ಯುವಜನಾಂಗ ಇಂಗ್ಲಿಷ್‌ ಭ್ರಮೆಯಿಂದ ಹೊರಬರಲಿ: ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ

KannadaprabhaNewsNetwork |  
Published : Nov 28, 2024, 12:30 AM ISTUpdated : Nov 28, 2024, 12:31 AM IST
54645 | Kannada Prabha

ಸಾರಾಂಶ

ಯುವಕರು ಕನ್ನಡವನ್ನು ಸ್ಪಷ್ಟ, ಶುದ್ಧವಾಗಿ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು. ಇಂಗ್ಲಿಷ್‌ ಭ್ರಮೆಯಿಂದ ಹೊರಬಂದರೆ ಕನ್ನಡ ತಾನಾಗಿಯೇ ಬೆಳೆಯುತ್ತದೆ. ನಮ್ಮ ಭಾಷೆ ಸಾಹಿತ್ಯ, ಸಂಸ್ಕೃತಿ ಕುರಿತು ನಾವು ಸದಾ ಕಾಳಜಿ ವಹಿಸಬೇಕು.

ಧಾರವಾಡ:

ಮಾತೃಭಾಷೆ ಕನ್ನಡ ಉಳಿಸಿ ಬೆಳೆಸುವ ಜವಾಬ್ದಾರಿ ಯುವಕರ ಮೇಲಿದ್ದು, ಯುವ ಜನಾಂಗವು ಇಂಗ್ಲಿಷ್‌ ಭ್ರಮೆಯಿಂದ ಹೊರ ಬಂದರೆ ಸಾಕು, ಕನ್ನಡ ಭಾಷೆ ತಾನಾಗಿಯೇ ಬೆಳೆಯುತ್ತದೆ ಎಂದು ಹಿರಿಯ ಸಾಹಿತಿ ನಾಡೋಜ ಗೊ.ರು. ಚೆನ್ನಬಸಪ್ಪ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಧರೆಗೆ ದೊಡ್ಡವರು ಕಾರ್ಯಕ್ರಮ ನಿಮಿತ್ತ ಬುಧವಾರ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಹಿರಿಯರು ಭಾಷೆಯನ್ನು ಬಳುವಳಿಯಾಗಿ ನೀಡಿ ಹೋಗಿದ್ದಾರೆ. ಆ ಭಾಷೆ, ಸಂಸ್ಕೃತಿಯನ್ನು ಜತನದಿಂದ ಕಾಪಾಡಬೇಕು. ಆದ್ದರಿಂದ ಯುವಕರು ಕನ್ನಡ ಭಾಷೆ ಬಗ್ಗೆ ಶ್ರದ್ಧೆ, ಭಕ್ತಿ ಹೊಂದಬೇಕು. ಜತೆಗೆ ಸರ್ಕಾರ ಕನ್ನಡದ ರಕ್ಷಣೆ ವಿಷಯದಲ್ಲಿ ಬದ್ಧತೆ ತೋರಬೇಕು ಎಂದರು.

ಯುವಕರು ಕನ್ನಡವನ್ನು ಸ್ಪಷ್ಟ, ಶುದ್ಧವಾಗಿ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು. ಇಂಗ್ಲಿಷ್‌ ಭ್ರಮೆಯಿಂದ ಹೊರಬಂದರೆ ಕನ್ನಡ ತಾನಾಗಿಯೇ ಬೆಳೆಯುತ್ತದೆ. ನಮ್ಮ ಭಾಷೆ ಸಾಹಿತ್ಯ, ಸಂಸ್ಕೃತಿ ಕುರಿತು ನಾವು ಸದಾ ಕಾಳಜಿ ವಹಿಸಬೇಕು. ಕನ್ನಡ ಭಾಷೆಯ ರಕ್ಷಣೆಗೆ ಯುವ ಜನತೆ ಪಣ ತೊಡಬೇಕು ಎಂದರು.

ವಿದ್ಯಾರ್ಥಿಗಳು ಸಾಂಪ್ರದಾಯಿಕ ಕಟ್ಟುಪಾಡಿಗೆ ಬಲಿಯಾಗದೆ ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಆಧುನಿಕ ಯುಗದಲ್ಲಿ ಹಿರಿಯರು ಹೇಳುವ ವಿಚಾರಗಳನ್ನು ಯುವಜನತೆ ಹೇಗೆ ಸ್ವೀಕರಿಸುತ್ತದೆ ಎಂಬುದು ಮುಖ್ಯ. ವಿದ್ಯಾರ್ಥಿಗಳು ಜಾನಪದ ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ಹೊಂದಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಯವ್ವನದ ವಯಸ್ಸು ಮಹತ್ವದ ಅವಧಿ. ಈ ಸಮಯ ವ್ಯರ್ಥ ಮಾಡದೆ ಸದ್ಬಳಕೆ ಮಾಡಿಕೊಳ್ಳಬೇಕಲ್ಲದೆ, ಒಳ್ಳೆ ಹವ್ಯಾಸ, ಸಹವಾಸ ಬೆಳೆಸಿಕೊಳ್ಳಿ. ಹೆಚ್ಚು ಹೆಚ್ಚು ಗ್ರಂಥ ಓದುವ ಮೂಲಕ ಜ್ಞಾನದ ಭಂಡಾರ ವೃದ್ಧಿಸಿಕೊಂಡು ಸಭ್ಯ ನಾಗರಿಕರಾಗಿ ಜೀವನ ಸಾಗಿಸಬೇಕು. ಲೋಕದ ಜ್ಞಾನ ಹೆಚ್ಚಸಿಕೊಂಡರೆ ಸಮಾಜದಲ್ಲಿನ ಸಮಸ್ಯೆಗಳನ್ನು ಎದುರಿಸಲು ಅನುಕೂಲವಾಗಲಿದೆ ಎಂದರು.

ಸಾಹಿತಿ ಡಾ. ವೀರಣ್ಣ ರಾಜೂರ ಮಾತನಾಡಿ, ಗೊರುಚ ಮೆಟ್ರಿಕ್‌ವರೆಗೆ ಮಾತ್ರ ಶಿಕ್ಷಣ ಪಡೆದಿದ್ದರೂ ಪದವಿ ಪಡೆದವರಿಗಿಂತ ಹೆಚ್ಚಿನ ಜ್ಞಾನ ಸಂಪಾದಿಸಿದ್ದಾರೆ. ಜಾನಪದ, ವಚನ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಕಾರ್ಯ ಮಾಡಿದ್ದಾರೆ. ಕಾಯಕ ಯೋಗಿಯಂತೆ ಕನ್ನಡ ಕಟ್ಟುವ ಕೆಲಸ ಮಾಡಿರುವ ಅವರು, ಗ್ರಾಮ ವಿಕಾಸ ಪ್ರತಿಷ್ಠಾನ ಮೂಲಕ ತಮ್ಮ ಗ್ರಾಮಾಭಿವೃದ್ಧಿ ಮಾಡಿರುವ ಕಾರ್ಯ ಸ್ಮರಣೀಯ ಎಂದು ಹೇಳಿದರು.

ಡಾ. ಗುರುಲಿಂಗಪ್ಪ ಧಬಾಲೆ ಮಾತನಾಡಿ, ಬಸವಣ್ಣನವರ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸರಳ, ಸಜ್ಜನಿಕೆಯ ಶಿಸ್ತುಬದ್ಧ ಜೀವನವನ್ನು ಗೊರುಚ ನಡೆಸಿದ್ದಾರೆ. ಜಂಗಮಶೀಲ ವ್ಯಕ್ತಿ. ಸಾಹಿತ್ಯ, ಸಾಂಸ್ಕೃತಿಕ ಲೋಕ ಕಟ್ಟುತ್ತಿರುವ ಅಪರೂಪದ ವ್ಯಕ್ತಿಯಾಗಿದ್ದಾರೆ. ವಚನ ಸಾಹಿತ್ಯ, ಜಾನಪದ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆ ನೀಡಿ ರಾಜ್ಯಕ್ಕೆ ಮಾದರಿ ಜೀವನ ನಡೆಸಿದ ಕೀರ್ತಿ ಹೊಂದಿದ್ದಾರೆ ಎಂದರು.

ಸಂಘದ ಉಪಾಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ, ಡಾ. ಆನಂದ ಪಾಂಡುರಂಗಿ, ನಿಂಗಣ್ಣ ಕುಂಟಿ, ಸತೀಶ ತುರಮರಿ, ವಿದ್ಯಾರ್ಥಿಗಳು ಇದ್ದರು. ಶಂಕರ ಹಲಗತ್ತಿ ಸ್ವಾಗತಿಸಿದರು. ಶಂಕರ ಕುಂಬಿ ನಿರೂಪಿಸಿದರು.ದಾಖಲೆಯೊಂದಿಗೆ ಪ್ರತಿಕ್ರಿಯಿಸಬೇಕು:

ವಚನ ಸಾಹಿತ್ಯದ ಪ್ರಸಾರದ ಬಗ್ಗೆ ನಿರಾಸೆ ಬೇಡ. ವಚನ ಸಾಹಿತ್ಯಕ್ಕೆ ಭಂಗ ತರುವ ಕೆಲಸವಾದಾಗ ಪ್ರತಿಕ್ರಿಯೆ ನೀಡುವುದು ಸಹಜ. ಆದರೆ, ಅದು ಭಾವನಾತ್ಮಕವಾಗದೆ ಸೂಕ್ತ ದಾಖಲಾತಿಯೊಂದಿಗೆ ಪ್ರತಿಕ್ರಿಯಿಸಬೇಕು. ವಚನ ದರ್ಶನಕ್ಕೆ ಪ್ರತಿಯಾಗಿ ಜಾಗತಿಕ ಲಿಂಗಾಯತ ಮಹಾಸಭಾ ಪುಸ್ತಕ ರಚನೆ ಮಾಡುತ್ತಿದೆ. ಆ ಕೃತಿ ಮೂಲಕವೇ ಉತ್ತರ ನೀಡಲಿದ್ದು, ಅದಕ್ಕೆ ಪೂರಕ ಮಾಹಿತಿ ಸಂಗ್ರಹ ಇದ್ದರೆ ದಾಖಲೆ ಸಮೇತ ಕಳುಹಿಸಬಹುದು ಎಂದು ಗೊ.ರು.ಚನ್ನಬಸಪ್ಪ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೋಹಿನಿ ಸಿದ್ದೇಗೌಡ ನೊಂದವರ ಪರ ಗಟ್ಟಿ ಧ್ವನಿಯಾಗಿದ್ದರು
ಪೌರಕಾರ್ಮಿಕರು ಆರೋಗ್ಯದ ಕಡೆಗೂ ಗಮನಹರಿಸಬೇಕಾದುದು ಅಗತ್ಯ: ಶ್ವೇತಾ