ರಾಮನಗರ: ದೇಶದ ಪ್ರಜಾಪ್ರಭುತ್ವವನ್ನು ಕಾಪಾಡಿಕೊಂಡು ಬರಲು ನಮ್ಮ ಶ್ರೇಷ್ಠ ಸಂವಿಧಾನವೇ ಕಾರಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
144 ಕೋಟಿ ಜನಸಂಖ್ಯೆಯ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮದು. ಈ ಪ್ರಜಾಪ್ರಭುತ್ವವನ್ನು ಕಾಪಾಡಿಕೊಂಡು ಬರಲು ಹಾಗೂ ಸ್ವಾತಂತ್ರ್ಯ ಬಂದಾಗ ಶೇಕಡ 12ರಷ್ಟಿದ್ದ ಶಿಕ್ಷಣ ಈಗ ಶೇಕಡ 80ಕ್ಕೆ ಹೆಚ್ಚಲು ಪ್ರತಿಯೊಬ್ಬರಿಗೂ ನಮ್ಮ ಸಂವಿಧಾನದ ಆಶಯಗಳೇ ಕಾರಣ ಎಂದು ಹೇಳಿದರು.
1947ರ ಆಗಸ್ಟ್ 15ರಂದು ದೇಶ ಸ್ವಾತಂತ್ರ್ಯ ಪಡೆದುಕೊಳ್ಳುವ ಮೂಲಕ ದಾಸ್ಯದ ಸಂಕೋಲೆಯನ್ನು ಕಳಚಿಕೊಂಡ ನಂತರ ಜನವರಿ 26, ಭಾರತೀಯರಿಗೆ ಮಹತ್ವದ ದಿನ. ಈ ಸಂದರ್ಭದಲ್ಲಿ ಸಂವಿಧಾನದ ಆಶಯದಂತೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಲಭ್ಯವಾಗುವ ಸಮ ಸಮಾಜ ನಿರ್ಮಾಣದ ದಾರಿಗಳನ್ನು ಬಲಪಡಿಸಲು ಚಿಂತಿಸಬೇಕಿದೆ ಎಂದು ಹೇಳಿದರು.ದೇಶದ ಇತಿಹಾಸವನ್ನು ಅವಲೋಕಿಸಿದಾಗ ಸಾಂಸ್ಕೃತಿಕವಾಗಿ ನಮ್ಮ ದೇಶವನ್ನು ಒಂದುಗೂಡಿಸಿದ್ದು, ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳು. ರಾಮಾಯಣ ಉತ್ತರದ ಅಯೋಧ್ಯದಿಂದ ದಕ್ಷಿಣದ ಶ್ರೀಲಂಕದವರೆಗೂ, ಮಹಾಭಾರತ ಈಗಿನ ಅಫ್ಘಾನಿಸ್ಥಾನದಿಂದ ಹಸ್ತಿನಾಪುರ ಅಂದರೆ ದೆಹಲಿ ಮೂಲಕ ಉತ್ತರ-ಪೂರ್ವ ಮಣಿಪುರದವರೆಗೂ ಬೆಸೆದಿರುವುದು ಕಂಡು ಬಂದಿದೆ.
ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾ ಬಾಯಿ ಪಟೇಲ್ ಹರಿದು ಹಂಚಿ ಹೋಗಿದ್ದ ದೇಶವನ್ನು Instrument of Accession (ಇನ್ಸುಟ್ರುಮೆಂಟ್ ಆಫ್ ಅಕ್ಸೆಶನ್) ಮುಖಾಂತರ ಅಖಂಡ ಭಾರತದ ನಿರ್ಮಾಣಕ್ಕೆ ಬುನಾದಿ ಹಾಕಿದರು. ತದನಂತರ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಕ್ಷತೆಯ ಸಂವಿಧಾನ ರಚನಾ ಸಮಿತಿ ಅತ್ಯುತ್ತಮವಾದ ಸಂವಿಧಾನವನ್ನು ರಚಿಸಿ, 1949ರ ನವೆಂಬರ್ 26ರಂದು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು ಎಂದು ರಾಮಲಿಂಗಾರೆಡ್ಡಿ ಇತಿಹಾಸವನ್ನು ಮೆಲುಕು ಹಾಕಿದರು.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳಿಸಲು ನೆರವಾಗುವ ಯಶಸ್ ಕಿರು ಹೊತ್ತಿಗೆಯನ್ನು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯಿಂದ ಬಿಡುಗಡೆ ಮಾಡಲಾಯಿತು.
ಶಾಸಕ ಇಕ್ಬಾಲ್ ಹುಸೇನ್ ಅಧ್ಯಕ್ಷತೆ ವಹಿಸಿದ್ದರು. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಜಿ.ಎನ್. ನಟರಾಜು ಗಾಣಕಲ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಕೆ. ರಾಜು, ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ(ಶಶಿ), ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚೇತನ್ ಕುಮಾರ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಜಿಪಂ ಸಿಇಒ ಅನ್ಮೋಲ್ ಜೈನ್, ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಉಪಸ್ಥಿತರಿದ್ದರು.
26ಕೆಆರ್ ಎಂಎನ್ 1,2,3.ಜೆಪಿಜಿರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಪಾಲ್ಗೊಂಡಿದ್ದರು.
ಗಣರಾಜ್ಯೋತ್ಸವ ಸಮಾರಂಭದಲ್ಲಿ ಸಚಿವ ರಾಮಲಿಂಗಾರೆಡ್ಡಿ "ಯಶಸ್ಸು ಕೈಪಿಡಿ " ಬಿಡುಗಡೆ ಮಾಡಿದರು.
ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸಚಿವ ರಾಮಲಿಂಗಾರೆಡ್ಡಿ, ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡರು ಪದ್ಮಶ್ರೀ ಪುರಸ್ಕೃತ ಹಾಸನ ರಘು ಅವರನ್ನು ಸನ್ಮಾನಿಸಿದರು.