ಸಂವಿಧಾನ ಬದಲು: ಡಿಕೆಶಿ ಹೇಳಿಕೆ ವಿರೋಧಿಸಿ ಮಂಗಳೂರಲ್ಲಿ ಬಿಜೆಪಿ ಪ್ರತಿಭಟನೆ

KannadaprabhaNewsNetwork |  
Published : Mar 26, 2025, 01:34 AM IST
ಶಾಸಕ ವೇದವ್ಯಾಸ್‌ ಕಾಮತ್‌ ಮಾತನಾಡುತ್ತಿರುವುದು | Kannada Prabha

ಸಾರಾಂಶ

ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ನೀಡಿದ ‘ಸಂವಿಧಾನ ಬದಲು’ ಹೇಳಿಕೆಯನ್ನು ವಿರೋಧಿಸಿ ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ಮಂಗಳವಾರ ಮಂಗಳೂರಿನ ಕುದ್ಮುಲ್‌ ರಂಗರಾವ್‌ ಪುರಭವನ ಅವರಣದ ಅಂಬೇಡ್ಕರ್‌ ಪ್ರತಿಮೆ ಬಳಿ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ನೀಡಿದ ‘ಸಂವಿಧಾನ ಬದಲು’ ಹೇಳಿಕೆಯನ್ನು ವಿರೋಧಿಸಿ ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ಮಂಗಳವಾರ ಮಂಗಳೂರಿನ ಕುದ್ಮುಲ್‌ ರಂಗರಾವ್‌ ಪುರಭವನ ಅವರಣದ ಅಂಬೇಡ್ಕರ್‌ ಪ್ರತಿಮೆ ಬಳಿ ಪ್ರತಿಭಟನೆ ನಡೆಯಿತು.

ಪ್ರತಿಭಟನಕಾರರು ಡಿ.ಕೆ. ಶಿವಕುಮಾರ್‌ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ದೇಶದ ಜನರ ಬಳಿ ಕ್ಷಮೆ ಕೇಳುವಂತೆ ಒತ್ತಾಯಿಸಿದರು.ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ಶಿವಕುಮಾರ್‌ ಹೇಳಿಕೆಯನ್ನು ಕಾಂಗ್ರೆಸ್‌ ಪಕ್ಷ ಯಾವ ರೀತಿ ಸ್ವೀಕರಿಸುತ್ತದೆ ಎಂದು ಸ್ಪಷ್ಟಪಡಿಸಬೇಕು. ಅಂಬೇಡ್ಕರ್‌ ಜೀವಂತ ಇದ್ದಾಗ ಮರ್ಯಾದೆ ಕೊಡದವರು, ಈಗ ಅವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದೀರಿ. ಈ ಹಿಂದೆ ಸಂವಿಧಾನದಲ್ಲಿ ತಿದ್ದುಪಡಿಯ ಬಗ್ಗೆ ಅಮಿತ್‌ ಷಾ ಅವರ ಹೇಳಿಕೆ ಖಂಡಿಸಿ ಜಿಲ್ಲೆಯಲ್ಲಿ ಬಂದ್‌ಗೆ ಕರೆ ಕೊಟ್ಟವರು ಈಗ ಎಲ್ಲಿ ಅಡಗಿ ಕುಳಿತಿದ್ದಾರೆ. ಸಾವಿರಾರು ಡಿಕೆಶಿ ಬಂದರೂ ಸಂವಿಧಾನ ತಿದ್ದಲು ನಾವು ಬಿಡುವುದಿಲ್ಲ ಎಂದರು.ಮಂಗಳೂರು ಉತ್ತರ ಶಾಸಕ ಡಾ. ಭರತ್‌ ಶೆಟ್ಟಿ ಮಾತನಾಡಿ, ನಾವೇ ಸಂವಿಧಾನ ತಜ್ಞರು ಎಂದು ಹೇಳುತ್ತಿದ್ದ ಕಾಂಗ್ರೆಸ್‌ನ ನೈಜಮುಖ ಈಗ ಬಯಲಾಗಿದೆ. ಈಗ ಪ್ರತಿಯೊಬ್ಬರಿಗೂ ಕಾಂಗ್ರೆಸ್‌ ಹಿಂದು, ದಲಿತ ವಿರೋಧಿ ಎಂದು ಗೊತ್ತಾಗಿದೆ. ಹೀಗಾದರೆ ಇನ್ನು ಜೀವಮಾನವಿಡೀ ಕಾಂಗ್ರೆಸ್‌ ಆಡಳಿತ ಪಕ್ಷವಾಗಿ ಅಧಿಕಾರ ಸ್ವೀಕರಿಸುವುದಿಲ್ಲ, ಡಿಕೆಶಿ ದೇಶದ ಜನರಲ್ಲಿ ಕ್ಷಮೆ ಕೋರಬೇಕು ಎಂದು ಹೇಳಿದರು.ಬೆಳ್ತಂಗಡಿ ಶಾಸಕ ಹರೀಶ ಪೂಂಜಾ ಮಾತನಾಡಿ, ಸಂವಿಧಾನ ಕುರಿತಂತೆ ಕಾಂಗ್ರೆಸ್‌ನ ನಿಜ ಬಣ್ಣ ಈಗಾಗಲೇ ಹಲವು ಬಾರಿ ಬಯಲಾಗಿದೆ. ಸಂವಿಧಾನ ಬಗ್ಗೆ ಗೌರವವಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆವರು ಶಿವಕುಮಾರ್‌ ಹೇಳಿಕೆ ಖಂಡಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಮಾತನಾಡಿ, ಸಂವಿಧಾನವನ್ನು ಬದಲಾವಣೆ ಮಾಡಿ ಮುಸಲ್ಮಾನರಿಗೆ ಮಾತ್ರ ಮೀಸಲಾತಿ ವ್ಯವಸ್ಥೆಯನ್ನು ತರಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ. ಈ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಉದ್ದೇಶ ಹೊಂದಿದೆ. ಓಟ್‌ಬ್ಯಾಂಕ್‌ ರಾಜಕಾರಣಕ್ಕಾಗಿ ಕಾಂಗ್ರೆಸ್‌ ಯಾವುದೇ ಹಂತಕ್ಕೂ ಹೋಗಲು ಸಿದ್ಧವಿದೆ ಎಂದು ಈಗಾಗಲೇ ಹಲವು ಸಂದರ್ಭಗಳಲ್ಲಿ ಸಾಬೀತಾಗಿದೆ. ಶಿವಕುಮಾರ್‌ ಅವರ ಹೇಳಿಕೆಯನ್ನು ಖಂಡಿಸಿ, ಜಿಲ್ಲೆಯ ಎಲ್ಲ ವಿಧಾನಸಭೆ ಮಟ್ಟದಲ್ಲಿ ಪ್ರತಿಭಟನೆ, ಹೋರಾಟ ನಡೆಸಲಾಗುವುದು ಎಂದರು.

ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್‌ ಸದಸ್ಯ ಕಿಶೋರ್‌ ಕುಮಾರ್‌ ಬೊಟ್ಯಾಡಿ, ವಿಧಾನ ಪರಿಷತ್‌ ಮಾಜಿ ಸದಸ್ಯರಾದ ಕ್ಯಾ. ಗಣೇಶ್‌ ಕಾರ್ಣಿಕ್‌, ಮೋನಪ್ಪ ಭಂಡಾರಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಡಾ. ಮಂಜುಳಾ ರಾವ್‌, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್‌ ಮಲ್ಯ, ಪದಾಧಿಕಾರಿಗಳಾದ ಜಗನ್ನಾಥ ಬೆಳುವಾಯಿ, ಗಣೇಶ್‌ ಗೌಡ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ