ಜಾತಿ, ಧರ್ಮ ಮೀರಿದ್ದು ಸಂವಿಧಾನ

KannadaprabhaNewsNetwork |  
Published : Apr 15, 2024, 01:25 AM IST
14ಡಿಡಬ್ಲೂಡಿ1ಕರ್ನಾಟಕ ವಿದ್ಯಾವರ್ಧಕ ಸಂಘವು ಸಂವಿಧಾನ ಶಿಲ್ಪಿ ಡಾ.ಬಿ. ಆರ್. ಅಂಬೇಡ್ಕರ್ 133ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ `ಅಂಬೇಡ್ಕರರ ಚಿಂತನೆಯಲ್ಲಿ ಚುನಾವಣೆ’ ಕುರಿತು ಡಾ.ಲೋಹಿತ ನಾಯ್ಕರ ಮಾತನಾಡಿದರು.  | Kannada Prabha

ಸಾರಾಂಶ

ಮೂಲತಃ ಅಂಬೇಡ್ಕರ್ ಅಮೆರಿಕಾದ ಅಧ್ಯಕ್ಷೀಯ ಮಾದರಿಯ ಪ್ರಜಾಪ್ರಭುತ್ವದ ಬಗ್ಗೆ ಒಲವು ಹೊಂದಿದ್ದರು. ಆರ್ಥಿಕವಾಗಿ ಅಸಮಾನತೆ ಇದ್ದಾಗ ಪ್ರಜಾಪ್ರಭುತ್ವ ಯಶಸ್ವಿಯಾಗುವುದಿಲ್ಲ.

ಧಾರವಾಡ:

ಜಾತಿ, ಧರ್ಮ ಮೀರಿ ಸಂವಿಧಾನ ನೋಡಿಕೊಂಡಾಗ ಮಾತ್ರ ಅದು ಒಳ್ಳೆಯ ಸಂವಿಧಾನ ಆಗಿರಲು ಸಾಧ್ಯ ಎಂದು ಮಾನವ ಹಕ್ಕುಗಳ ತಜ್ಞ ಡಾ. ಲೋಹಿತ ನಾಯ್ಕರ ನುಡಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ 133ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ `ಅಂಬೇಡ್ಕರ್‌ರ ಚಿಂತನೆಯಲ್ಲಿ ಚುನಾವಣೆ’ ಕುರಿತು ಮಾತನಾಡಿದ ಅವರು, ಸಂವಿಧಾನ ಯಾವಾಗಲೂ ಒಳ್ಳೆಯದಾಗಿಯೇ ಇದೆ. ಆದರೆ, ಅದು ಒಳ್ಳೆಯವರ ಕೈಯಲ್ಲಿದ್ದರೆ ಒಳ್ಳೆಯದಾಗಿ ಇರುತ್ತದೆ. ಕೆಟ್ಟವರ ಕೈಯಲ್ಲಿ ಇದ್ದರೆ ಕೆಟ್ಟದಾಗಿರುತ್ತದೆ ಎಂದರು.

ಮೂಲತಃ ಅಂಬೇಡ್ಕರ್ ಅಮೆರಿಕಾದ ಅಧ್ಯಕ್ಷೀಯ ಮಾದರಿಯ ಪ್ರಜಾಪ್ರಭುತ್ವದ ಬಗ್ಗೆ ಒಲವು ಹೊಂದಿದ್ದರು. ಆರ್ಥಿಕವಾಗಿ ಅಸಮಾನತೆ ಇದ್ದಾಗ ಪ್ರಜಾಪ್ರಭುತ್ವ ಯಶಸ್ವಿಯಾಗುವುದಿಲ್ಲ. ಹಣ ಇದ್ದವರು ಚುನಾವಣೆಗೆ ನಿಲ್ಲುತ್ತಾರೆ. ಆಳುವವರು ಮತ್ತು ಆಳಿಸಿಕೊಳ್ಳುವವರ ವ್ಯವಸ್ಥೆ ರೂಪಗೊಳ್ಳುತ್ತದೆ ಎಂದು ಅಂಬೇಡ್ಕರ್ ವಿಚಾರ ಹೊಂದಿದ್ದರು. ಆದರೆ ಸಂವಿಧಾನ ರಚನಾ ಕಾಲಕ್ಕೆ ಅಂಬೇಡ್ಕರ್ ವಿಚಾರಗಳಿಗೆ ವಿರೋಧ ವ್ಯಕ್ತವಾಗಿ ಒಕ್ಕೂಟ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂವಿಧಾನ ರೂಪಗೊಂಡಿತು ಎಂದು ತಿಳಿಸಿದರು.

ಸಂವಿಧಾನದ ಸೆಡ್ಯೂಲ್ 10 ಬದಲಿಸಿ 1991ರಲ್ಲಿ ಎಂಟಿ ಡಿಫೆಕ್ಷೆನ್ ಲಾ ತಂದರು. ಒಂದು ವೇಳೆ ಡಾ. ಅಂಬೇಡ್ಕರ್ ಇದ್ದಿದ್ದರೆ ಇದನ್ನೂ ಒಪ್ಪುತ್ತಿರಲಿಲ್ಲ. ಸಂವಿಧಾನದಲ್ಲಿ ಚುನಾವಣಾ ಕಮೀಷನರ್ ಅವರ ಸ್ಥಾನಮಾನ, ಅಧಿಕಾರ ಸರ್ವೋಚ್ಚ ನ್ಯಾಯಾಧೀಶರಿಗೆ ಸಮಾನವಾಗಿ ಇರುವಂತಹದ್ದು. ಆದರೆ ಇಂದು ಚುನಾವಣಾ ಕಮೀಷನ್‌ರ ಸ್ಥಾನ-ಮಾನ ಅತ್ಯಂತ ಕೆಟ್ಟ ಸ್ಥಿತಿಗೆ ತರಲಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಯಾವುದೇ ಒಬ್ಬ ವ್ಯಕ್ತಿಗೆ ಅಧಿಕಾರ ಮೀರಿ ಬಹಳಷ್ಟು ಅಧಿಕಾರ ಕೊಡಬಾರದು. ಮತ್ತು ಒಂದೇ ವ್ಯಕ್ತಿಯ ಮೇಲೆ ಭರವಸೆ ಇಡಬಾರದು. ಆದರೆ ಅದು ಹಾಗಾಗುತ್ತಿಲ್ಲ. ಭಾರತೀಯ ಜನಾಂಗ ಭಕ್ತಿಪಥದಿಂದ ಬಂದವರಾಗಿದ್ದರಿಂದ ಅರಾಧನೆ ಮನೋಭಾವನೆಯಿಂದ ಹೊರಬರಲಿಕ್ಕೆ ಆಗಿಲ್ಲ. ಸಮಾಜವನ್ನು ಬಲಶಾಲಿ ಮಾಡಿದರೆ ಮಾತ್ರ ಸಂವಿಧಾನ ಉಳಿಯುವುದು ಎಂದರು.

ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಅಧ್ಯಕ್ಷತೆ ವಹಿಸಿ, ಸಮಾನತೆ ತರುವ ವಿಚಾರ ಬಂದಾಗ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ ಅವರನ್ನು ಒಟ್ಟಿಗೆ ಇಟ್ಟುಕೊಂಡು ಚಿಂತಿಸಬೇಕು ಎಂದರು. ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪಾರ್ಪಣೆಯೊಂದಿಗೆ ಗೌರವ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ ಇದ್ದರು. ಶಂಕರ ಹಲಗತ್ತಿ ಸ್ವಾಗತಿಸಿದರು. ಸತೀಶ ತುರಮರಿ, ಡಾ. ಸಂಜೀವ ಕುಲಕರ್ಣಿ, ಗುರು ಹಿರೇಮಠ, ಡಾ. ಮಹೇಶ ಹೊರಕೇರಿ, ಡಾ. ಜಿನದತ್ತ ಹಡಗಲಿ, ವಿಶ್ವೇಶ್ವರಿ ಹಿರೇಮಠ, ಡಾ. ಧನವಂತ ಹಾಜವಗೋಳ ಮತ್ತಿತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ