ಸಂವಿಧಾನ, ಮೀಸಲಾತಿ ತೆಗೆಯಲು ಬಿಜೆಪಿ ಹುನ್ನಾರ: ರಾಹುಲ್‌ ಗಾಂಧಿ

KannadaprabhaNewsNetwork | Published : May 3, 2024 1:01 AM

ಸಾರಾಂಶ

ಶಿವಮೊಗ್ಗದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಮಾತನಾಡಿ, ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬಿಜೆಪಿಯವರು ಸಂವಿಧಾನ ಹಾಗೂ ಮೀಸಲಾತಿ ತೆಗೆದು ಹಾಕಲು ಹೊರಟಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.ಇಲ್ಲಿನ ಅಲ್ಲಮಪ್ರಭು ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರಜಾಧ್ವನಿ-2 ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನಿ ಕಳೆದ 10 ವರ್ಷದಲ್ಲಿ ಕೇವಲ 22 ಮಂದಿಗಾಗಿ ಕೆಲಸ ಮಾಡಿದ್ದಾರೆ. ರಾಷ್ಟ್ರದ ಸಂಪತ್ತನ್ನು ಅಂಬಾನಿ, ಅದಾನಿ ಸೇರಿ 22 ಮಂದಿ ಜೇಬಿಗೆ ಹಾಕಿದ್ದಾರೆ. 22 ಮಂದಿ ಮಾಡಿದ್ದ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಅವರು ಕೇವಲ 22 ಮಂದಿ ಕೋಟ್ಯಧಿಪತಿ ಮಾಡಲು ಹೊರಟ್ಟಿದ್ದಾರೆ. ನಾವು ಕೋಟ್ಯಂತರ ಮಂದಿ ಕೋಟ್ಯಧಿಪತಿ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಚಾಟಿ ಬೀಸಿದರು.

ಕರ್ನಾಟಕದಲ್ಲಿ ಐದು ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಪ್ರತಿ ತಿಂಗಳು 2 ಸಾವಿರ ರುಪಾಯಿ, ವರ್ಷಕ್ಕೆ 24 ಸಾವಿರ ರುಪಾಯಿ ಮಹಿಳೆಯರ ಅಕೌಂಟ್‌ಗೆ ಹಣ ಹೋಗುತ್ತಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮೀ ಸ್ಕೀಂ ಇದ್ದಂತೆ ಮಹಾಲಕ್ಷ್ಮೀ ಯೋಜನೆಯನ್ನು ದೇಶಾದ್ಯಂತ ಜಾರಿಗೆ ತರಲಿದ್ದೇವೆ ಎಂದು ಹೇಳಿದರು.ಪ್ರತಿಯೊಂದು ಬಡ ಕುಟುಂಬದ ಪಟ್ಟಿ ಸಿದ್ದವಾಗುತ್ತಿದೆ. ಹೀಗೆ ಸಿದ್ದ ಮಾಡಿದ ಪ್ರತಿ ಕುಟುಂಬದಿಂದ ಓರ್ವ ಮಹಿಳೆಯನ್ನು ಆಯ್ಕೆ ಮಾಡಿ ಅವರ ಬ್ಯಾಂಕ್‌ ಖಾತೆಗೆ 1 ಲಕ್ಷ ರುಪಾಯಿ ಹಾಕಲಿದ್ದೇವೆ. ಅಂದರೆ ಪ್ರತಿ ತಿಂಗಳು 8500 ರುಪಾಯಿ ಜಮೆ ಆಗಲಿದೆ. ಪ್ರತಿ ವರ್ಷ ನಿಮಗೆ ಗೃಹಲಕ್ಷ್ಮೀ ಹಣ ಸೇರಿದಂತೆ ಕಾಂಗ್ರೆಸ್ ಸರ್ಕಾರದಿಂದ ಒಟ್ಟಾಗಿ 1.24 ಲಕ್ಷ ರು. ಬರುತ್ತದೆ ಎಂದು ವಿವರಿಸಿದರು.

ನಮ್ಮ ಯೋಜನೆಗಳ ಬಗ್ಗೆ ನರೇಂದ್ರ ಮೋದಿಯವರಿಗೆ ಭಯ ಹುಟ್ಟಿದೆ. ಏಕೆಂದರೆ ಅವರ ಕರೋಡ್ ಪತಿ ಮಿತ್ರರಿಗೆ ಈ ಯೋಜನೆ ಲಭ್ಯವಾಗುವುದಿಲ್ಲ ಎಂದು ವ್ಯಂಗ್ಯವಾಡಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ನರೇಗಾ ಕೂಲಿಯನ್ನು 400 ರು.ಗೆ ಹೆಚ್ಚಿಸಲಾಗುತ್ತದೆ. ಆಶಾ ಕಾರ್ಯಕರ್ತೆಯರ ವೇತನವನ್ನು ದ್ವಿಗುಣ ಮಾಡಲು ನಿರ್ಧರಿಸಿದ್ದೇವೆ. ರಾಷ್ಟ್ರದಲ್ಲಿನ ರೈತರ ಸಾಲಮನ್ನಾದ ನಿರ್ಧಾರ ಕೈಗೊಳ್ಳಲಾಗಿದೆ. ಬೆಂಬಲ ಬೆಲೆಯನ್ನು ನೀಡುವ ಕೆಲಸವನ್ನು ಮಾಡುತ್ತೇವೆ ಎಂದು ಪ್ರಣಾಳಿಕೆಯ ಪಟ್ಟಿ ನೀಡಿದರು.

ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ನಟ ದುನಿಯಾ ವಿಜಯ್, ಚುನಾವಣಾ ಉಸ್ತುವಾರಿ ಅನಿಲ್ ತಡಕಲ್ ಸೇರಿ ಹಲವರಿದ್ದರು.‘ಸಮಾನತೆ ಮಾತನಾಡೋರು ನಕ್ಸಲರೇ?; ನಡ್ಡಾ ಕ್ಷಮೆ ಕೇಳಲಿ’

ಸಮಾನತೆ ಬಗ್ಗೆ ಮಾತನಾಡುವವರು ನಕ್ಸಲರು ಎಂದು ಬಿಜೆಪಿ ಅಧ್ಯಕ್ಷರು ಹೇಳುತ್ತಾರೆ. ಇದು ಸಂವಿಧಾನದ ಮೇಲಿನ ಅತಿದೊಡ್ಡ ಆಕ್ರಮಣವಾಗಿದೆ. ಇದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಉತ್ತರಕೊಡಬೇಕು. ಜೆ.ಪಿ.ನಡ್ಡಾ ಹೇಳಿಕೆ ಸಂವಿಧಾನ ವಿರೋಧಿಯಾಗಿದ್ದು, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆಗ್ರಹಿಸಿದರು.ಕಾಂಗ್ರೆಸ್‌ ಮಂಗಳಸೂತ್ರ ಕಸಿದಿಲ್ಲ: ಮೋದಿಗೆ ಖರ್ಗೆ ತಿರುಗೇಟು

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಸಮಸ್ಯೆಗಳ ಬಗ್ಗೆ ಮಾತನಾಡುವಂತೆ ನಾವು ಒತ್ತಾಯಿಸಿದರೆ, ಅವರು ಮಹಿಳೆಯರ ಮಾಂಗಲ್ಯದ ಬಗ್ಗೆ ಮಾತನಾಡುತ್ತಾರೆ. ಇಷ್ಟು ವರ್ಷದಿಂದ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ಎಂದೂ ಹೆಣ್ಣು ಮಕ್ಕಳ ಮಾಂಗಲ್ಯ ಸೂತ್ರ ಕಸಿದುಕೊಂಡಿಲ್ಲ ಎಂದು ಹೇಳಿದರು.ಜಾತಿ ಗಣತಿ ಬಗ್ಗೆ ಪ್ರಧಾನಿಯವರು ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ದೇಶದಲ್ಲಿ ಮೊದಲು ಸಂವಿಧಾನ ಉಳಿಯಬೇಕು. ದೇಶದ ರಕ್ಷಣೆ ಆಗಬೇಕು. ಮೋದಿ ಸುಳ್ಳು ಹೇಳೋದೇ ಅವರ ಗ್ಯಾರಂಟಿ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಅಭ್ಯರ್ಥಿ ಗೀತಾ ಅವರನ್ನು ಅತಿ ಹೆಚ್ಚಿನ ಮತ ನೀಡುವ ಮೂಲಕ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

Share this article