ಕನ್ನಡಪ್ರಭ ವಾರ್ತೆ ಮೈಸೂರುರಾಜ್ಯ ಸರ್ಕಾರವು ಸಂವಿಧಾನ ಮತ್ತು ರಾಷ್ಟ್ರೀಯ ಏಕ್ಯತೆ ಕುರಿತು ಜ. 26 ರಿಂದ ಫೆ.26 ರವರೆಗೆ ರಾಜ್ಯಾದ್ಯಂತ ಜಾಗೃತಿ ಜಾಥಾ ಆಯೋಜಿಸಿದ್ದು, ಫೆ.24 ಮತ್ತು 25ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಚಾರ ಸಂಕಿರಣ ಮತ್ತು ಸಂವಾದ ಆಯೋಜಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಒಂದು ತಿಂಗಳವರೆಗೆ ರಾಜ್ಯಾದ್ಯಂತ ಜಾಥಾ ನಡೆಸುವುದು, ಒಂದು ವಾಹನದ ಮೇಲೆ ಸ್ತಬ್ಧಚಿತ್ರದೊಂದಿಗೆ ಎಲ್.ಇ.ಡಿ ಪರದೆ ಜೋಡಿಸುವ ಮೂಲಕ ಸಂವಿಧಾನ ಮಹತ್ವ ಏನು? ಅದು ರೂಪುಗೊಂಡು ಜಾರಿಯಾದ ಬಗೆ ಹೇಗೆ ಎಂಬ ವಿವರವನ್ನು ಜನರಿಗೆ ತೋರಿಸಲಾಗುತ್ತದೆ. ಜಾಥಾವು ಸ್ಥಳೀಯ ಜನ ಪ್ರತಿನಿಧಿಗಳ ಜತೆಗೂಡಿ ಜಿಲ್ಲೆಯ ಎಲ್ಲಾ ಗ್ರಾಪಂ ಸಂಚರಿಸುತ್ತದೆ. 27 ದಿನಗಳಲ್ಲಿ ಈ ವಾಹನವು ಇಡೀ ಜಿಲ್ಲೆಯನ್ನು ಸಂಚರಿಸುತ್ತದೆ. ಒಂದು ವೇಳೆ ದೊಡ್ಡ ಜಿಲ್ಲೆಯಾಗಿದ್ದರೆ ಅಲ್ಲಿ ಎರಡು ಸ್ತಬ್ಧಚಿತ್ರ ಹಾಗೂ ವಾಹನದ ವ್ಯವಸ್ಥೆ ಮಾಡುವ ಬಗ್ಗೆಯೂ ಜಿಲ್ಲಾಡಳಿತ ಕ್ರಮವಹಿಸುವುದಾಗಿ ಹೇಳಿದರು.
ಜಾಥಾ ಸಾಗುವ ವೇಳೆ ಸ್ಥಳೀಯ ಶಾಸಕರು, ಸಂಸದರು ಪಾಲ್ಗೊಳ್ಳುವರು. ಸರ್ಕಾರದ ಗ್ಯಾರಂಟಿ,ಇತರೆ ಸೌಲಭ್ಯ ದೊರಕದ ಜನರ ಸಂಕಷ್ಟ ಆಲಿಸಿ ಪರಿಹಾರ ಒದಗಿಸುವ ಕೆಲಸ ಮಾಡಲಿದೆ. ಯಾವ ಗ್ರಾಮದಲ್ಲಿ ಜಾಥಾ ಉಳಿಯಲಿದೆಯೋ ಅಲ್ಲಿ ಸ್ಥಳೀಯ ಜಾನಪದ ಕಲಾಪ್ರಕಾರದ ಸಹಾಯದಿಂದ ಸಂವಿಧಾನ ಕುರಿತು ಇನ್ನಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡುವುದಾಗಿ ಹೇಳಿದರು.ಈ ಜಾಥಾಕ್ಕೆ ಜ.26ರಂದು ಧ್ವಜಾರೋಹಣದ ಬಳಿಕ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡುವರು. ಜಾಥಾ ಹೋಗುವ ಮಾರ್ಗದ ಕುರಿತು ಇದಕ್ಕಾಗಿಯೇ ರಚಿಸಲಾದ ವೆಬ್ ಸೈಟ್ ಮೂಲಕ ಪಡೆಯಬಹುದು. ಎರಡನೇ ಭಾಗದಲ್ಲಿ ಫೆ. 24 ಮತ್ತು 25 ರಂದು ಶಿಕ್ಷಣ ತಜ್ಞರು ಮತ್ತು ವಿಷಯ ತಜ್ಞರಿಂದ ಅರಮನೆ ಮೈದಾನದಲ್ಲಿ ಎರಡು ದಿನಗಳ ಕಾಲ ವಿಚಾರ ಸಂಕಿರಣ ಮತ್ತು ಬೃಹತ್ ಸಮಾವೇಶ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಸಮಾವೇಶದಲ್ಲಿ ಸಂವಿಧಾನ ರಚನಾ ಸಭೆಯಲ್ಲಿ ನಡೆದ ಅರ್ಥಪೂರ್ಣ ಚರ್ಚೆಗಳ 10 ಸಂಪುಟಗಳ ಪುಸ್ತಕಗಳು ಮುದ್ರಿತವಾಗಿದ್ದು ಪುಸ್ತಕಗಳ ಬಿಡುಗಡೆಯೂ ಇರಲಿದೆ. ಸಂವಿಧಾನದ ಅಂಗೀಕಾರದ ಮುನ್ನಾದಿನ ಅಂಬೇಡ್ಕರರು ಮಾಡಿದ ಅಮೋಘ ಭಾಷಣವನ್ನೂ ಪುಸ್ತಕ ಒಳಗೊಂಡಿದೆ. ಡಾ. ಬಾಬು ರಾಜೇಂದ್ರ ಪ್ರಸಾದ್, ರಾಜಾಜಿ ಅಂತಹವರೂ ಸೇರಿದಂತೆ ಸಂವಿಧಾನ ರಚನಾ ಸಭೆಯ ಮುತ್ಸದ್ದಿಗಳ ಮಾತುಗಳು ಪುಸ್ತಕದಲ್ಲಿರಲಿವೆ ಎಂದರು.
ಸಂವಿಧಾನವನ್ನು ದುರ್ಬಲಗೊಳಿಸಲು ಪಟ್ಟಭದ್ರ ಹಿತಾಸಕ್ತಿಗಳು ಹವಣ ಹವಣಿಸುತಿದ್ದು,ಸಂವಿಧಾನಕ್ಕೆ ವಿರುದ್ದವಾದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅಂತಹವರಿಗೆ ಸಂವಿಧಾನ ಜಾಥಾ ಉತ್ತರ ಕೊಡಲಿದೆ ಎಂದು ಅವರು ಹೇಳಿದರು.
ಸಂವಿಧಾನ ಬದಲಿಸುತ್ತೇವೆ ಎನ್ನುತ್ತಾರೆ. ಕೆಲವರು ಸಂವಿಧಾನ ಮನುಶಾಸ್ತ್ರಕ್ಕೆ ಅನುಗುಣವಾಗಿಲ್ಲ ಎನ್ನುತ್ತಾರೆ. ಇದಕ್ಕೆಲ್ಲ ಉತ್ತರ ಕೊಡಬೇಕಲ್ಲ. ಅದಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.