ಸಂವಿಧಾನದಿಂದ ದೇಶ ಸದೃಢ: ಸಚಿವ ರಹೀಂ ಖಾನ್

KannadaprabhaNewsNetwork |  
Published : Jan 27, 2025, 12:46 AM IST
ಸ | Kannada Prabha

ಸಾರಾಂಶ

ನಮ್ಮ ದೇಶವು ವಿವಿಧತೆಯಲ್ಲಿ ಏಕತೆ ಹೊಂದಿದ ರಾಷ್ಟ್ರವಾಗಿದೆ. ದೇಶದಲ್ಲಿ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಭಾವನೆಗಳು ಇವೆ

ಬಳ್ಳಾರಿ: ಸಂವಿಧಾನದಿಂದ ನಮ್ಮ ದೇಶವು ಸದೃಢವಾಗಿ ನಿಂತಿದೆ ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಹೇಳಿದರು.

ಜಿಲ್ಲಾಡಳಿತ ವತಿಯಿಂದ ನಗರದ ಬಿಮ್ಸ್ ಮೈದಾನದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ 76ನೇ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಬಳಿಕ ಅವರು ಮಾತನಾಡಿದರು.ನಮ್ಮ ದೇಶವು ವಿವಿಧತೆಯಲ್ಲಿ ಏಕತೆ ಹೊಂದಿದ ರಾಷ್ಟ್ರವಾಗಿದೆ. ದೇಶದಲ್ಲಿ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಭಾವನೆಗಳು ಇವೆ ಎಂದರೆ ಅದು ಸಂವಿಧಾನ ನಮಗೆ ನೀಡಿರುವ ಕೊಡುಗೆಯಾಗಿದೆ ಎಂದರು.

ಸ್ವಾತಂತ್ರ್ಯ ಮುನ್ನ ಬಹಳ ಕಷ್ಟವಿತ್ತು. ಒಂದು ಸೂಜಿಯನ್ನು ತಯಾರಿಸಲು ಸಾಕಷ್ಟು ಅಡೆ-ತಡೆಗಳು ಎದುರಾಗುತ್ತಿದ್ದವು. ಸ್ವಾತಂತ್ಯದ ನಂತರ ಸಂವಿಧಾನ ಆಶಯಗಳಿಂದ ಸರ್ಕಾರದ ಮೂಲಕ ಎಲ್ಲವೂ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಈ ಹಿಂದೆ ರಾಜನ ಮಗ ರಾಜ ಆಗುತ್ತಿದ್ದ. ಆದರೆ ಸಂವಿಧಾನ ಜಾರಿಗೆ ಬಂದ ನಂತರ ಪ್ರತಿಯೊಬ್ಬರೂ ದೇಶ ಆಳುವ ನಾಯಕನಾಗುವ ಅವಕಾಶ ಕಲ್ಪಿಸಿಕೊಟ್ಟಿದೆ. ಇದರಿಂದ ಸರ್ಕಾರ ರಚಿಸುವ ಮೂಲಕ ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಇದರಿಂದ ಪಡೆದುಕೊಳ್ಳಬಹುದಾಗಿದೆ. ನಮ್ಮ ಸರ್ಕಾರವು ಬಡವರು, ರೈತರ ಪರವಾಗಿದೆ. ಎಲ್ಲರಿಗೂ ಸಮಾನತೆ ಕಲ್ಪಿಸಿದೆ ಎಂದು ಸಚಿವರು ನುಡಿದರು.

ಪ್ರಪಂಚದಲ್ಲಿಯೇ ಅತ್ಯಂತ ಜೀವಂತವೆನಿಸಿದ ಹಾಗೂ ಅತೀ ದೊಡ್ಡದಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ನಮ್ಮ ದೇಶವು ಪ್ರಜಾತಂತ್ರ ಗಣತಂತ್ರದ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಇದಕ್ಕಾಗಿ ಭಾರತದ ಸಂವಿಧಾನ ಶಿಲ್ಪಿ, ಮಹಾನ್ ಮಾನವತಾವಾದಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸದಾ ಸ್ಮರಿಸಲೇಬೇಕು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಗಾರಂಟಿ ಯೋಜನೆಗಳು ಯಶಸ್ವಿ ಅನುಷ್ಠಾನ:

ನಮ್ಮ ಸರ್ಕಾರವು ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದು, ಸಾಕಷ್ಟು ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಹಣದಿಂದ ವಿವಿಧ ರೀತಿಯಲ್ಲಿ ಉಪಯೋಗವಾಗುತ್ತಿದೆ. ಬಡ ಕುಟುಂಬದ ಮಕ್ಕಳಿಗೆ ಶಾಲಾ-ಕಾಲೇಜು ಶುಲ್ಕ, ಟ್ಯೂಷನ್ ಫೀಜ್, ದಿನಸಿ ಸಾಮಗ್ರಿ ಖರೀದಿಸಲು ಸಹಾಯವಾಗುತ್ತಿದೆ. ಒಟ್ಟಾರೆಯಾಗಿ ಮಹಿಳಾ ವರ್ಗವು ಸಬಲೀಕರಣದತ್ತ ಸಾಗುತ್ತಿದೆ ಎಂದರು.

ಗೃಹಜ್ಯೋತಿ ಯೋಜನೆಯಡಿ ಬಡ ಕುಟುಂಬಗಳ ಮನೆ-ಮನಗಳು ಇಂದು ಬೆಳಗುತ್ತಿವೆ. ಶಕ್ತಿ ಯೋಜನೆಯಡಿ ದುಡಿಯುವ ಮಹಿಳೆಯರಿಗೆ, ಶಾಲಾ-ಕಾಲೇಜು ಹೆಣ್ಣು ಮಕ್ಕಳಿಗೆ ಸಾಕಷ್ಟು ಉಪಯುಕ್ತವಾಗಿದೆ. ಅನ್ನ ಭಾಗ್ಯ ಯೋಜನೆಯಡಿ ಪಡಿತರ ಬದಲಾಗಿ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಾಗಿದೆ. ಯುವನಿಧಿ ಯೋಜನೆಯಡಿ ಪದವಿ ತೇರ್ಗಡೆ ಹೊಂದಿದ ನಂತರ ಯುವಕ-ಯುವತಿಯರ ಅಸಹಾಯಕತೆ ನಿವಾರಿಸಲಿ ಪ್ರತಿ ತಿಂಗಳು ₹3000, ₹1500ರಂತೆ ಸಹಾಯಧನ ನೀಡಲಾಗುತ್ತಿದೆ ಎಂದರು.

ನಗರಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅಮೃತ ನಗರೋತ್ಥಾನ, ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ, ಸ್ವಚ್ಛ ಭಾರತ್ ಮಿಷನ್, ಅಮೃತ 2.0 ಯೋಜನೆ ಮತ್ತು 15ನೇ ಹಣಕಾಸು ಯೋಜನೆಗಳ ಮೂಲಕ ಪ್ರಗತಿ ಸಾಧಿಸಲಾಗಿದೆ. ನಮ್ಮ ಸರ್ಕಾರ ಕೂಲಿ ಕಾರ್ಮಿಕರ, ರೈತರ, ನಗರ ಬಡಜನರ, ಬಡವಿದ್ಯಾರ್ಥಿಗಳ ಹಸಿವು ನೀಗಿಸಲು ಹೆಚ್ಚುವರಿ 188 ಇಂದಿರಾ ಕ್ಯಾಂಟಿನ್‌ಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಚಿವ ರಹೀಂ ಖಾನ್ ಅವರು ತಿಳಿಸಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ 371 (ಜೆ) ನಿಂದ ಸಾಕಷ್ಟು ಸೌಲಭ್ಯಗಳು ಸಿಗುತ್ತಿವೆ. ರಾಜ್ಯ ಸರ್ಕಾರವು ಈ ಭಾಗದ ಜಿಲ್ಲೆಗಳ ಅಭಿವೃದ್ಧಿಗಾಗಿಯೇ ಸಾಕಷ್ಟು ವಿಶೇಷ ಅನುದಾನ ನೀಡುತ್ತಿದೆ. ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಇದರ ಸದ್ಬಳಕೆಯಾಗಬೇಕು ಎಂದರು.

ಜಿಲ್ಲಾಡಳಿತದಿಂದ ಇಂದು ನಗರದ ಬಿಮ್ಸ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ, ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆ ಮತ್ತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಸಮವಸ್ತ್ರದಲ್ಲಿ ಶಿಸ್ತುಬದ್ಧ ಪಥಸಂಚಲನ ನಡೆಯಿತು.

ಗಣರಾಜ್ಯೋತ್ಸವದ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ, ಗೌರವಿಸಲಾಯಿತು.

ಬಳಿಕ ಶಾಲಾ ಶಿಕ್ಷಣ ಇಲಾಖೆಯ ವಿವಿಧ ಮಾಧ್ಯಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ಗಣರಾಜ್ಯೋತ್ಸವದ ನಿಮಿತ್ತ ಸಾಮೂಹಿಕ ನೃತ್ಯ, ದೇಶ ಭಕ್ತಿಗೀತೆ, ಗಾಯನ ಮತ್ತು ವೇಷಧಾರಿಗಳಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.

ಈ ಸಂದರ್ಭದಲ್ಲಿ ಮೇಯರ್‌ ಮುಲ್ಲಂಗಿ ನಂದೀಶ್, ಬುಡಾ ಅಧ್ಯಕ್ಷ ಜೆ.ಎಸ್. ಆಂಜನೇಯುಲು, ಉಪಮೇಯರ್ ಡಿ.ಸುಕುಂ, ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕ ಬಿ.ಎಸ್. ಲೋಕೇಶಕುಮಾರ್, ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ, ಎಸ್ಪಿ ಡಾ.ಶೋಭಾರಾಣಿ, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಎಡಿಸಿ ಮಹಮ್ಮದ್ ಝುಬೇರ್, ಎಸಿ ಪ್ರಮೋದ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ