ಕನ್ನಡಪ್ರಭ ವಾರ್ತೆ ತಾಳಿಕೋಟೆ
ಇಂದು ನಾವು ಸ್ವತಂತ್ರವಾಗಿ ಬದುಕುತ್ತಿರುವುದಕ್ಕೆ ಸಂವಿಧಾನವೇ ಕಾರಣ. ಸಂವಿದಾನವನ್ನು ಲಿಖಿತ ರೂಪದಲ್ಲಿ ನೀಡಿ ದಾರಿ ದೀಪವಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಕೃತಜ್ಞರಾಗಿದ್ದೇವೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಅನುಗ್ರಹ ಆಸ್ಪತ್ರೆಯ ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ ಹೇಳಿದರು.ತಾಲೂಕಿನ ಬೇಕಿನಾಳ ಗ್ರಾಮದಲ್ಲಿ ಜಿಲ್ಲಾ ಪಂಚಾಯತಿ, ಉಪ ನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯದಿಂದ ಅಸ್ಕಿ ಕ್ಲಸ್ಟರ್ ಮಟ್ಟದ ಸಂವಿಧಾನ ಸಮರ್ಪಣಾ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಸಕಲ ಜೀವರಾಶಿಗಳಿಗೂ ಸಮಾನತೆ ದೃಷ್ಠಿಯಲ್ಲಿ ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ನಿಟ್ಟಿನಲ್ಲಿ ೨ ವರ್ಷ ೧೧ ತಿಂಗಳ ೧೮ ದಿನ ನಿರಂತರವಾಗಿ ಕಾರ್ಯನಿರ್ವಹಿಸಿ ದೇಶಕ್ಕೆ ಸಂವಿದಾನವನ್ನು ಸಮರ್ಪಣೆ ಮಾಡಿದ್ದಾರೆ. ಇಂದು ಕಟ್ಟಕಡೆಯ ವ್ಯಕ್ತಿಯೂ ಉನ್ನತ ಹುದ್ದೆ ಅಲಂಕರಿಸಲು ಕಾರಣವಾಗಿದೆ. ಈ ದೇಶದಲ್ಲಿ ಪ್ರಜಾಪ್ರಭುತ್ವದಲ್ಲಿ ಯಾವ ರೀತಿ ನಾವು ಆಯ್ಕೆ ಮಾಡಿ ಕಳುಹಿಸಬೇಕೆಂದು ತಿಳಿಸಬೇಕಾಗುತ್ತದೆ. ಸಂವಿದಾನವನ್ನು ಯಾವ ರೀತಿ ನಾವು ಉಳಿಸಬೇಕು ಮತ್ತು ಸಂವಿಧಾನವನ್ನು ರಚಿಸಿದ ಮಹಾನ್ ಮಾನವತವಾದಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಅರಿತು ಸಾಗಬೇಕಿದೆ. ಜಿಲ್ಲಾ ಮಟ್ಟದ ಮಾದರಿಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಿದ ಬೇಕಿನಾಳ ಗ್ರಾಮದ ಶಾಲಾ ಸುಧಾರಣಾ ಸಮಿತಿ ಸದಸ್ಯರು ಹಾಗೂ ಗ್ರಾಮದ ಎಲ್ಲ ಜನರು ಒಗ್ಗೂಡಿ ಮಾಡಿರುವ ಕಾರ್ಯವನ್ನು ನೋಡಿ ತುಂಬಾ ಸಂತೋಷ ಕೊಟ್ಟಿದೆ ಎಂದು ಶ್ಲಾಘಿಸಿದರು. ಅಲ್ಲದೇ ಈ ಸಂವಿಧಾನದ ಅರಿವು ಮೂಡಿಸುವ ಕಾರ್ಯ ಪ್ರತಿ ಮನೆ ಮನೆಯಲ್ಲಿ ನಡೆಯಲಿ ಎಂದು ಆಶಿಸಿದರು.ದಲಿತ ಮುಖಂಡ ವೈ.ಸಿ.ಮಯೂರ ಹಾಗೂ ಶಿಕ್ಷಕ ಅಶೋಕ ಹಂಚಲಿ ಮಾತನಾಡಿ, ಭಾರತದ ಎಲ್ಲಾ ನಾಗರಿಕರಿಗೆ ಸಮಾನತೆಯ ಹಕ್ಕು, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಜೀವನ ಮತ್ತು ಸ್ವಾತಂತ್ರ್ಯದ ಹಕ್ಕು ಸೇರಿದಂತೆ ಮೂಲಭೂತ ಹಕ್ಕುಗಳನ್ನು ಖಾತರಿಪಡಿಸಿದೆ. ಸಮಾನತೆಯ ಸಮಾಜದ ಕಡೆಗೆ ಕೆಲಸ ಮಾಡಲು ಸರ್ಕಾರಕ್ಕೆ ಮಾರ್ಗದರ್ಶಿಯಾಗಿದೆ. ವಿಶ್ವದ ಯಾವುದೇ ದೇಶದಲ್ಲಿಯೂ ಇಲ್ಲದ ಸಮಾನತೆಯ ಸಂವಿಧಾನವನ್ನು ನೀಡಿದ ಡಾ.ಅಂಬೇಡ್ಕರ್ ಅವರನ್ನು ನೆನೆಯುವ ಕಾರ್ಯವಾಗಬೇಕು ಎಂದರು.ಡಾ.ಪ್ರಭುಗೌಡ ಲಿಂಗದಳ್ಳಿ ನೇತೃತ್ವದ ಅನುಗ್ರಹ ವಿಜನ್ ಫೌಂಡೇಶನ್‌ನಿಂದ ಮಕ್ಕಳಿಗೆ ನೋಟಬುಕ್‌ಗಳನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕರ ಸಹೋದರ ಸಚಿನಗೌಡ ಪಾಟೀಲ ಉದ್ಘಾಟಿಸಿದರು. ಮುಖಂಡರಾದ ನಾನಾಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವೇ.ಮಹೇಶ ಶ್ರೀಗಳು ಸಾನಿಧ್ಯ ವಹಿಸಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಹಾಗೂ ಸಂವಿಧಾನ ಪೀಠಿಕೆಗೆ ಪುಷ್ಪಾರ್ಚನೆ ಮಾಡಲಾಯಿತು. ವೇದಿಕೆಯ ಮೇಲೆ ಎಂ.ಎಸ್.ಮಠ, ಡಾ.ಪ್ರಭುಗೌಡ ಬಿರಾದಾರ, ಸಿದ್ದು ಬುಳ್ಳಾ, ಎಸ್‌ಡಿಎಂಸಿ ಅಧ್ಯಕ್ಷ ಯಮನೂರಿ, ರವಿ ಸುಧಾಕರ, ಹಯ್ಯಾಳಪ್ಪಗೌಡ ಚೌದ್ರಿ, ಕ್ಲಸ್ಟರ್ ಮಟ್ಟದ ಎಲ್ಲ ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು.