ಗದಗ: ಮಧ್ಯರಾತ್ರಿ ಮನೆಗೆ ನುಗ್ಗಿದ ಗುಂಪು ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆಗೈದು, ಇನ್ನಿಬ್ಬರ ಹತ್ಯೆಗೆ ವಿಫಲ ಯತ್ನ ನಡೆಸಿದ ಘಟನೆ ನಗರದ ದಾಸರ ಓಣಿಯಲ್ಲಿ ಗುರುವಾರ ರಾತ್ರಿ ನಡೆದೆ.
ಹತ್ಯೆಯಾದ ನತದೃಷ್ಟರನ್ನು ಗದಗ-ಬೆಟಗೇರಿ ನಗರಸಭೆಯ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ ಕಾರ್ತಿಕ ಬಾಕಳೆ (27), ಸಂಬಂಧಿಗಳಾದ ಕೊಪ್ಪಳದ ಪರಶುರಾಮ ಹಾದಿಮನಿ (55), ಅವರ ಪತ್ನಿ ಲಕ್ಷ್ಮೀ ಹಾದಿಮನಿ (45) ಹಾಗೂ ಮಗಳು ಆಕಾಂಕ್ಷಾ ಹಾದಿಮನಿ (16) ಎಂದು ಗುರುತಿಸಲಾಗಿದೆ. ಇವರನ್ನೆಲ್ಲ ಮಲಗಿದ್ದ ಕೋಣೆಗಳಲ್ಲಿಯೇ ಬರ್ಬರವಾಗಿ ಹತ್ಯೆಗೈಯಲಾಗಿದೆ.ಅದೇ ಮನೆಯ ನೆಲ ಮಹಡಿಯ ಕೋಣೆಯಲ್ಲಿ ಮಲಗಿದ್ದ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಹಾಗೂ ಪತಿ, ಮಾಜಿ ನಗರಸಭಾ ಸದಸ್ಯ ಪ್ರಕಾಶ ಬಾಕಳೆ ಅವರ ಹತ್ಯೆಗೂ ಈ ಗುಂಪು ಯತ್ನಿಸಿದ್ದು, ಕೋಣೆಯ ಬಾಗಿಲನ್ನು ಜೋರಾಗಿ ಬಡಿಯುತ್ತಿದ್ದಂತೆ ಪೊಲೀಸರಿಗೆ ಕರೆ ಮಾಡಿ ಎತ್ತರ ಧ್ವನಿಯಲ್ಲಿ ಮಾತನಾಡುತ್ತಿರುವುದನ್ನು ಕೇಳುತ್ತಿದ್ದಂತೆ ಹಂತಕರು ಅಲ್ಲಿಂದ ಪರಾರಿಯಾಗಿದ್ದಾರೆ.
ಮುಗಿಲು ಮುಟ್ಟಿದ ಆಕ್ರಂದನ: ಘಟನಾ ಸ್ಥಳದಲ್ಲಿ ನೆರೆದಿದ್ದ ಸಾವಿರಾರು ಜನರು ಕಣ್ಣೀರು ಸುರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪ್ರಾಥಮಿಕ ತನಿಖೆ ಆಧಾರದಲ್ಲಿ ಕೊಲೆಯಾಗಿರುವರು ಕೊಪ್ಪಳ ಜಿಲ್ಲೆಯ ಭಾಗ್ಯ ನಗರದ ನಿವಾಸಿಗಳಾಗಿದ್ದು, ಗದಗ ನಗರದ ಬಾಕಳೆ ಕುಟುಂಬದ ಸಂಬಂಧಿಕರಾಗಿದ್ದು, ಏ.17 ರಂದು ಗದಗ ನಗರಕ್ಕೆ ಆಗಮಿಸಿದ್ದರು. ಕೊಲೆಯಾಗಿರುವ ಕಾರ್ತಿಕ್ ನಿಶ್ಚಿತಾರ್ಥ ಕುರಿತು ಚರ್ಚಿಸಲು ಬಂದಿದ್ದರು ಎನ್ನಲಾಗಿದ್ದು, ಶುಕ್ರವಾರವೇ ಮರಳಿ ಕೊಪ್ಪಳಕ್ಕೆ ಬರುವುದಾಗಿ ಹೇಳಿದ್ದರು ಎನ್ನಲಾಗಿದೆ.
ತನಿಖೆಯಿಂದ ಬಹಿರಂಗವಾಗಬೇಕು:ಈ ಬರ್ಬರ ಹತ್ಯೆಯ ಹಿಂದೆ ಹಲವು ಸಂಶಯ ವ್ಯಕ್ತವಾಗುತ್ತಿದ್ದು, ಇದು ಕುಟುಂಬದ ವೈಷಮ್ಯದಿಂದ ಮಾಡಿದ್ದಾ ಅಥವಾ ಆಸ್ತಿ ವಿವಾದಕ್ಕಾಗಿ ನಡೆದಿದೆಯೇ ಎಂಬುದರ ಕುರಿತು ತನಿಖೆಯಿಂದ ಗೊತ್ತಾಗಬೇಕಿದೆ. ಆದರೆ ಕೊಲೆಯಾಗಿರುವ ಮನೆಯ ಮಾಲೀಕ ಪ್ರಕಾಶ ಬಾಕಳೆ ಸಾಕಷ್ಟು ಹಣಕಾಸಿನ ವ್ಯವಹಾರ ಹೊಂದಿದ್ದರು. ಪ್ರಕಾಶ ಬಾಕಳೆ ಅವರ ಮೊದಲ ಪತ್ನಿಯ ಮಗ, ಕೆಲವು ತಿಂಗಳುಗಳ ಹಿಂದೆ ಬ್ಯಾಂಕ್ ನಲ್ಲಿ ನಕಲಿ ಚಿನ್ನವಿಟ್ಟು ಕೋಟ್ಯಂತರ ಹಣ ಪಡೆದ ವಿಷಯದಲ್ಲಿ ಬಂಧಿತನಾಗಿ ರಾಜ್ಯಾದ್ಯಂತ ಸುದ್ದಿಯಾಗಿತ್ತು. ನಾಲ್ವರ ಕೊಲೆಯ ನಂತರ ಈ ಎಲ್ಲ ವಿಷಯಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದು, ಸತ್ಯ ಪೊಲೀಸರ ತನಿಖೆಯಿಂದಲೇ ಬಹಿರಂಗವಾಗಬೇಕಿದೆ.
ಉತ್ತರ ವಲಯ ಐಜಿಪಿ ವಿಕಾಸಕುಮಾರ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಇದು ದರೋಡೆಕೋರರ ಕೃತ್ಯ ಅಲ್ಲ ಎನಿಸುತ್ತಿದೆ. ಮೃತ ದೇಹಗಳ ಮೇಲೆ ಚಿನ್ನಾಭರಣ ಹಾಗೆಯೇ ಇವೆ. ದರೋಡೆಗೆ ಬಂದಿದ್ದರೆ, ಚಿನ್ನಾಭರಣ ಲೂಟಿ ಮಾಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ನಸುಕಿನ 2 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಎಸ್ಪಿ ಬಿ.ಎಸ್. ನೇಮಗೌಡ ನೇತೃತ್ವದಲ್ಲಿ ಐದು ತಂಡ ರಚಿಸಲಾಗಿದೆ. ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆದಿದೆ. ಸಾರ್ವಜನಿಕರಿಗೆ ಈ ಕುರಿತು ಮಾಹಿತಿ ಇದ್ದರೆ ಪೊಲೀಸರಿಗೆ ನೀಡಬೇಕು ಎಂದು ಮನವಿ ಮಾಡಿದರು.ಒಂದೇ ಕುಟುಂಬದ ನಾಲ್ವರ ಹತ್ಯೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಘಟನೆಯ ತೀವ್ರತೆ ಕಂಡು ಬೇಸರ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಕುಟುಂಬಸ್ಥರು ಕೊಲೆಗಡುಕರಿಗೆ ಗಲ್ಲು ಶಿಕ್ಷೆ ಕೊಡಿಸಿ ಎಂದು ಆಕ್ರಂದಿಸುತ್ತಲೇ ಆಗ್ರಹಿಸಿದರು. ಕಟ್ಟುನಿಟ್ಟಿನ ತನಿಖೆಗೆ ಪೊಲೀಸ್ ಇಲಾಖೆಗೆ ಸಚಿವರು ಸೂಕ್ತ ನಿರ್ದೇಶನ ನೀಡಿದರು.
ನಾನು ನನ್ನ ಪತ್ನಿ ಕೆಳಗಿನ ರೂಂನಲ್ಲಿ ಮಲಗಿದ್ದೇವು, ಅಪರಿಚಿತ ದುಷ್ಕರ್ಮಿಗಳು ಮಧ್ಯರಾತ್ರಿ ಮನೆಗೆ ನುಗ್ಗಿ ಮೊದಲ ಮಹಡಿಯಲ್ಲಿ ಮಲಗಿದ್ದ ಪರಶುರಾಮ ಕುಟುಂಬದವರನ್ನು ಹತ್ಯೆ ಮಾಡಿದ್ದಾರೆ, ನಂತರ ನೆಲಮಹಡಿಯಲ್ಲಿ ಮಲಗಿದ್ದ ಕಾರ್ತಿಕ್ ಹತ್ಯೆ ಮಾಡಿರುವ ಶಂಕೆ ಇದೆ. ಈ ಎಲ್ಲ ಘಟನೆಯ ಗದ್ದಲ ಕೇಳುತ್ತಿದ್ದಂತೆ ನಾನು ಪೊಲೀಸರಿಗೆ ಕರೆ ಮಾಡಿದ್ದೇನೆ. ಅಷ್ಟರಲ್ಲಿ ಹಂತಕರು ಮನೆಯಿಂದ ಪರಾರಿಯಾಗಿದ್ದಾರೆ. ಆ ವೇಳೆಯಲ್ಲಿ ರೂಂ ಬಾಗಿಲು ತೆಗೆದಿದ್ದರೆ ಅವರು ನಮ್ಮನ್ನು ಕೊಲೆ ಮಾಡುತ್ತಿದ್ದರು ಎಂದು ಕೊಲೆ ಘಟನೆ ನಡೆದಿರುವ ಮನೆ ಮಾಲೀಕ ಪ್ರಕಾಶ ಬಾಕಳೆ ಹೇಳಿದ್ದಾರೆ.ಕಾರ್ತಿಕ್ ಮದುವೆ ನಿಶ್ಚಯ ಕಾರ್ಯಕ್ರಮಕ್ಕೆ ಬಂದಿದ್ದ ಸಂಬಂಧಿಕರು ಸೇರಿದಂತೆ ನಾಲ್ವರ ಹತ್ಯೆಯಾಗಿದೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಲ್ಲ ಕೋನಗಳಲ್ಲಿಯೂ ತನಿಖೆ ನಡೆಸಲಾಗುತ್ತಿದೆ. ತನಿಖೆ ಚುರುಕುಗೊಂಡಿದೆ ಎಂದು ಎಸ್ಪಿ ಬಿ.ಎಸ್.ನೇಮಗೌಡ್ರ ಹೇಳಿದರು.
ಇದೊಂದು ಅಮಾನವೀಯ ಕೃತ್ಯವಾಗಿದೆ. ಇಂತಹ ಹತ್ಯೆ ನಗರದಲ್ಲಿ ಇದೇ ಮೊದಲು, ಘಟನೆಗೆ ಕಾರಣರಾದವರನ್ನು ಆದಷ್ಟು ಬೇಗ ಪತ್ತೆ ಹಚ್ಚಬೇಕು. ಹುಬ್ಬಳ್ಳಿಯಲ್ಲೂ ಕಾಲೇಜು ವಿದ್ಯಾರ್ಥಿನಿ ಕೊಲೆ ಆಗಿದೆ. ಇದೆಲ್ಲ ನೋಡಿದಾಗ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅನ್ನೋದು ಸ್ಪಷ್ಟವಾಗುತ್ತದೆ ಎಂದು ವಿಪ ಸದಸ್ಯ ಎಸ್.ವಿ.ಸಂಕನೂರ ಹೇಳಿದರು.