ಮುಂಗಾರಿನ ಮೇಲೆ ಹೆಚ್ಚಿದ ನಿರೀಕ್ಷೆ

KannadaprabhaNewsNetwork |  
Published : Apr 20, 2024, 01:05 AM IST
ಫೋಟೋ  19ಎಚ್‌ಎನ್‌ಎಲ್6, 6ಎಹಾನಗಲ್ಲ ತಾಲೂಕಿನಲ್ಲಿ ಬಸಿಗಾಲುವೆ ಕಾಮಗಾರಿ ದೃಶ್ಯ. | Kannada Prabha

ಸಾರಾಂಶ

ಹಾನಗಲ್ಲ ತಾಲೂಕಿನ 47663 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಮುಂಗಾರು ಬಿತ್ತನೆಗೆ ಎದುರು ನೋಡುತ್ತಿರುವ ರೈತರು, ಕಳೆದ ವರ್ಷ ಬೆಳೆಗೆ ಪೂರಕವಲ್ಲದ ಮಳೆಯಿಂದಾಗಿ ಭಾರೀ ನಷ್ಟ ಅನುಭವಿಸಿದ್ದು ಮರೆತಿಲ್ಲ.

ಮಾರುತಿ ಶಿಡ್ಲಾಪೂರ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಕೊಳವೆಬಾವಿಗಳು, ವರದಾ, ಧರ್ಮಾ ನದಿಯ ನೀರನ್ನು ನೆಚ್ಚಿ ಹಿಂಗಾರು ಬೆಳೆ ಬೆಳೆಯಲು ಮುಂದಾದ ರೈತರು ಬೆಳೆ ಸರಿಯಾಗಿ ಬರದೆ ಯಾತನೆ ಅನುಭವಿಸುತ್ತಿದ್ದಾರೆ. ಈ ವರ್ಷದ ಮುಂಗಾರು ಬೆಳೆಗೆ ಜಮೀನು ಹದಗೊಳಿಸುತ್ತಿರುವ ರೈತರಿಗೆ ಈಗ ಸುರಿದಿರುವ ಮಳೆ ಖುಷಿ ನೀಡಿದೆಯಾದರೂ ಇನ್ನೂ ಹೆಚ್ಚಿನ ಮಳೆಯ ನಿರೀಕ್ಷೆಯಲ್ಲಿದ್ದಾರೆ.ಹಾನಗಲ್ಲ ತಾಲೂಕಿನ 47663 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಮುಂಗಾರು ಬಿತ್ತನೆಗೆ ಎದುರು ನೋಡುತ್ತಿರುವ ರೈತರು, ಕಳೆದ ವರ್ಷ ಬೆಳೆಗೆ ಪೂರಕವಲ್ಲದ ಮಳೆಯಿಂದಾಗಿ ಭಾರೀ ನಷ್ಟ ಅನುಭವಿಸಿದ್ದು ಮರೆತಿಲ್ಲ. ಆದರೂ ಈ ವರ್ಷವಾದರೂ ಕೃಷಿಗೆ ಅನುಕೂಲ ಮಳೆಯಾದೀತೆ ಎಂದು ಕಾಯುತ್ತಿರುದ್ದು, ಈ ವರೆಗೂ ಸರಿಯಾದ ಮುಂಗಾರು ಪೂರ್ವ ಮಳೆ ಇಲ್ಲದೆ ಭೂಮಿ ಹದಗೊಳಿಸಲು ಸಾಧ್ಯವಾಗಿಲ್ಲ.

ಪ್ರಸ್ತುತ ಹಿಂಗಾರಿಗೆ ಬಿತ್ತಿದ 7 ಸಾವಿರ ಹೆಕ್ಟೇರ್ ಕೃಷಿ ಭೂಮಿಯಲ್ಲಿನ ಗೋವಿನ ಜೋಳ, ಹಿಂಗಾರಿ ಜೋಳ, ಭತ್ತದ ಪೈರನ್ನು ಕೊಯ್ಲು ಮಾಡುವ ಕಾರ್ಯ ನಡೆದಿದೆ. ಮಳೆಯ ಕೊರತೆ, ಕೆರೆ ಕಟ್ಟೆಗಳಲ್ಲಿ ನೀರಿಲ್ಲದಿರುವುದು, ಕೊಳವೆಬಾವಿಗಳು ಬತ್ತಿರುವುದರಿಂದ ಉತ್ತಮ ಬೆಳೆ ಬಂದಿಲ್ಲ.

ಕಳೆದ ವರ್ಷ ಜುಲೈ ತಿಂಗಳಿನ 15 ದಿನಗಳಲ್ಲಿಯೇ ಅತ್ಯಧಿಕ 463 ಮಿಮೀ ಮಳೆಯಾಗಿತ್ತು. ಉಳಿದ ಅವಧಿಯಲ್ಲಿ ಕೇವಲ 285 ಮಿಮೀ ಮಳೆ ಸುರಿತು. ವಾಡಿಕೆ ಮಳೆ 1063 ಇದ್ದರೂ 749 ಮಿಮೀ ಆಗಿತ್ತು. ಆದರೆ ಕಾಲ ಕಾಲಕ್ಕೆ ಬರದೇ ಒಂದೇ ಬಾರಿಗೆ ಬಂದು ಅತೀವೃಷ್ಟಿ ಹಾಗೂ ಅನಾವೃಷ್ಠಿಗಳೆರಡನ್ನು ಅನುಭವಿಸುವಂತಾಗಿತ್ತು.

ಮೊದಲ ಮಳೆ

ವಾಡಿಕೆಯಂತೆ ಹಾನಗಲ್ಲ ತಾಲೂಕಿನಲ್ಲಿ ಮೇ 25ರ ಹೊತ್ತಿಗೆ ಬಿತ್ತನೆ ಆರಂಭವಾಗಬೇಕು. ಅದು ಮಳೆಯನ್ನು ಅವಲಂಬಿಸಿದೆ. ಗುರುವಾರ ತಾಲೂಕಿನೆಲ್ಲೆಡೆ ಮಳೆಯಾಗಿದೆ. ಆದರೂ ಅದು ಭೂಮಿ ಹದಗೊಳಿಸಲು ಸಹಕಾರಿಯಾಗುವಷ್ಟು ಇಲ್ಲ. ಹಾನಗಲ್ಲಿನಲ್ಲಿ 7.1 ಮಿಮೀ, ಹಾವಣಗಿಯಲ್ಲಿ 5.8 ಮಿಮೀ, ತಿಳವಳ್ಳಿ 5.6 ಮಿಮೀ, ಬೊಮ್ಮನಹಳ್ಳಿಯಲ್ಲಿ 26 ಮಿಮೀ ಮಳೆ ಬಿದ್ದಿದೆ. ಉಳಿದೆಡೆ ಎರಡು ಮಿಮೀಯಷ್ಟು ಮಳೆ ಬಿದ್ದಿದೆ.

ಕೃಷಿ ಇಲಾಖೆ ಮುಂಗಾರು ಬಿತ್ತನೆಗೆ ಬೇಕಾಗುವ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ದಾಸ್ತಾನಿಗೆ ಕ್ರಮ ಕೈಗೊಂಡಿದೆ. ಸೋಯಾ, ಅವರೆ, ಭತ್ತ, ಗೋವಿನ ಜೋಳ, ಶೇಂಗಾ ಸೇರಿದಂತೆ ಸುಮಾರ 10 ಸಾವಿರ ಕ್ವಿಂಟಲ್ ಬಿತ್ತನೆ ಬೀಜ ಬೇಕಾಗಬಹುದು ಎಂದು ಅಂದಾಜಿಸಾಲಾಗಿದೆ. 34 ಸಾವಿರ ಕ್ವಿಂಟಾಲ್ ವಿವಿಧ ರಸಗೊಬ್ಬರ ದಾಸ್ತಾನು ಬೇಕಾಗುತ್ತದೆ ಎಂದು ಹೇಳಲಾಗಿದೆ.

ತಾಲೂಕಿನ ಹಾನಗಲ್ಲ ಪಟ್ಟಣ, ಚಿಕಾಂಸಿಹೊಸೂರು, ಅಕ್ಕಿಆಲೂರು, ಆಡೂರು, ತಿಳವಳ್ಳಿ, ಬೊಮ್ಮನಹಳ್ಳಿ, ಬೆಳಗಾಲಪೇಟೆ, ಮಾರನಬೀಡ ಗ್ರಾಮಗಳಲ್ಲಿ ಬಿತ್ತನೆ ಬೀಜ ವಿತರಣಾ ಕೇಂದ್ರಗಳನ್ನು ತೆರೆಯಲು ಕೃಷಿ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ಕೃಷಿ ಪರಿಕರ

ಕಳೆದ ಸಾಲಿನಲ್ಲಿ ಕೃಷಿ ಇಲಾಖೆ 19 ಪಾವರ್ ಟಿಲ್ಲರ, 71 ಸ್ವಯಂ ಚಾಲಿತ ಉಪಕರಣ, 188 ಭೂ ಸಿದ್ಧತಾ ಉಪಕರಣ ಸೇರಿದಂತೆ ಕೃಷಿಗೆ 278 ವಿವಿಧ ಉಪಕರಣಗಳನ್ನು ರೈತರಿಗೆ ನೀಡಿದೆ. 2530 ಸಾಮಾನ್ಯ ರೈತರಿಗೆ, 158 ಪರಿಶಿಷ್ಟ ಜಾತಿಯ ರೈತರಿಗೆ, 133 ಪರಿಶಿಷ್ಟ ಪಂಗಡದ ರೈತರಿಗೆ ಸ್ಪ್ರಿಂಕ್ಲರ್‌ ಸೆಟ್‌ಗಳನ್ನು ನೀಡಿದೆ.

ನೀರು ಭೂಮಿ ರಕ್ಷಣೆ

ನೀರಿನ ಹಿತ ಮಿತ ಬಳಕೆಗೆ ಮುಂದಾಗುವುದು ಇಂದಿನ ಅಗತ್ಯ ಎನ್ನಲಾಗಿದ್ದು, ಕೃಷಿ ಹೊಂಡ, ಬದು ನಿರ್ಮಾಣ, ನೀರುಗಾಲುವೆ, ಬಸಿಗಾಲುವೆ ಮೂಲಕ ನೀರು ಹಾಗೂ ಮಣ್ಣಿನ ಫಲವತ್ತತೆ ರಕ್ಷಣೆಗೆ ರೈತರು ಒತ್ತು ನೀಡುವ ಅಗತ್ಯವಿದೆ. ಇದಕ್ಕಾಗಿ ಕೃಷಿ ಇಲಾಖೆಯ ಅನುದಾನವನ್ನು ಬಳಸಿಕೊಳ್ಳಬೇಕಿದೆ. ಈ ಬಾರಿ ಬಾಳಂಬೀಡ ಹಾಗೂ ಹಿರೆಕಾಂಸಿ ಏತ ನೀರಾವರಿ ಯೋಜನೆಗಳನ್ನು ರೈತರು ಹೆಚ್ಚು ನಿರೀಕ್ಷೆಯಿಂದ ನೋಡುತ್ತಿದ್ದು, ಮಲೆನಾಡಿನಲ್ಲಿ ಮಳೆಯಾದರೂ ವರದಾ ನದಿಗೆ ನೀರು ಬಂದು ಏತ ನೀರಾವರಿ ಮೂಲಕ ಕೆರೆಗಳು ತುಂಬಿದರೆ ರೈತ ಒಂದಷ್ಟು ಉತ್ತಮ ಬೆಳೆ ಬೆಳೆಯಬಹುದಾಗಿದೆ. ಏತ ನೀರಾವರಿ ಸಿದ್ಧವಾಗಿದೆ.ಉಪಯೋಗ ಪಡೆಯಲಿ

ಎನ್‌ಆರ್‌ಇಜಿ ಯೋಜನೆಯಲ್ಲಿ ಸಹಾಯಧನದ ಮೂಲಕ ಬದು ನಿರ್ಮಾಣ, ಕೃಷಿ ಹೊಂಡಕ್ಕೆ ಅವಕಾಶವಿದೆ. ನೀರು ಇಂಗುವಿಕೆಗೆ ಆದ್ಯತೆ ನೀಡಿದರೆ ನಮ್ಮ ಭೂಮಿಗೆ ನೀರು ಉಳಿಸಲು ಸಾಧ್ಯ. ಕೃಷಿ ಭೂಮಿ ಸವಕಳಿ ತಪ್ಪಿಸಲು ಬದು ನಿರ್ಮಾಣ ಅತ್ಯವವಶ್ಯ. ಯೋಜನೆಗಳ ಉಪಯೋಗ ಪಡೆದು ಕೃಷಿಯನ್ನು ಸಮೃದ್ಧಗೊಳಿಸಿಕೊಳ್ಳಲು ರೈತರು ಮುಂದಾಗಬೇಕು.

ಕೆ.ಮೋಹನಕುಮಾರ ಸಹಾಯಕ ಕೃಷಿ ನಿರ್ದೇಶಕ, ಕೃಷಿ ಇಲಾಖೆ, ಹಾನಗಲ್ಲ

PREV

Recommended Stories

ಸಂಜೆ ಕೋರ್ಟ್‌ಗೆ ವಕೀಲರ ಸಂಘಗಳ ವಿರೋಧ
ಕಾರ್ಯಕ್ರಮಕ್ಕೆ ಸಾರಿಗೆ ಬಸ್ಸಲ್ಲಿ ಬಂದ ಹೈಕೋರ್ಟ್‌ ನ್ಯಾಯಾಧೀಶರು!