ಕನ್ನಡಪ್ರಭ ವಾರ್ತೆ ಸಕಲೇಶಪುರ
ದೇಶದಲ್ಲಿ ಹಲವು ಧರ್ಮ, ಜಾತಿ, ಪಂಗಡಗಳಿದ್ದರೂ ಅತ್ಯಂತ ಪ್ರಬಲವಾದ ಸಂವಿಧಾನದಿಂದ ನಾವೆಲ್ಲಾ ಒಟ್ಟಾಗಿ ಜೀವನ ನಡೆಸುತ್ತಿದ್ದೇವೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ಪಟ್ಟಣದ ಸುಭಾಷ್ ಮೈದಾನದಲ್ಲಿ ಭಾನುವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ಈ ಗಣರಾಜ್ಯೋತ್ಸವದ ಸಂರ್ಧಭದಲ್ಲಿ ನಾವು ದೇಶಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್‌ರವರನ್ನು ಎಲ್ಲರು ನೆನೆಯಬೇಕಾಗಿದೆ. ಇದೇ ರೀತಿ ಮತ್ತೋರ್ವ ಮಹಾಪುರುಷ ಸರ್ದಾರ್ ವಲ್ಲಭಬಾಯಿ ಪಟೇಲ್‌ರನ್ನು ಸಹ ನಾವು ಜ್ಞಾಪಿಸಿಕೊಳ್ಳಬೇಕಾಗಿದೆ. ಏಕೆಂದರೆ ಹರಿದು ಹಂಚಿ ಹೋಗಿದ್ದ ಪ್ರಾಂತ್ಯಗಳನ್ನು ಅವರು ರಾಜ್ಯಗಳನ್ನಾಗಿ ಮಾಡಿ ಒಟ್ಟಿಗೆ ಸೇರಿಸಿ ಗಣರಾಜ್ಯ ಮಾಡಲು ಕಾರಣಕರ್ತರಾಗಿದ್ದಾರೆ. ಇಂದು ನನ್ನಂತ ಸಾಮಾನ್ಯ ವ್ಯಕ್ತಿ ಶಾಸಕನಾಗಲು ಇಂದು ಸಂವಿಧಾನ ಕಾರಣವಾಗಿದೆ. ಅಧಿಕಾರ ಎಂಬುದು ಶಾಶ್ವತವಲ್ಲ ನಾವು ಅಧಿಕಾರದಲ್ಲಿದ್ದಾಗ ಏನು ಮಾಡುತ್ತೇವೆ ಎಂಬುದು ಮುಖ್ಯ ಎಂದರು.
ನಾನು ಶಾಸಕನಾದ ನಂತರ ಹಗಲು ರಾತ್ರಿ ಕ್ಷೇತ್ರದ ಏಳಿಗೆಗಾಗಿ ಶ್ರಮಿಸುತ್ತಿದ್ದೇನೆ. ಎಲ್ಲಾರಿಗೂ ಮೂಲಭೂತ ಸೌಕರ್ಯ ದೊರಕಬೇಕು ಎಂಬುದು ನನ್ನ ಆಶಯವಾಗಿದೆ. ಪ್ರಧಾನಿ ನರೇಂದ್ರ ಮೋದಿರವರು ಪ್ರತಿ ಮನೆಗೂ ಶುದ್ಧ ಕುಡಿಯುವ ನೀರನ್ನು ತಲುಪಿಸಬೇಕೆಂಬ ಗುರಿಯನ್ನು ಹೊಂದಿದ್ದರು. ಈ ನಿಟ್ಟಿನಲ್ಲಿ ಪ್ರಧಾನಿಯವರ ಕನಸಿನ ಕೂಸಾದ ಜಲಜೀವನ್ ಮಿಷನ್ ಯೋಜನೆಯನ್ನು ಪ್ರತಿಯೊಂದು ಗ್ರಾ.ಪಂಯಲ್ಲೂ ಅನುಷ್ಠಾನ ಮಾಡಲಾಗುತ್ತಿದೆ ಅಲ್ಲದೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮುಖಾಂತರ ಜಲಜೀವನ್ ಮಿಷನ್‌ನ ನೀರಾವರಿ ಮೂಲಗಳಿಗೆ ಗೊರೂರು ಆಣೆಕಟ್ಟೆಯಿಂದ ನೀರು ಹರಿಸಲಾಗುವುದು. ಇದರಿಂದ ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವುದು ಬಹುತೇಕ ಖಚಿತವಾಗಿದೆ. ಪಟ್ಟಣದ ಜಾತ್ರ ಮೈದಾನದಲ್ಲಿರುವ ತ್ಯಾಜ್ಯ ವಿಲೇವಾರಿಯಾಗದ ಕುರಿತು ನನಗೆ ನೋವಿದೆ. ನಾನು ಶಾಸಕನಾದ ನಂತರ ಮಳಲಿ ಗ್ರಾಮದಲ್ಲಿ ಕಸ ವಿಲೇವಾರಿ ಘಟಕದ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಆದರೆ ಇನ್ನು ಕಸ ವಿಲೇವಾರಿ ಘಟಕ ಉದ್ಘಾಟನೆಯಾಗದಿರುವುದೂ ನನಗೆ ನೋವಿದೆ. ನಾವು ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು. ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಅನ್ನ ಕೊಡುವ ರೈತ ಹಾಗೂ ದೇಶ ಕಾಯುವ ಯೋಧ ಇವರಿಬ್ಬರು ನೆಮ್ಮದಿಯಾಗಿರಬೇಕು, ಇವರು ನೆಮ್ಮದಿಯಾಗಿದ್ದರೆ ದೇಶ ನೆಮ್ಮದಿಯಾಗಿರುತ್ತದೆ ಎಂದರು.ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಉಪವಿಭಾಗಾಧಿಕಾರಿ ಡಾ.ಎಂ.ಕೆ.ಶೃತಿ ಮಾತನಾಡಿ, ಜನವರಿ ೨೬ ೧೯೫೦ರಲ್ಲಿ ನಮ್ಮ ದೇಶದ ಸಂವಿಧಾನವು ಜಾರಿಗೆ ಬರುವ ಮೂಲಕ ಭಾರತವನ್ನು ಸಾರ್ವಭೌಮ ಸಮಾಜವಾದಿ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿತವಾಯಿತು. ದೇಶಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ಯಾವುದೇ ಲಿಖಿತ ಸಂವಿಧಾನ ಇರಲಿಲ್ಲ, ಒಬ್ಬ ವ್ಯಕ್ತಿ ಒಂದು ದೇಶ ಶಿಸ್ತು ಇಲ್ಲದೆ ಅಭಿವೃದ್ಧಿ ಹೊಂದಲು ಸಾದ್ಯವಿಲ್ಲ ಎಂಬುದನ್ನು ಗಣನೆಗೆ ತೆಗೆದುಕೊಂಡು ನಮ್ಮ ಸ್ವಾತಂತ್ರ್ಯ ಚಳವಳಿಯ ನಾಯಕರು ಸಂವಿಧಾನ ರಚನಾ ಸಮಿತಿ ಸಭೆಯನ್ನು ರಚಿಸುವ ಮೂಲಕ ಡಾ.ಬಿ.ಆರ್.ಅಂಭೇಡ್ಕರ್ ಅವರ ಸತತ ಅಧ್ಯಯನದಿಂದ ನಮ್ಮ ದೇಶದ ಸಂವಿಧಾನ ಜಾರಿಗೆ ಬರಲು ಸಾಧ್ಯವಾಯಿತು. ಅವರನ್ನು ನಾವೆಲ್ಲ ಇಂದು ಸ್ಮರಿಸಬೇಕಾಗಿದೆ ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳನ್ನು ಆಳುವ ಶಾಸಕಾಂಗ, ನ್ಯಾಯ ಒದಗಿಸುವ ನ್ಯಾಯಾಂಗ, ಹಾಗೂ ಜನರಿಗಾಗಿ ಕೆಲಸ ಮಾಡುವ ಕಾರ್ಯಾಂಗಗಳು ಹೇಗಿರಬೇಕು, ನೀತಿ ನಿಯಮಗಳನ್ನು ಹೇಗೆ ಪಾಲಿಸಬೇಕು ಎಂಬ ಸೂಚನೆಗಳನ್ನು ಹಾಕಿಕೊಟ್ಟ ಸಮಗ್ರ ಮಾಹಿತಿಗಳ ಗುಚ್ಚವೇ ನಮ್ಮ ಸಂವಿಧಾನ. ಸಂವಿಧಾನ ದೇಶದ ತಾಯಿಯಂತೆ ಸಾಮಾಜಿಕ, ಆರ್ಥಿಕ, ನ್ಯಾಯಪರವಾದ ಚಿಂತನೆಗಳ ಮೂಲಕ ಪಾಳೆಗಾರಿಕೆಯ ಪ್ರಭುತ್ವವನ್ನು ಕಿತ್ತೊಗೆದು ಪ್ರಜಾಪ್ರಭುತ್ವವನ್ನು ಅನುಷ್ಠಾನಗೊಳಿಸಿದ ಭಾರತೀಯರ ಪವಿತ್ರ ಪೂಜ್ಯಗ್ರಂಥವೇ ಸಂವಿಧಾನ ಎಂದರು. ಈ ಸಂದರ್ಭದಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದೇ ವೇಳೆ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಉದ್ಯಮಿ ರಾಜ್‌ಕುಮಾರ್ ನಗದು ಬಹುಮಾನವನ್ನು ನೀಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಪುರಸಭಾ ಅಧ್ಯಕ್ಷೆ ಜ್ಯೋತಿ ರಾಜ್‌ಕುಮಾರ್, ಉಪಾಧ್ಯಕ್ಷೆ ಜರೀನಾ, ತಹಸೀಲ್ದಾರ್ ಮೇಘನಾ, ಡಿ.ವೈ.ಎಸ್.ಪಿ ಪ್ರಮೋದ್, ಸೇರಿದಂತೆ ಇತರ ಪುರಸಭಾ ಸದಸ್ಯರು, ಗಣ್ಯರು ಹಾಜರಿದ್ದರು.