ಭಾರತಕ್ಕೆ ಸಂವಿಧಾನವೇ ದೊಡ್ಡ ಬಲ: ಸಂಪತ್ ಕುಮಾರ್

KannadaprabhaNewsNetwork | Published : Nov 27, 2024 1:02 AM

ಸಾರಾಂಶ

ಸಂವಿಧಾನ ಪ್ರತಿಜ್ಞಾ ವಿಧಿಯನ್ನು ರಾಜ್ಯಶಾಸ್ತ್ರ ಉಪನ್ಯಾಸಕಿ ಪೂರ್ಣಿಮಾ ಬೋಧಿಸಿದರು. ರಾಜ್ಯಶಾಸ್ತ್ರ ಮುಖ್ಯಸ್ಥರಾದ ಡಾ. ಪ್ರವೀಣ್ ಕೆ. ಸಂವಿಧಾನ ದಿನಾಚರಣೆಯ ಮಹತ್ವವನ್ನು ಸಾರಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಶ್ರೀ ಮಹಾವೀರ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿ ಮೂಡಬಿದಿರೆ ಎಕ್ಸಲೆಂಟ್ ಕಾಲೇಜಿನ ಆಡಳಿತ ನಿರ್ದೇಶಕ ಡಾ. ಬಿ.ಪಿ. ಸಂಪತ್ ಕುಮಾರ್ ಮಾತನಾಡಿ, ಸಂವಿಧಾನದ ೭೫ನೇ ವರ್ಷಾಚರಣೆ ಆಚರಿಸುತ್ತಿರುವ ಭವ್ಯ ಭಾರತದಲ್ಲಿ ಹುಟ್ಟುವುದೇ ಅದೃಷ್ಟ. ನಮ್ಮ ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿದೆ. ಭಾರತಕ್ಕೆ ಸಂವಿಧಾನವೇ ದೊಡ್ಡ ಬಲ ನಮ್ಮ ಸಂವಿಧಾನದ ಮಹತ್ವವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಸಂವಿಧಾನ ಪ್ರತಿಜ್ಞಾ ವಿಧಿಯನ್ನು ರಾಜ್ಯಶಾಸ್ತ್ರ ಉಪನ್ಯಾಸಕಿ ಪೂರ್ಣಿಮಾ ಬೋಧಿಸಿದರು. ರಾಜ್ಯಶಾಸ್ತ್ರ ಮುಖ್ಯಸ್ಥರಾದ ಡಾ. ಪ್ರವೀಣ್ ಕೆ. ಸಂವಿಧಾನ ದಿನಾಚರಣೆಯ ಮಹತ್ವವನ್ನು ಸಾರಿದರು.

ಕನ್ನಡ ರಾಜ್ಯೋತ್ಸವ ಆಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಡಾ.ಬಿ.ಪಿ. ಸಂಪತ್ ಕುಮಾರ್‌, ಸಾಹಿತ್ಯಿಕ ಮತ್ತು ಪ್ರಾಕೃತಿಕ ಸಂಪತ್ತನ್ನು ಹೊಂದಿರುವ ಕನ್ನಡ ನಾಡು ನಮ್ಮ ಹೆಮ್ಮೆ. ಈ ನಾಡಿನಲ್ಲಿ ಹುಟ್ಟಿದ ನಾವೆಲ್ಲರೂ ಕನ್ನಡ ಭಾಷೆಯನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ. ಭಾಷೆಯನ್ನು ಉಳಿಸಲು ಹಲವಾರು ಸವಾಲು ನಮ್ಮೆದುರಲ್ಲಿದೆ. ಅದನ್ನೆಲ್ಲ ಮೆಟ್ಟಿನಿಂತು ಅನ್ಯ ಭಾಷೆ ವ್ಯಾಮೋಹಕ್ಕೆ ಒಳಗಾಗದೆ ಭಾಷೆಯನ್ನು ಬೆಳಸಬೇಕು. ಭಾಷೆಯು ಬಳಕೆಯಿಂದಲೇ ಬೆಳೆಯುವುದಾಗಿದೆ. ನಮ್ಮ ಹಿರಿಯರು ಕನ್ನಡದ ದೀಪವನ್ನು ಹಚ್ಚಿದ್ದಾರೆ, ಅದಕ್ಕೆ ಎಣ್ಣೆ ಹಾಕುವ ಕೆಲಸ ಯುವಜನರಿಂದ ಆಗಬೇಕಾಗಿದೆ. ಕನ್ನಡಿಗರು ಯಾರಿಗೂ ಕಡಿಮೆ ಇಲ್ಲದಂತೆ ಬೆಳೆಯಬೇಕಾಗಿದೆ. ಹೀಗೆ ಕರ್ನಾಟಕ ಏಕೀಕರಣದಿಂದ ಮೊದಲುಗೊಂಡು ಕನ್ನಡ ಭಾಷೆ ಹೇಗೆ ಬೆಳೆದು ಬಂತು ಎಂಬುದನ್ನು ವಿವರಿಸಿದರು. ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಂ. ರಮೇಶ್ ಭಟ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಹರೀಶ್, ಕನ್ನಡ ಸಂಘದ ವಿದ್ಯಾರ್ಥಿ ಪ್ರತಿನಿಧಿ ದೇವಿಕಾ ಉಪಾಧ್ಯಾ, ಕಾಲೇಜಿನ ವಿದ್ಯಾರ್ಥಿ ನಾಯಕಿ ಶ್ರುತಿ ಪೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ವಿಭಾಗ ಮುಖ್ಯಸ್ಥ ಡಾ. ಚಿನ್ನಸ್ವಾಮಿ ಎನ್. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ಪ್ರಣಮ್ಯ ವಂದಿಸಿದರು. ವಿದ್ಯಾರ್ಥಿನಿ ಸ್ನೇಹ ಕಾರ್ಯಕ್ರಮ ನಿರೂಪಿಸಿದರು.

Share this article