ಸಶಕ್ತಿಕರಣ ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಿಎಂ ವೀರಪ್ಪ ಮೊಯ್ಲಿಗದಗ: ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನ ಭಾರತದ ಸಂವಿಧಾನ, ಸಂವಿಧಾನವೇ ನಿಜವಾದ ಶಕ್ತಿ. ಅದನ್ನು ಸಮರ್ಥವಾಗಿ ಅರಿತು ಬಳಸುವ ವ್ಯಕ್ತಿಗಳು ನೀವಾಗಬೇಕೆಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದರು.
ಶ್ರೇಷ್ಠ ಸಂವಿಧಾನದ ಪೀಠಿಕೆಯನ್ನು ಸತತವಾಗಿ ಅರಿತು ಮನನ ಮಾಡಿಕೊಂಡು ಭಾರತದ ಪ್ರಜೆಗಳಾದ ನಾವೇಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸಂವಿಧಾನ ಓದುವ ಸಶಕ್ತಿಕರಣ ಕಾರ್ಯಕ್ರಮಕ್ಕೆ ಆಗಮಿಸಿ ಉದ್ಘಾಟನೆ ನೆರವೇರಿಸಿರುವದು ನನ್ನಲ್ಲಿ ಧನ್ಯತಾ ಭಾವ ಮೂಡಿದೆ. ಸಂವಿಧಾನ ಪೀಠಿಕೆ ಓದು ದೇಶದ ಪ್ರತಿ ಗ್ರಾಮ ಹಾಗೂ ಸಮುದಾಯಕ್ಕೆ ತಲುಪಬೇಕು ಎಂದರು.
ಸಂವಿಧಾನ ರಾಷ್ಟ್ರದಲ್ಲಿ ಎಲ್ಲಿಯವರೆಗೆ ಇರುತ್ತದೆಯೋ, ಅಲ್ಲಿಯವರೆಗೆ ಡಾ.ಬಿ.ಆರ್. ಅಂಬೇಡ್ಕರ್ ಅವರು ಮತ್ತೆ ಮತ್ತೆ ಹುಟ್ಟಿ ಬರುತ್ತಲೇ ಇರುತ್ತಾರೆ. ಅಂಬೇಡ್ಕರ್ ಅವರು ಹೇಳಿದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ ನಾನು ನನ್ನ ಜೀವನವನ್ನು ಸವಿಸಿದ್ದೇನೆ. ಅನುಮಾನವಿದ್ದಲ್ಲಿ ಸಂವಿಧಾನವನ್ನು ಓದಿಕೊಳ್ಳಿ ಎಂದು ಹೇಳಿದ್ದಾರೆ. ಸಮಾನತೆ, ಶೋಷಣೆ ವಿರುದ್ಧ ಹಕ್ಕು ಸೇರಿದಂತೆ ಸಂವಿಧಾನದಲ್ಲಿ ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳನ್ನು ಸರ್ವ ಜನಾಂಗಗಳಿಗೂ ಸಮಾನವಾಗಿ ನೀಡಿದ್ದಾರೆ. ಶೋಷಣೆ ಮುಕ್ತ ಸಮಾಜದ ಕನಸು ಕಂಡವರು ಡಾ.ಬಿ.ಆರ್.ಅಂಬೇಡ್ಕರ ಎಂದರು.ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳನ್ನು ಪಾಲಿಸುವುದಿಲ್ಲವೋ ಅಲ್ಲಿಯವರೆಗೆ ನಾವು ರಾಷ್ಟ್ರದ ಸರಿಯಾದ ಪ್ರಜೆಗಳಲ್ಲ. ಸಂವಿಧಾನ ಕೇವಲ ನ್ಯಾಯವಾದಿಗಳ ಕೈಯಲ್ಲಿಲ್ಲ. ಕಕ್ಷಿದಾರನ ಕೈಯಲ್ಲಿಯೂ ಇದೇ ಎಂಬುದನ್ನು ಸಂದರ್ಭಕ್ಕನುಸಾರ ಸಾಬೀತು ಪಡಿಸುತ್ತಲೇ ಇರಬೇಕು. ಅದುವೆ ನಮ್ಮ ಸಂವಿಧಾನ, ನಮ್ಮ ಹೆಮ್ಮೆ ಎಂದು ತಿಳಿಸಿದರು.
ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ನೆರೆದ ಸಾರ್ವಜನಿಕರೆಲ್ಲರಿಗೂ ಸಂವಿಧಾನ ಪೀಠಿಕೆಯನ್ನು ಬೋಧಿಸಿ ಆನಂತರ ಮಾತನಾಡಿ, ದೇಶದಲ್ಲಿ ಸಂವಿಧಾನದ ಓದು ನಮ್ಮಲ್ಲಿನ ಕರ್ತವ್ಯಗಳನ್ನು ಬಡಿದೆಬ್ಬಿಸಬೇಕು. ದೇಶದಲ್ಲಿನ ಸಂಪತ್ತಿನ ಹೆಚ್ಚು ಪಾಲು ಶೇ.೧ರಷ್ಟು ಜನರಲ್ಲಿ ಕ್ರೋಢಿಕರಣಗೊಂಡಿದೆ. ದೇಶದ ಸಂಪತ್ತು ಒಂದು ವ್ಯಕ್ತಿ ಸಮುದಾಯಕ್ಕೆ ಸೀಮಿತವಾಗದೇ ಸರ್ವರಿಗೂ ಸಲ್ಲಬೇಕು ಎಂದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಸಂವಿಧಾನ ಪೀಠಿಕೆಯ ಪ್ರತಿಯನ್ನು ರಾಜ್ಯದ ೭೩ ಸಾವಿರ ಶಾಲೆಗಳಲ್ಲಿ ಅಳವಡಿಸಲು ಹಾಗೂ ಸಂವಿಧಾನ ಪೀಠಿಕೆಯನ್ನು ಪ್ರತಿ ವಿದ್ಯಾರ್ಥಿಗಳಿಗೂ ಅರ್ಥೈಸುವ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳಲ್ಲಿ ಸಂವಿಧಾನದ ಅರಿವು ಮೂಡಿಸಲು ಸರ್ಕಾರ ಮುಂದಾಗಿದೆ. ಸಂವಿಧಾನ ತತ್ವದಡಿ ನಾವು ಬದುಕು ಸಾಗಿಸಬೇಕು. ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಶಿಕ್ಷಣ ಇಲಾಖೆಯಲ್ಲಿ ಬದಲಾವಣೆ ತರುವ ಮೂಲಕ ಎಲ್ಲರೂ ಸರ್ಕಾರಿ ಶಾಲೆಯೆಡೆಗೆ ಮರಳುವಂತೆ ಮಾಡಲಾಗುವದು. ಸಂವಿಧಾನ ಪೀಠಿಕೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ನಾವೆಲ್ಲರೂ ಭಾರತಾಂಬೆಯ ಮಕ್ಕಳು ಎಂಬ ಭಾತೃತ್ವ ಭಾವನೆ ಇಮ್ಮಡಿಗೊಳ್ಳುತ್ತದೆ ಎಂದರು.
ಈ ವೇಳೆ ಸಂವಿಧಾನ ಓದು ಪುಸ್ತಕವನ್ನು ೫ನೇ ಹಣಕಾಸು ಯೋಜನೆ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಅವರು ಬಿಡುಗಡೆಗೊಳಿಸಿದರು.
ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಸ್ವಾಗತಿಸಿದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ ವಂದಿಸಿದರು. ಜೆ.ಕೆ.ಜಮಾದಾರ ಕಾರ್ಯಕ್ರಮ ನಿರ್ವಹಿಸಿದರು.