ಕನ್ನಡಪ್ರಭ ವಾರ್ತೆ ಹಲಗೂರು
ಮಂಡ್ಯ ಜಿಲ್ಲೆಯಲ್ಲಿ ಅಪಾರ ಭಕ್ತರನ್ನು ಒಳಗೊಂಡಿರುವ ಪುಣ್ಯಕ್ಷೇತ್ರದಲ್ಲಿ ಪ್ರತಿ ವರ್ಷ ಜಾತ್ರಾ ಮಹೋತ್ಸವ 7 ದಿನಗಳ ಕಾಲ ವಿಜೃಂಭಣೆಯಿಂದ ನಡೆಸಲಾಗುತ್ತದೆ. ಹಲಗೂರು ಸೇರಿದಂತೆ ಗುಂಡಾಪುರ, ನಂದಿಪುರ, ಕೆಂಪಯ್ಯ ದೊಡ್ಡಿ, ದೇವಿರಹಳ್ಳಿ, ದಳವಾಯಿ ಕೋಡಿಹಳ್ಳಿ, ಬಸವನಹಳ್ಳಿ ಮತ್ತು ಇತರ ಗ್ರಾಮಗಳ ಆರಾಧ್ಯ ದೇವತೆ ಬೆಟ್ಟದರಸಮ್ಮ ತಾಯಿ ದೇವಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ಸನ್ನಿಧಿಯಲ್ಲಿ ಮಂಗಳವಾರ ಬೆಳಗ್ಗೆ 7.30 ರಿಂದ ಗಣಪತಿ ಪೂಜೆ ನಡೆಸಿ ನಂತರ ದೇವಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ನಡೆಸಿದ ನಂತರ ವಿವಿಧ ಪುಷ್ಪಗಳಿಂದ ದೇವರ ಮೂರ್ತಿಯನ್ನು ಅಲಂಕರಿಸಿ ವಿಶೇಷ ಪೂಜೆ ಕಾರ್ಯಕ್ರಮ ನಡೆಸಿ ಬಂದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು.ಸಂಜೆ ದೇವಸ್ಥಾನದ ಆವರಣವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಿ ರಾತ್ರಿ 7.30ರ ನಂತರ ಅರ್ಚಕರು ವಿಶೇಷ ಪೂಜಾ ಕಾರ್ಯಕ್ರಮ ನಡೆಸಿ ದೇವಸ್ಥಾನದ ಮುಂಭಾಗ ಇರುವ ಗರುಡು ಕಂಬವನ್ನೇರಿ ದೀಪವನ್ನು ಬೆಳಗಿಸಿದ ನಂತರ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ದೀಪ ಬೆಳಗಿಸಿ ದೇವರ ಕೃಪೆಗೆ ಪಾತ್ರರಾದರು. ನಂತರ ಬಂದ ಭಕ್ತಾದಿಗಳಿಗೆ ಬೆಳಗ್ಗೆಯಿಂದ ರಾತ್ರಿವರೆಗೂ ಪ್ರಸಾದ ವಿನಯೋಗಿಸಲಾಗಿತು.