ತೆರಿಗೆ ವಸೂಲಿ: ಗುರಿ ಮುಟ್ಟದಿದ್ದರೆ ವರ್ಗಾವಣೆ ಶಿಕ್ಷೆ

KannadaprabhaNewsNetwork |  
Published : Dec 06, 2024, 08:57 AM IST
ಸಿಕೆಬಿ-11 ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸಚಿವ ಡಾ. ಎಂ.ಸಿ. ಸುಧಾಕರ್ ಮಾತನಾಡಿದರು | Kannada Prabha

ಸಾರಾಂಶ

ಜಿಲ್ಲೆಯ ನಗರ ಆಡಳಿತ ಸಂಸ್ಥೆಗಳಾದ ನಗರಸಭೆ, ಪಟ್ಟಣ ಪಂಚಾಯ್ತಿ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ತೆರಿಗೆ ಹಾಗೂ ಕರ ವಸೂಲಿ ಸಮರ್ಪಕವಾಗಿ ಆಗುತ್ತಿಲ್ಲ. ಮುಂದಿನ ಒಂದು ತಿಂಗಳಲ್ಲಿ ನಿಗದಿತ ಗುರಿ ನೀಡಿ ಬಿಲ್ ಕಲೆಕ್ಟರ್ ಹಾಗೂ ಇತರೆ ಸಿಬ್ಬಂದಿಗೆ ಚುರುಕು ಮುಟ್ಟಿಸಬೇಕು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಬಾಗೇಪಲ್ಲಿ ನಗರಕ್ಕೆ ಸಾಕಾಗುವಷ್ಟು ಕುಡಿಯುವ ನೀರು ಚಿತ್ರಾವತಿ ಜಲಾಶಯದಲ್ಲಿ ಲಭ್ಯ ಇರುವುದರಿಂದ ನಗರದ ಎಲ್ಲ ವಾರ್ಡ್‌ಗಳಿಗೆ ಪೈಪ್ ಲೈನ್ ಅಳವಡಿಸಿ ನೀರು ಪೂರೈಕೆ ಮಾಡಲು ಅಗತ್ಯ ಕ್ರಮವಹಿಸಿ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ, ಬಾಗೇಪಲ್ಲಿ ನಗರಕ್ಕೆ ನೀರು ಜಲಾಶಯದಿಂದ ಲಭ್ಯವಿದ್ದರೂ ಸಮರ್ಪಕವಾಗಿ ನೀರು ಪೂರೈಸಲು ಸಾಧ್ಯವಾಗಿರಲಿಲ್ಲ ಎಂದರು. ತೆರಿಗೆ ವಸೂಲಿ ಆಗುತ್ತಿಲ್ಲ

ಜಿಲ್ಲೆಯ ನಗರ ಆಡಳಿತ ಸಂಸ್ಥೆಗಳಾದ ನಗರಸಭೆ, ಪಟ್ಟಣ ಪಂಚಾಯ್ತಿ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ತೆರಿಗೆ ಹಾಗೂ ಕರ ವಸೂಲಿ ಸಮರ್ಪಕವಾಗಿ ಆಗುತ್ತಿಲ್ಲ. ಜಿಲ್ಲೆಯಲ್ಲಿ ನಗರ ಆಡಳಿತ ಸಂಸ್ಥೆ ವ್ಯಾಪ್ತಿಯ ಶಿಡ್ಲಘಟ್ಟದಲ್ಲಿ 4 ಲಕ್ಷ, ಗುಡಿಬಂಡೆಯಲ್ಲಿ 2.5 ಲಕ್ಷ, ಬಾಗೇಪಲ್ಲಿಯಲ್ಲಿ 3.5 ಲಕ್ಷ, ಗೌರಿಬಿದನೂರಿನಲ್ಲಿ 40 ಲಕ್ಷ, ಚಿಕ್ಕಬಳ್ಳಾಪುರದಲ್ಲಿ 1.5 ಕೋಟಿ ಹಾಗೂ ಚಿಂತಾಮಣಿ ನಗರಸಭೆ ವ್ಯಾಪ್ತಿಯಲ್ಲಿ 2.5 ಕೋಟಿ ಕರವಸೂಲಿ ಮಾಡಿ ಖಾತೆಗಳಲ್ಲಿಡಲಾಗಿದೆ ಎಂದರು.

ಶಿಡ್ಲಘಟ್ಟ, ಬಾಗೇಪಲ್ಲಿ ಹಾಗೂ ಗುಡಿಬಂಡೆ ವ್ಯಾಪ್ತಿಯಲ್ಲಿ ಕರ ವಸೂಲಿ ಸಮರ್ಪಕವಾಗಿ ನಿರ್ವಹಿಸಲು ಮುಂದಿನ ಒಂದು ತಿಂಗಳಲ್ಲಿ ನಿಗದಿತ ಗುರಿ ನೀಡಿ ಬಿಲ್ ಕಲೆಕ್ಟರ್ ಹಾಗೂ ಇತರೆ ಸಿಬ್ಬಂದಿಗೆ ಚುರುಕು ಮುಟ್ಟಿಸಬೇಕು. ಸರಿಯಾಗಿ ಕೆಲಸ ನಿರ್ವಹಿಸದ ಸಿಬ್ಬಂದಿಯನ್ನು ಮುಂದಿನ ವರ್ಷದ ಜನವರಿಯಲ್ಲಿ ಬೇರೆಡೆ ವರ್ಗಾಯಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಲಜೀವನ್ ಯೋಜನೆ

ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರನ್ನು ಪೂರೈಸುವ ಜಲಜೀವನ್ ಮಿಷನ್ ಯೋಜನೆ ಜಿಲ್ಲೆಯಲ್ಲಿ ಪ್ರಗತಿಯಲ್ಲಿದ್ದು, ಎಲ್ಲಾ ಗ್ರಾಮಗಳ ಟೆಂಡರ್ ಕರೆಯಲಾಗಿದೆ. ಜಿಲ್ಲೆಯ 1640 ಗ್ರಾಮಗಳಲ್ಲಿಯೂ ಜಲಜೀವನ್ ಮಿಷನ್ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಎಲ್ಲಾ ಗ್ರಾಮಗಳಲ್ಲೂ ಕಾಮಗಾರಿ ಪ್ರಾರಂಭವಾಗಿದ್ದು, ಇನ್ನು 134 ಗ್ರಾಮಗಳಲ್ಲಿ ಮಾತ್ರ ಕಾಮಗಾರಿ ಆರಂಭವಾಗಬೇಕಾಗಿದೆ ಎಂದು ತಿಳಿಸಿದರು. ಜಿಲ್ಲೆ ನಗರ ಮತ್ತು ಪಟ್ಟಣ ಪ್ರದೇಶಗಳ ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು ಕೆರೆಗಳ ನೀರನ್ನು ಶುದ್ಧೀಕರಿಸಿ ಪೂರೈಸುವ ಉದ್ದೇಶವಿದ್ದು, ಗೌರಿಬಿದನೂರು ತಾಲ್ಲೂಕು ವಾಟದ ಹೊಸಹಳ್ಳಿ ಕೆರೆಯ ನೀರನ್ನು ಪೂರೈಸುವ 69 ಕೋಟಿ ರೂಪಾಯಿ ಯೋಜನೆ ಸಿದ್ದವಾಗಿದೆ. ಜಿಲ್ಲೆಯ ಇತರೆ ತಾಲೂಕುಗಳ ಕೆರೆಗಳ ನೀರನ್ನು ಕುಡಿಯುವ ನೀರಿಗೆ ಬಳಸಿಕೊಳ್ಳಲು ಯೋಜನೆಗಳನ್ನು ಸಿದ್ಧಪಡಿಸಲಾಗಿದೆ. ಜಕ್ಕಲಮಡುಗು ಜಲಾಶಯದ ಸಂಗ್ರಹಣಾ ಸಾಮರ್ಥ್ಯವನ್ನು ವಿಸ್ತರಿಸುವ ಚಿಂತನೆಯೂ ಸರ್ಕಾರದ ಮುಂದಿದೆ ಎಂದರು. ಬೆಳೆ ನಷ್ಟ ಸಮೀಕ್ಷೆಗೆ ಸೂಚನೆ

ಅಕ್ಟೋಬರ್ ಮಾಹೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು ಜಡಿ ಮಳೆಯಿಂದಾಗಿ ರಾಗಿ ಬೆಳೆಯು ಹೆಚ್ಚು ಹಾನಿಗೆ ಒಳಪಟ್ಟಿದೆ. ಈ ಕುರಿತು ಪರಿಶೀಲನೆ ಮಾಡಿ ಪರಿಹಾರ ನೀಡಲು ಕ್ರಮ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಡಿಸೆಂಬರ್ ಮಾಹೆಯವರಗೆ ಜಿಲ್ಲೆಯಲ್ಲಿ ಒಟ್ಟು 87.06 ಹೆಕ್ಟರ್ ನಷ್ಟು ಬೆಳೆಗಳು ಹಾನಿಯಾಗಿದ್ದು 139 ಜನ ರೈತರು ನಷ್ಟ ಅನುಭವಿಸಿದ್ದಾರೆ. ಇವರಿಗೆ ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಶಾಸಕ ಬಿ.ಎನ್.ರವಿಕುಮಾರ್, ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಜಿಪಂ ಸಿಇಒ ಪ್ರಕಾಶ್ ಜಿ.ಟಿ ನಿಟ್ಟಾಲಿ, ಎಸ್ಪಿ ಕುಶಲ್ ಚೌಕ್ಸೆ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್, ಅಪರ ಡೀಸಿ ಡಾ. ಭಾಸ್ಕರ್, ಎಸಿ ಡಿ.ಎಚ್ ಅಶ್ವಿನ್, ಭೂ ಅಭಿವೃದ್ಧಿ ಬ್ಯಾಂಕ್ ನ ಸೊಣ್ಣೇಗೌಡ, ಜಿಪಂ ಉಪಕಾರ್ಯದರ್ಶಿ ಅತಿಕ್ ಪಾಷಾ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಜೆಟಲ್ಲಿ ಹೇಳಿದಂತೆ 15 ಸಾವಿರ ಶಿಕ್ಷಕರ ಹುದ್ದೆ ಭರ್ತಿ ಶೀಘ್ರ: ಮಧು
ಬೆಂಗಳೂರಿನ ಕೊಳಚೆ ನೀರಿಂದ ತರಕಾರಿಯೂ ವಿಷ : ಸಂಸತ್ತಲ್ಲಿ ಗೌಡ