿಸಿದರು.

ನಗರದ ಎಸ್‌.ಬಿ.ಸಮುದಾಯ ಭವನದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನಿಂದ ಶುಕ್ರವಾರ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಸಮನ್ವಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ದೇಶದಲ್ಲಿ ಹಿಂದುಳಿದ ವರ್ಗಗಳ ನಾಯಕರೆಂದರೆ ಅದು ನರೇಂದ್ರ ಮೋದಿ ಮತ್ತು ದೇವೇಗೌಡರು ಮಾತ್ರ, ಉತ್ತಮ ನಾಯಕತ್ವ ನೀಡಿ ಜಗತ್ತಿನಲ್ಲಿ ಮೋದಿ ಅವರು ಹೆಸರು ತಂದಿದ್ದಾರೆ, ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗುವುದನ್ನು ತಪ್ಪಿಸಲು ಮೋದಿ ಅವರು ಪ್ರಧಾನಿ ಆಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಈ ಹಿಂದೆ ಕೆಆರ್‌ಎಸ್‌ ಜಲಾಶಯದಲ್ಲಿ 70 ಅಡಿ ನೀರಿದ್ದಾಗಲೂ ನಾಲೆಗಳಿಗೆ ನೀರು ಹರಿಸಲಾಗುತ್ತಿತ್ತು. ಪ್ರಸ್ತುತದಲ್ಲಿ 85 ಅಡಿ ನೀರಿದ್ದರು ಗುತ್ತಿಗೆದಾರರ ಜೊತೆ ಶಾಮೀಲಾಗಿ ದುರಸ್ತಿ ನೆಪದಲ್ಲಿ ನಾಲೆಗಳಿಗೆ ನೀರು ಬಿಡುತ್ತಿಲ್ಲ. ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ತೆರಿಗೆಯನ್ನು ಅನಗತ್ಯವಾಗಿ ಹೆಚ್ಚಳ ಮಾಡಿ, ಗ್ಯಾರಂಟಿ ನೀಡುವ ನೆಪದಲ್ಲಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಸರ್ವಜನರ ಕಲ್ಯಾಣ ಆಗಬೇಕಾದರೆ ಮೋದಿ ಮತ್ತು ದೇವೇಗೌಡರ ಕೈ ಬಲಪಡಿಸಬೇಕು. ಎಚ್‌ಡಿಕೆ ಅವರು ಗೆದ್ದರೆ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ ಅವರು ಮೋದಿ ಅವರನ್ನು ಭೇಟಿ ಮಾಡಿ ರಾಜ್ಯದ ಸಮಸ್ಯೆಗಳು ಯಾವುದೇ ಇದ್ದರೂ ಬಗೆಹರಿಸುತ್ತಾರೆ. ಹಾಗಾಗಿ ಬಿಜೆಪಿ ಸೇರಿದಂತೆ ಮೈತ್ರಿ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.

ಮಾಜಿ ಸಚಿವ ಪ್ರಮೋದ್‌ಮಧ್ವರಾಜ್‌ ಮಾತನಾಡಿ, ಕೋವಿಡ್‌ ಬಂದಂತಹ ಸಂದರ್ಭದಲ್ಲಿ ಅಮೇರಿಕಾದಲ್ಲಿ ಒಂದು ವ್ಯಾಕ್ಸಿನ್‌ಗೆ 8 ಸಾವಿರ ರು. ಕೊಡಬೇಕಿತ್ತು, ಒಟ್ಟು ಎರಡು ವ್ಯಾಕ್ಸಿನ್‌ ತೆಗೆದುಕೊಳ್ಳಲು ಬರೋಬ್ಬರಿ 16 ಸಾವಿರ ರು. ಕೊಡಬೇಕಿತ್ತು. ದೇಶದಲ್ಲಿ ಕೋವಿಡ್‌ ತಡೆಗಟ್ಟಲು ಎರಡು ವ್ಯಾಕ್ಸಿನ್‌ ಅಗತ್ಯವಿತ್ತು. ಪ್ರತಿಯೊಬ್ಬರಿಗೂ ಉಚಿತವಾಗಿ ನೀಡುವ ಮೂಲಕ ಜನರ ಪ್ರಾಣ ಉಳಿಸಿದ ಕೀರ್ತಿ ಮೋದಿಗೆ ಸಲ್ಲು‌ತ್ತದೆ. ದೇಶವನ್ನು ಒಟ್ಟಾರೆಯಾಗಿ ತೆಗೆದುಕೊಂಡು ಹೋಗುವ ಶಕ್ತಿ ಇರುವುದು ಇವರೊಬ್ಬರಿಗೆ ಮಾತ್ರ, ಜೆಡಿಎಸ್‌ ಮತ್ತು ಬಿಜೆಪಿ ಅವರು ಎದೆತಟ್ಟಿ ಹೇಳುವುದೊಂದೇ ನಮ್ಮ ಪ್ರಧಾನಿ ಮೋದಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೀನುಗಾರಿಕೆ ಮಂತ್ರಿಯಾಗಿದ್ದಾಗ ಸುಮಾರು 40 ವರ್ಷಗಳಿಂದ ಸ್ಥಳೀಯ ಮೀನುಗಾರರು ಗುತ್ತಿಗೆದಾರರ ಬಳಿ ಜೀತದಾಳುಗಳಂತೆ ದುಡಿಯುತ್ತಿದ್ದರು, ಇದಕ್ಕೆ ಕಡಿವಾಣ ಹಾಕುವ ಮೂಲಕ ಗುತ್ತಿಗೆದಾರರನ್ನು ಹೊರಗಿಟ್ಟು ಆ ಕುಟುಂಬದವರೇ ಸ್ವತಂತ್ರ್ಯವಾಗಿ ಸುಮಾರು 300 ಕುಟುಂಬಗಳು ಮೀನು ಹಿಡಿಯಲು ಲೈಸೆನ್ಸ್‌ ಕೊಡಿಸಿರುವ ಸಮಾಧಾನವಿದೆ ಎಂದು ವಿವರಿಸಿದರು.

ಮುಖಂಡರಾದ ಮಾಜಿ ಶಾಸಕರಾದ ಕೆ.ಟಿ. ಶ್ರೀಕಂಠೇಗೌಡ, ರಘು ಕೌಟಿಲ್ಯ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಸಿದ್ದರಾಮಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್‌.ಎಸ್‌. ಇಂದ್ರೇಶ್‌, ಮಂಗಳಾ, ಜಯರಾಂ, ಪದ್ಮಾವತಿ, ಅರುಣ್‌, ಆನಂದ್‌ ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ