ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಿಜೆಪಿಯಿಂದ ಮಾತ್ರ ಸಂವಿಧಾನ ರಕ್ಷಣೆ ಸಾಧ್ಯವಿದ್ದು, ಜನರಲ್ಲಿ ಸಂವಿಧಾನದ ಮೂಲ ತತ್ವದ ಅರಿವು ಮೂಡಿಸುವುದು ಅಗತ್ಯವಿದೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.ಭಾರತೀಯ ಜನತಾ ಪಾರ್ಟಿ ಜಿಲ್ಲಾ ಘಟಕದಿಂದ ನಗರದ ಜಿಲ್ಲಾ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಸಂವಿಧಾನ ದಿನದ ನಿತ್ಯ ಸಂವಿಧಾನ ಸಮ್ಮಾನ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ನ.26, 1949 ಡಾ.ಅಂಬೇಡ್ಕರ್ ನೇತೃತ್ವದಲ್ಲಿ ರಚನೆಯಾದ ಭಾರತದ ಸಂವಿಧಾನ ಸಂಸತ್ತಿನಲ್ಲಿ ಅಂಗೀಕಾರವಾದ ದಿನವನ್ನು ಸಂವಿಧಾನ ದಿನವೆಂದು 2015ರಿಂದ ಈಚೆಗೆ ಪ್ರದಾನಿ ಮೋದಿಯವರು ಘೋಷಣೆ ಮಾಡಿ ಆಚರಣೆಗೆ ತಂದರು. ಸಂವಿಧಾನವೇ ನಮ್ಮ ಆಡಳಿತ ವ್ಯವಸ್ಥೆ ಧರ್ಮಗಂಥ ಎಂದು ಗೌರವಿಸಿದ್ದು ಮೋದಿಯವರು. ನಾವೇ ಪ್ರಜಾಪ್ರಭುತ್ವದ ರಕ್ಷಕರು ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಸ್ವತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ಹೇಗೆ ಸಂವಿಧಾನ ವಿರೋಧಿಯಾಗಿ, ಪ್ರಜಾಪ್ರಭುತ್ವವದ ವಿರೋಧಿಯಾಗಿ ಕೆಲಸ ಮಾಡಿದೆ ಎಂಬ ಸತ್ಯ ಸಂಗತಿ ಜನರ ಮುಂದೆ ತರುವ ಕೆಲಸವನ್ನು ಈ ಅಭಿಯಾನ ಮಾಡಲಿದೆ ಎಂದರು.
ಸಿಟಿಜನ್ ಫಾರ್ ಸೋಷಿಯಲ್ ಜಸ್ಟಿಸ್ ಮತ್ತು ಇತರ ದಲಿತ ಹಿಂದುಳಿದ ವರ್ಗಗಳ ಸಂಘಟನೆಗಳ ಸಹಯೋಗದಲ್ಲಿ ರಾಜ್ಯಾದ್ಯಂತ್ಯ ನ.26 ರಿಂದ ಆರಂಭಗೊಂಡ ಸಂವಿಧಾನ ಸಮ್ಮಾನ್ ಅಭಿಯಾನ ಜ.26ರವರೆಗೆ ಎರಡು ತಿಂಗಳ ಕಾಲ ಪ್ರಜಾಪ್ರಭುತ್ವದ ಮೌಲ್ಯ ಎತ್ತಿಹಿಡಿಯಲು ನಡೆಯುತ್ತಿರುವ ಈ ಅಭಿಯಾನಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಪ್ರದಾನಿ ಮೋದಿಯವರ ಇಚ್ಚೆಯಂತೆ ಈ ಎರಡು ತಿಂಗಳ ಕಾಲ ಭಾರತೀಯ ಜನತಾ ಪಕ್ಷ ಸಂವಿಧಾನ ಸಮ್ಮಾನ ಅಭಿಯಾನ ಮಾಡಲಿದೆ. ಜಿಲ್ಲಾ, ತಾಲೂಕು ಕೇಂದ್ರ, ನಗರಸಭೆ, ಪುರಸಭೆಗಳ ವ್ಯಾಪ್ತಿ ಹಾಗೂ ಜಿಲ್ಲಾ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯಲ್ಲಿಯೂ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜೊತಗೆ ಶಾಲಾ ಕಾಲೇಜುಗಳಲ್ಲಿಯೂ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಮೂಲಕ ಜಾಗೃತಿ ಮೂಡಿಸಿ ನಂತರ ಜಿಲ್ಲಾ ಕೇಂದ್ರದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದರು.
ಸಂವಿಧಾನ ಸಮ್ಮಾನ ಅಭಿಯಾನದ ರಾಜ್ಯ ಸಮಿತಿ ಸದಸ್ಯ ಜಗದೀಶ ಹಿರೇಮನಿ ಮಾತನಾಡಿ, ಕೇಂದ್ರದ ಬಿಜೆಪಿ ಆಡಳಿತದಲ್ಲಿ ಸಂವಿಧಾನ ಭದ್ರವಾಗಿದೆ. ಸುರಕ್ಷಿತವಾಗಿ ಮತ್ತು ಸುರಕ್ಷಿತವಾದವರ ಕೈಯಲ್ಲಿ ಸಂವಿಧಾನವಿದೆ. ಆ ಸಂವಿಧಾನವನ್ನು ಸಂರಕ್ಷಣೇ ಮಾಡುತ್ತೇವೆ ಎಂಬ ಸಂಕಲ್ಪವನ್ನು ಅಭಿಯಾನದ ಮೂಲಕ ಮಾಡುತ್ತಿದ್ದೇವೆ ಎಂದರು.ಕಾರ್ಯಕ್ರಮದಲ್ಲಿ ಬಾದಾಮಿ ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ.ವಿಜಯಲಕ್ಷ್ಮೀ ತುಂಗಳ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸುಮೇಧಾ ಮಾನೆ, ನಗರಸಭೆ ಅಧ್ಯಕ್ಷೆ ಸವಿತಾ ಲಂಕೆನ್ನವರ, ಎಸಿ ಮೋರ್ಚಾ ಜಿಲ್ಲಾಧ್ಯಕ್ಷ ಮುತ್ತಣ್ಣ ಬೆಣ್ಣೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಮಲ್ಲಯ್ಯ ಮುಗನೂರಮಠ, ಯಲ್ಲಪ್ಪ ಬೆಂಡಿಗೇರಿ ಶಿವಾನಂದ ಟವಳಿ, ತಪ್ಪಣ್ಣ ಸಂಜೀವಪ್ಪಗೋಳ, ಸಂಗಮೇಶ ದಳವಾಯಿ, ಅಭಿಯಾನ ಸಂಯೋಜಕರಾದ ಕೆ.ಡಿ.ಜ್ಯೋತಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಕಾರ್ಯಕ್ರಮಸದಲ್ಲಿ ಸಂವಿಧಾನ ಪೀಠಿಕೆ ಓದುವ ಮೂಲಕ ಸಂವಿಧಾನ ರಕ್ಷಣೆ ಪ್ರಮಾಣ ಮಾಡಲಾಯಿತು.