ತುಂಗ, ಭದ್ರಾ, ಕೃಷ್ಣಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಕೆಲವೆಡೆ ಗುಡ್ಡ ಕುಸಿದು, ಮನೆಗಳಿಗೆ ಹಾನಿ ಆಗಿದೆ.ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆಯಿಂದ ತುಂಗ, ಭದ್ರ ನದಿಗಳು ಅಪಾಯದ ಮಟ್ಟದ ಮೀರಿ ಹರಿಯುತ್ತಿವೆ. ರಸ್ತೆ ಸಂಪರ್ಕ ಕಡಿತಗೊಂಡಿದೆ. ಗುಡ್ಡ ಕುಸಿತ, ಮನೆಗಳಿಗೆ ನೀರು ನುಗ್ಗಿದೆ. ಭದ್ರ ಡ್ಯಾಂಗೆ 12,983 ಕ್ಯೂಸೆಕ್ಸ್‌ ಒಳಹರಿವು ಬರುತ್ತಿದೆ.

ಬೆಂಗಳೂರು: ರಾಜ್ಯದ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಉತ್ತಮ ಮಳೆ ಆಗುತ್ತಿದೆ. ಇದರಿಂದ ಪಶ್ಚಿಮ ಘಟ್ಟದಲ್ಲಿ ಹುಟ್ಟುವ ನದಿಗಳಿಗೆ ಜೀವ ಕಳೆ ಬಂದಿದೆ. ಮಳೆಯಿಂದಾಗಿ ಕೆಲವೆಡೆ ಅನಾಹುತಗಳೂ ಆಗಿವೆ. ಪ್ರವಾಹದಿಂದಾಗಿ ಬಂದ್‌ ಆಗಿದ್ದ ರಸ್ತೆಯಲ್ಲಿ ಅರಿವಿಲ್ಲದೆ ಬಂದ ಕಾರು ನೀರಿನಲ್ಲಿ ಸಿಲುಕಿದ್ದು ಕುಟುಂಬವು ಕಾರನ್ನು ಏರಿ ಜೀವ ಉಳಿಸಿಕೊಂಡ ಘಟನೆ ನಡೆದಿದೆ.

ರೆಡ್‌ ಅಲರ್ಟ್‌

 ತುಂಗ, ಭದ್ರಾ, ಕೃಷ್ಣಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಕೆಲವೆಡೆ ಗುಡ್ಡ ಕುಸಿದು, ಮನೆಗಳಿಗೆ ಹಾನಿ ಆಗಿದೆ.ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆಯಿಂದ ತುಂಗ, ಭದ್ರ ನದಿಗಳು ಅಪಾಯದ ಮಟ್ಟದ ಮೀರಿ ಹರಿಯುತ್ತಿವೆ. ರಸ್ತೆ ಸಂಪರ್ಕ ಕಡಿತಗೊಂಡಿದೆ. ಗುಡ್ಡ ಕುಸಿತ, ಮನೆಗಳಿಗೆ ನೀರು ನುಗ್ಗಿದೆ. ಭದ್ರ ಡ್ಯಾಂಗೆ 12,983 ಕ್ಯೂಸೆಕ್ಸ್‌ ಒಳಹರಿವು ಬರುತ್ತಿದೆ. ಜಿಲ್ಲೆಗೆ ಭಾನುವಾರ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

ಇನ್ನು ಕೊಡಗಿನ ಹಾರಂಗಿ ಜಲಾಶಯದ ಮುಂಭಾಗದ ಸೇತುವೆ ಮುಳುಗಡೆಯಾಗಿದೆ. ಬ್ರಹ್ಮಗಿರಿ ತಪ್ಪಲು ಪ್ರದೇಶ, ತಲಕಾವೇರಿ ವ್ಯಾಪ್ತಿಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದೆ. ತ್ರಿವೇಣಿ ಸಂಗಮದ ಉದ್ಯಾನವನ ಮುಳುಗಡೆಯಾಗಿದೆ. ಮಡಿಕೇರಿ ನಗರದಲ್ಲಿ ನಿರ್ಮಾಣ ಹಂತದ ಮನೆ, ತಾಲೂಕಿನ ಮದೆ ಗ್ರಾಮದಲ್ಲಿ ಬರೆ ಕುಸಿದು ಮನೆ, 2ನೇ ಮೊಣ್ಣಂಗೇರಿ ಗ್ರಾಮದ ಸಂಪರ್ಕ ರಸ್ತೆಗೆ ಬರೆ, ಶ್ರೀಮಂಗಲ ಹೋಬಳಿ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ಮನೆಯ ಗೋಡೆ ಕುಸಿದಿವೆ.

ನಾರಾಯಣಪುರದ ಬಸವಸಾಗರ ಜಲಾಶಯ ಭರ್ತಿ

ಮಹಾರಾಷ್ಟ್ರದ ಪಶ್ಚಿಮಘಟ್ಟಗಳಲ್ಲಿ ಹಾಗೂ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯ ಭರ್ತಿಯಾಗಿದೆ. ಕೃಷ್ಣಾ ನದಿಗೆ 1.5 ಲಕ್ಷ ಕ್ಯೂಸೆಕ್ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ.

ಶಿವಮೊಗ್ಗದ ಬಳಿ ತುಂಗಾ ನದಿಯಲ್ಲಿ ನೀರಿನ ಹರಿವು ಗಣನೀಯವಾಗಿ ಹೆಚ್ಚಾಗಿದೆ. ತುಂಗಾ ಜಲಾಶಯದ 22 ಗೇಟ್‌ ತೆರೆದು ನೀರು ನದಿಗೆ ಹರಿಸಲಾಗುತ್ತಿದೆ. ಆಗುಂಬೆ ಮತ್ತು ಅಗ್ರಹಾರ ಹೋಬಳಿಯ ಅರಳಸುರುಳಿ ನೊಣಬೂರು ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿದೆ. ಮಾಲತಿ ನದಿಯಲ್ಲಿ ನೀರಿನ ಏರಿಕೆಯಾಗಿದ್ದು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಕಾರಿನ ಮೇಲೇರಿದ ಕುಟುಂಬ:

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಮಾಲತಿ ಹೊಳೆ ಉಕ್ಕಿ ಹರಿಯುತ್ತಿದ್ದು, ಹೊಳೆಯಲ್ಲಿ ಕಾರು ಸಿಲುಕಿ ಹೊನ್ನಾವರ ಮೂಲದ ಕುಟುಂಬವೊಂದು ಪರದಾಡಿದ ಘಟನೆ ನಡೆದಿದೆ. ಸ್ಥಳೀಯರು ಕಾರಿಗೆ ಹಗ್ಗ ಕಟ್ಟಿ ಸುರಕ್ಷಿತ ಸ್ಥಳಕ್ಕೆ ತಂದಿದ್ದಾರೆ. ಇನ್ನು ಶೃಂಗೇರಿಯಲ್ಲಿ ಶನಿವಾರ ಗಾಳಿ ಮಳೆ ಪ್ರವಾಹದ ಅಬ್ಬರ ಮುಂದುವರೆದಿದ್ದರೂ ಶ್ರೀ ಮಠದಲ್ಲಿ ಭಕ್ತರ ನೂಕು ನುಗ್ಗಲು ಕಂಡುಬಂದಿತು. ನೇತ್ರಾವತಿ ನದಿಯಲ್ಲೂ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಅಪಾಯ ಮಟ್ಟಕ್ಕೆ ಕೆಲವೇ ಮೀಟರ್‌ ಬಾಕಿ ಇದ್ದು ತಗ್ಗು ಪ್ರದೇಶದ ಜನರ ಸ್ಥಳಾಂತರ ನಡೆಯುತ್ತಿದೆ.