ಕೊಟ್ಟೂರು: ಸಂವಿಧಾನ ಜಾಗೃತಿ ಜಾಥಾಕ್ಕೆ ಪಟ್ಟಣದಲ್ಲಿ ಮಂಗಳವಾರ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು. ರಥವನ್ನು ಸ್ವಾಗತಿಸಲು ಸಾವಿರಾರು ವಿದ್ಯಾರ್ಥಿಗಳು, ವಿವಿಧ ವೇಷ ಭೂಷಣಗಳನ್ನು ಧರಿಸಿದ್ದರಲ್ಲದೆ ಸಂವಿಧಾನ ಕುರಿತಾದ ಕಿರುನಾಟಕಗಳನ್ನು ಮೆರವಣಿಗೆಯುದ್ದಕ್ಕೂ ಪ್ರದರ್ಶಿಸಿ ಗಮನ ಸೆಳೆದರು.
ಇಲ್ಲಿನ ಮರಿಕೊಟ್ಟೂರೇಶ್ವರ ದೇವಸ್ಥಾನದಿಂದ ಆರಂಭಗೊಂಡ ಸಂವಿಧಾನ ಜಾಗೃತಿ ಜಾಥಾವನ್ನು ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ನಾಗರಿಕರು ಪಟ್ಟಣದ ವಿವಿದ ಬೀದಿಗಳಲ್ಲಿ ಮೆರವಣಿಗೆ ಮೂಲಕ ಬ್ಯಾಂಡ್ ಸೆಟ್ ಮತ್ತಿತರ ವಾದ್ಯಗಳ ಮೂಲಕ ಸಂಚರಿಸಿದರು.
ಇದೇ ಸಂದರ್ಭದಲ್ಲಿ ನೂತನ ಸಹಾಯಕ ಆಯುಕ್ತ ಚಿದಾನಂದ ಗುರುಸ್ವಾಮಿ ಸಂವಿಧಾನ ಪೀಠಿಕೆ ಓದಿದರು. ಜಾಥಾದ ಅಂಗವಾಗಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ. ನಸರುಲ್ಲ, ತಾಪಂ ಇಒ ವೈ. ರವಿಕುಮಾರ್, ಜಿಪಂ ಎಇಇ ಮಲ್ಲಿಕಾರ್ಜುನ, ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್ ದಿಡಗೂರು, ತಾಪಂ ನರೇಗಾ ಎಡಿ ವಿಜಯಕುಮಾರ್, ಪಪಂ ಸದಸ್ಯರಾದ ಜಿ. ಸಿದ್ದಯ್ಯ, ಜಗದೀಶ್ ತಗ್ಗಿನಕೇರಿ, ಡಿಎಸ್ಎಸ್ ಮುಖಂಡ ಮರಿಸ್ವಾಮಿ, ದುರುಗೇಶ್, ಹನುಮಂತಪ್ಪ, ಮಂಜುನಾಥ, ಕುಬೇರ, ವಿಷ್ಣು, ಇಸಿಒ ನಿಂಗಪ್ಪ, ಅಜ್ಜಪ್ಪ, ಮೈದೂರು ಶಶಿ ದಧರ, ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.