ಕನ್ನಡಪ್ರಭ ವಾರ್ತೆ ಮಂಡ್ಯಗಣರಾಜ್ಯೋತ್ಸವದ ಅಂಗವಾಗಿ ಜ.೨೬ರಿಂದ ಫೆ.೨೩ರವರೆಗೆ ಜಿಲ್ಲೆಯಲ್ಲಿ ಸಂವಿಧಾನ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಸಮಿತಿ ರಚನೆ ಕಾರ್ಯಕ್ರಮದಲ್ಲಿ ಯಾವುದೇ ಲೋಪ ಉಂಟಾಗದಂತೆ ನೋಡಿಕೊಳ್ಳಲು ಗ್ರಾಪಂ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಲಾಗುವುದು. ಜಾಥಾದ ಬಗ್ಗೆ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿ ತಾಲೂಕು ಮಟ್ಟದಲ್ಲಿ ಸಭೆ ನಡೆಸಿ. ಸಭೆಗೆ ಎಲ್ಲ ಸಂಘಟನೆಗಳ ಮುಂಖಡರನ್ನು ಆಹ್ವಾನಿಸುವಂತೆ ತಿಳಿಸಿದರು.
ಜಾಥಾದಲ್ಲಿ ಎಲ್‌ಇಡಿ ಡಿಸ್‌ಪ್ಲೇ ವಾಹನದಲ್ಲಿ ಸಂವಿಧಾನ ಜಾಗೃತಿ ಕುರಿತು ವಿಡಿಯೋ ಕ್ಲಿಪ್‌ಗಳನ್ನು ಪ್ರದರ್ಶಿಸಲಾಗುವುದು. ಇದರೊಂದಿಗೆ ಸ್ತಬ್ದಚಿತ್ರ ಹಾಗೂ ಕಲಾ ತಂಡಗಳು ಭಾಗವಹಿಸಿ ವಿಶೇಷ ಮೆರಗು ನೀಡಲಿದೆ ಎಂದರು.ಪ್ರಬಂಧ ಸ್ಪರ್ಧೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ನಡೆಸುವುದು. ಜಾಥಾ ತಮ್ಮ ಗ್ರಾಮಕ್ಕೆ ಆಗಮಿಸಿದಾಗ ಕಾರ್ಯಕ್ರಮ ಆಯೋಜಿಸಿ ಬಹುಮಾನ ವಿತರಣೆ ಮಾಡುವುದು. ಭಾರತದ ಸಂವಿಧಾನ ಪೀಠಿಕೆ, ನ್ಯಾಯ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಮತ್ತು ಅಂಬೇಡ್ಕರ್ ಪರಿಕಲ್ಪನೆ, ಬಸವಣ್ಣನವರ ವಚನಗಳು ಮತ್ತು ಭಾರತದ ಸಂವಿಧಾನದ ಪ್ರಸ್ತುತತೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಆಯೋಜಿಸುವಂತೆ ತಿಳಿಸಿದರು.
ಸಹಿ ಆಂದೋಲನ ನಡೆಯುವ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು, ಸಹಿ ಆಂದೋಲನವನ್ನೂ ನಡೆಸಿ ಕಾರ್ಯಕ್ರಮದ ಭಾವಚಿತ್ರವನ್ನು ವೆಬ್‌ಸೈಟ್‌ನಲ್ಲಿ ಅಪಲೋಡ್ ಮಾಡುವಂತೆ ತಿಳಿಸಿದರು.ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು ೨೩೩ ಗ್ರಾಮ ಪಂಚಾಯ್ತಿಗಳಿದ್ದು, ರೂಟ್‌ಮ್ಯಾಪ್ ಸಿದ್ಧಪಡಿಸುವ ಸಂದರ್ಭದಲ್ಲಿ ಐತಿಹಾಸಿಕ ಸ್ಥಳಗಳಿರುವ ರಸ್ತೆಗಳನ್ನು ಆಯ್ಕೆ ಮಾಡಿ ಎಂದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಮೂರ್ತಿ, ಸಮಾಜ ಕ್ಯಲಾಣ ಇಲಾಖೆಯ ಜಂಟಿ ನಿರ್ದೇಶಕ ಸಿದ್ದಲಿಂಗೇಶ್, ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದಾರ್, ನಗರಸಭೆ ಆಯುಕ್ತ ಆರ್.ಮಂಜುನಾಥ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.