26ಕ್ಕೆ ಸಂವಿಧಾನ ಸಂರಕ್ಷರ ಸಮಾವೇಶ: ಕರಪತ್ರ ಬಿಡುಗಡೆ

KannadaprabhaNewsNetwork | Published : Apr 23, 2025 12:35 AM

ಸಾರಾಂಶ

ಏ.26ರಂದು ಬೆಳಗ್ಗೆ 11 ಗಂಟೆಗೆ ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನ ಆವರಣ, ಹೈಸ್ಕೂಲ್ ಮೈದಾನದಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶ ನಡೆಯಲಿದೆ. ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳಿಂದ ಸಾವಿರಾರು ಜನ ಭಾಗಿಯಾಗಲಿದ್ದೇವೆ ಎಂದು ಪ್ರಜಾ ಪರಿವರ್ತನಾ ವೇದಿಕೆ ರಾಜ್ಯ ಸಂಚಾಲಕ ಎ.ಡಿ. ಈಶ್ವರಪ್ಪ ಹೇಳಿದ್ದಾರೆ.

- ಹೊನ್ನಾಳಿ, ನ್ಯಾಮತಿ ತಾಲೂಕುಗಳಿಂದ ಸಾವಿರಾರು ಜನ ಭಾಗಿ: ಎ.ಡಿ.ಈಶ್ವರಪ್ಪ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಏ.26ರಂದು ಬೆಳಗ್ಗೆ 11 ಗಂಟೆಗೆ ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನ ಆವರಣ, ಹೈಸ್ಕೂಲ್ ಮೈದಾನದಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶ ನಡೆಯಲಿದೆ. ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳಿಂದ ಸಾವಿರಾರು ಜನ ಭಾಗಿಯಾಗಲಿದ್ದೇವೆ ಎಂದು ಪ್ರಜಾ ಪರಿವರ್ತನಾ ವೇದಿಕೆ ರಾಜ್ಯ ಸಂಚಾಲಕ ಎ.ಡಿ. ಈಶ್ವರಪ್ಪ ಹೇಳಿದರು.

ಮಂಗಳವಾರ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ದಾವಣಗೆರೆ ಚಲೋ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮದ ಕರಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು. ರಾಜ್ಯದ ಪ್ರತಿ ಊರು, ಕೇರಿ, ಹಾಡಿ, ಮೊಹಲ್ಲಾಗಳಲ್ಲಿ ಸಂವಿಧಾನ ಸಂರಕ್ಷಣಾ ಪಡೆ ಕಟ್ಟುವ ಮಹಾಯಾನಕ್ಕೆ ಚಾಲನೆಯಾಗಿ ಈ ಸಮಾವೇಶ ನಡೆಯಲಿದೆ. ಪ್ರತಿ ಜಿಲ್ಲೆಯಿಂದ ಸಂರಕ್ಷಕ ತಂಡಗಳ ಮಹಾಪೂರ ಹರಿದುಬರಲಿದೆ ಎಂದರು.

ಸಂವಿಧಾನದ ಹೊತ್ತಿಗೆಯನ್ನು ಸುಡುವ, ಅದರ ಆಶಯಗಳನ್ನು ತಿರುಚಿ ಹೇಳುವ ಮತ್ತು ಸಂವಿಧಾನವನ್ನು ಬದಲಿಸುವ ಮಾತುಗಳು ಇತ್ತೀಚೆಗೆ ಹೆಚ್ಚಾಗಿ ಕೇಳಿಬರುತ್ತಿವೆ. ಈ ನಡವಳಿಕೆಗಳ ವಿರುದ್ಧವಾಗಿ, ಇದನ್ನು ಖಂಡಿಸುವ ಸಲುವಾಗಿ ಮತ್ತು ಸಂವಿಧಾನವನ್ನು ಸಂರಕ್ಷಿಸುವ ಸಲುವಾಗಿ ಈ ಸಮಾವೇಶ ನಡೆಯಲಿದೆ ಎಂದರು.

ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಎಚ್.ಎ. ಉಮಾಪತಿ ಮಾತನಾಡಿ, ಸಮಾವೇಶಕ್ಕೆ ರಾಷ್ಚ್ರ ಹಾಗೂ ರಾಜ್ಯ ನಾಯಕರು ಬರಲಿದ್ದಾರೆ. ದುಡಿಯುವ ವರ್ಗದ ಹೋರಾಟಗಳಿಗೆ ಹೆಸರಾಗಿರುವ ದಾವಣಗೆರೆ ಹೊಸ ತಲೆಮಾರಿನ ಈ ಮಹಾಯಾನಕ್ಕೆ ವೇದಿಕೆಯಾಗುತ್ತಿದೆ ಎಂದು ಹೇಳಿದರು.

ಕೆಪಿಸಿಸಿ ಸದಸ್ಯ ಡಾ.ಈಶ್ವರ ನಾಯ್ಕ ಮಾತನಾಡಿ, ಸಂವಿಧಾನದ ಆಶಯಗಳ ಆಧಾರದ ಮೇಲೆ ಈ ದೇಶವನ್ನು ಭದ್ರ ನೆಲೆಗಟ್ಟಿನ ಮೇಲೆ ಮರುನಿರ್ಮಾಣ ಮಾಡುವ ಮಹಾಯೋಜನೆ ಅಭಿವೃದ್ಧಿಪಡಿಸಬೇಕು, ಅನುಷ್ಠಾನಗೊಳಿಸಬೇಕು. ಇದೊಂದು ಮಹಾಯಾನ, ನಾವು ನೀವೆಲ್ಲರೂ ಮುಂದೆ ಸಾಗಬೇಕಾಗಿರುವ ಮಹಾಯಾನ ಎಂದರು.

ಸಭೆಯಲ್ಲಿ ದಲಿತ ಮುಖಂಡ ದಿಡಗೂರು ತಮ್ಮಣ್ಣ, ಜೈನ್ ಸಮುದಾಯದ ದರ್ಶನ್ ಬಳ್ಳೇಶ್ವರ್, ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಶಿವಾನಂದ್, ಮುಸ್ಲಿಂ ಸಮಾಜದ ಮುಖಂಡ ಚೀಲೂರು ವಾಜೀದ್, ಕುರುವ ಮಂಜುನಾಥ್, ಮಾರಿಕೊಪ್ಪ ಮಂಜುನಾಥ್, ಕೆ.ಎಚ್. ರಾಜು, ಪ್ರಜಾಪರಿವರ್ತನಾ ವೇದಿಕೆ ಜಿಲ್ಲಾಧ್ಯಕ್ಷ ಅರಕೆರೆ ಕೃಷ್ಣ, ಬಣಜಾರ್ ಸಮಾಜದ ತಾಲೂಕು ಅಧ್ಯಕ್ಷ ಅಂಜುನಾಯ್ಕ, ಹಾಲುಮತ ಸಮಾಜ ಅಧ್ಯಕ್ಷ ಕಡಗಣ್ಣಾರ್ ರಾಜು, ಕರವೇ ಯುವಸೇನೆಯ ಅಧ್ಯಕ್ಷ ಮಂಜುನಾಥ್, ರೈತ ಮುಖಂಡ ರಂಗಪ್ಪ, ಹಲವು ಸಮಾಜಗಳ ಮುಖಂಡರು ಭಾಗಿಯಾಗಿದ್ದರು.

- - -

-22ಎಚ್.ಎಚ್.ಎಲ್2:

ಹೊನ್ನಾಳಿ ಪ್ರವಾಸಿ ಮಂದಿರದಲ್ಲಿ ಮಂಗ‍ಳವಾರ ನಡೆದ ಸಂವಿಧಾನ ಸಂರಕ್ಷಕರ ಸಮಾವೇಶ ಪೂರ್ವಭಾವಿ ಸಭೆಯಲ್ಲಿ ಕರಪತ್ರ ಬಿಡುಗಡೆಗೊಳಿಸಲಾಯಿತು.

Share this article