ನಾಳೆಯಿಂದ ಕನಕಗಿರಿಯಲ್ಲಿ ಸಂವಿಧಾನ ಜಾಗೃತಿ ಯಾತ್ರೆ

KannadaprabhaNewsNetwork | Published : Feb 9, 2024 1:45 AM

ಸಾರಾಂಶ

ವಿವಿಧ ವೃತ್ತಗಳ ಸ್ವಚ್ಛತೆ, ಪುಷ್ಪ ಸಮರ್ಪಣೆ, ಡೊಳ್ಳು ಕುಣಿತ, ಮಹಿಳಾ ಕಲಾ ತಂಡ, ಶಾಲಾ ಮಕ್ಕಳಿಂದ ಸ್ತಬ್ಧಚಿತ್ರ ಮೆರವಣಿಗೆ, ಜಾಗೃತಿ ಗೀತೆಗಳ ಪ್ರದರ್ಶನ ಸೇರಿದಂತೆ ಸಕಲ ವ್ಯವಸ್ಥೆಯೊಂದಿಗೆ ಶಿಸ್ತುಬದ್ಧ ಮೆರವಣಿಗೆ ನಡೆಸಲಾಗುವುದು.

ಕನಕಗಿರಿ: ಭಾರತ ಸಂವಿಧಾನ ಅಂಗೀಕಾರಗೊಂಡು ೭೫ ವರ್ಷ ಪೂರೈಸಿದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೈಗೊಂಡ ಸಂವಿಧಾನ ಜಾಗೃತಿ ಯಾತ್ರೆಯು ಫೆ.೧೦, ೧೧, ೧೨ರಂದು ತಾಲೂಕು ಕೇಂದ್ರ, ಗ್ರಾಪಂ ಕೇಂದ್ರಗಳಲ್ಲಿ ಸಂಚರಿಸಲಿದೆ.

ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತಾಲೂಕು ಆಡಳಿತ ಶಿಸ್ತುಬದ್ಧ ಕಾರ್ಯಕ್ರಮ ಆಯೋಜನೆಗೆ ನಿರ್ಧರಿಸಿದೆ.

ಸಭೆಯ ಅಧ್ಯಕ್ಷತೆ ವಹಿಸಿದ್ದ ವಿಶ್ವನಾಥ ಮುರುಡಿ ಮಾತನಾಡಿ, ಪಟ್ಟಣದ ವಿವಿಧ ವೃತ್ತಗಳ ಸ್ವಚ್ಛತೆ, ಪುಷ್ಪ ಸಮರ್ಪಣೆ, ಡೊಳ್ಳು ಕುಣಿತ, ಮಹಿಳಾ ಕಲಾ ತಂಡ, ಶಾಲಾ ಮಕ್ಕಳಿಂದ ಸ್ತಬ್ಧಚಿತ್ರ ಮೆರವಣಿಗೆ, ಜಾಗೃತಿ ಗೀತೆಗಳ ಪ್ರದರ್ಶನ ಸೇರಿದಂತೆ ಸಕಲ ವ್ಯವಸ್ಥೆಯೊಂದಿಗೆ ಶಿಸ್ತುಬದ್ಧ ಮೆರವಣಿಗೆ ನಡೆಸಲಾಗುವುದು. ಕಾರ್ಯಕ್ರಮದ ಯಶಸ್ವಿಗೆ ಸಾರ್ವಜನಿಕರು, ಸಂಘ-ಸಂಸ್ಥೆಗಳು ಪ್ರಮುಖರು ಸಹಕರಿಸುವಂತೆ ಕೋರಿದರು.

ಇನ್ನು ಫೆ.೧೦ರಂದು ಪಟ್ಟಣಕ್ಕೆ ಆಗಮಿಸುವ ಯಾತ್ರೆ ಸ್ವಾಗತಿಸಿಕೊಂಡು ಬಳಿಕ ವಿವಿಧ ಬೀದಿಗಳಲ್ಲಿ ಸಂಚಾರದ ಜತೆಗೆ ಸಂವಿಧಾನದ ಆಶಯ, ಉದ್ದೇಶವನ್ನು ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಬಸವೇಶ್ವರ ವೃತ್ತದಲ್ಲಿ ಯಾತ್ರೆಯು ಮುಕ್ತಾಯಗೊಳ್ಳಲಿದೆ. ನೆರೆದಿದ್ದವರೆಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಿಕೊಳ್ಳುವುದಾಗಿ ತಹಶೀಲ್ದಾರ ಮುರುಡಿ ತಿಳಿಸಿದರು.

ಕೊಪ್ಪಳ ರಸ್ತೆ ಮಾರ್ಗವಾಗಿ ತೆರಳುವ ಯಾತ್ರೆಯು ಅದೇ ದಿನ ಚಿಕ್ಕಮಾದಿನಾಳ, ಮುಸಲಾಪುರ, ಬಸರಿಹಾಳ, ಗೌರಿಪುರ, ಹುಲಿಹೈದರ ಗ್ರಾಮಗಳಲ್ಲಿ ಸಂಚರಿಸಲಿದೆ. ಇಲ್ಲಿಯೂ ಅರ್ಥಪೂರ್ಣ ಮತ್ತು ಜನರನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ಪಿಡಿಒಗಳಿಗೆ ಸೂಚಿಸಲಾಗಿದೆ ಎಂದು ತಾಪಂ ಇಒ ಚಂದ್ರಶೇಖರ ಕಂದಕೂರು ತಿಳಿಸಿದರು.

ನವಲಿಯಲ್ಲಿ ಕಾರ್ಯಕ್ರಮ:ಸಂವಿಧಾನ ಜಾಗೃತಿ ಯಾತ್ರೆಯನ್ನು ತಾಲೂಕಿನಲ್ಲಿ ವ್ಯವಸ್ಥಿತವಾಗಿ ನಡೆಸಲು ವಿವಿಧ ಇಲಾಖೆಗಳ ಅಧಿಕಾರಿಗಳು ಈಗಾಗಲೇ ಕಾರ್ಯ ಪ್ರವೃತ್ತರಾಗಿದ್ದಾರೆ. ಫೆ.೧೧ರಂದು ಹಿರೇಖೇಡ, ಸುಳೇಕಲ್, ಜರ‍್ಹಾಳ, ಚಿಕ್ಕಡಂಕನಕಲ್, ಸಂಜೆ ಕರಡೋಣ ಗ್ರಾಮ ತಲುಪಲಿದೆ. ಅಂದು ರಾತ್ರಿ ಇಲ್ಲಿಯೇ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇನ್ನು ಮರುದಿನ ಫೆ.೧೨ರಂದು ನವಲಿ ಗ್ರಾಮದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಸಮಾಜ ಕಲ್ಯಾಣಧಿಕಾರಿ ಶರಣಪ್ಪ ತಿಳಿಸಿದ್ದಾರೆ.ಗ್ರೇಡ್-೨ ತಹಶೀಲ್ದಾರ ವಿ.ಎಚ್ ಹೊರಪೇಟೆ, ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರೂಪಾಕ್ಷಯ್ಯ, ಪ್ರಮುಖರಾದ ಗಂಗಾಧರಸ್ವಾಮಿ ಕೆ., ಶರಣಬಸಪ್ಪ ಭತ್ತದ, ರಾಮನಗೌಡ ಬುನ್ನಟ್ಟಿ, ಕನಕಪ್ಪ ಬಿ., ಸಣ್ಣ ಕನಕಪ್ಪ, ವೆಂಕೋಬ ಭೋವಿ, ಶರಣಪ್ಪ ಸೋಮಸಾಗರ, ಸುಭಾಷ ಕೆ., ನಾಗೇಶ ಬಡಿಗೇರ, ರಾಮಣ್ಣ ಆಗೋಲಿ, ನೀಲಕಂಠ ಬಡಿಗೇರ, ಮಕ್ತುಂಸಾಬ ಚಳ್ಳಮರದ, ಬಾರೇಶ ಹಿರೇಖೇಡ, ವಿರೂಪಣ್ಣ ಕಲ್ಲೂರು, ನಾಗರಾಜ ತಳವಾರ ಇದ್ದರು.

Share this article