ಮುಂಡಗೋಡ: ಹಿಮಾಚಲ ಪ್ರದೇಶದ ಧರ್ಮಶಾಲಾದ ಟಿಬೇಟಿಯನ್ ಆಡಳಿತ ಮುಖ್ಯಸ್ಥ ಸಿಕ್ಯಾಂಗ್ ಪೆಂಪಾ ಡೈರಿಂಗ್ ಅವರು ಬುಧವಾರ ಮುಂಡಗೋಡ ಟಿಬೇಟಿಯನ್ ಕಾಲನಿಗೆ ಆಗಮಿಸಿದ್ದು, ಅವರನ್ನು ಇಲ್ಲಿಯ ಟಿಬೇಟಿಯನ್ನರು ಹಾಗೂ ಲಾಮಾ ಬಿಕ್ಕುಗಳು ಅದ್ಧೂರಿಯಾಗಿ ಸ್ವಾಗತಿಸಿ, ಬರಮಾಡಿಕೊಂಡರು.ಸಿಕ್ಯಾಂಗ್ ಪೆಂಪಾ ಡೈರಿಂಗ್ ಅವರು ಐದು ದಿನಗಳ ಕಾಲ ಮುಂಡಗೋಡ ಟಿಬೇಟಿಯನ್ ಕಾಲನಿಯಲ್ಲಿ ವಾಸ್ತವ್ಯ ಮಾಡುವರು. ಟಿಬೇಟಿಯನ್ ಬೌದ್ಧ ಸಂಪ್ರದಾಯದ ಗೆಲುಗ್ವಾ ಪಂಥದ ಸರ್ವೋಚ್ಚ ಮುಖ್ಯಸ್ಥ ೧೦೫ನೇ ಗಾಡೆನ್ ಟ್ರಿಪಾ ಅವರ ಸಿಂಹಾಸನರೋಹಣ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೇ ಟಿಬೇಟಿಯನ್ನರ ಕುಂದುಕೊರತೆಗಳನ್ನು ಆಲಿಸಲಿದ್ದಾರೆ. ಬೌದ್ಧ ದೇಗುಲಗಳು ಹಾಗೂ ಶಾಲೆ ಮತ್ತು ಆಸ್ಪತ್ರೆಗಳು, ಸಹಕಾರಿ ಸಂಸ್ಥೆಗಳಿಗೆ, ವೃದ್ಧಾಶ್ರಮಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.ಯಲ್ಲಾಪುರದಲ್ಲಿ ದತ್ತರಥಕ್ಕೆ ಚಾಲನೆ
ಯಲ್ಲಾಪುರ: ಇದೊಂದು ಶ್ರೇಷ್ಠ ಪ್ರವಾಸೋದ್ಯಮ ಪುಣ್ಯಕ್ಷೇತ್ರವಾಗಿ ನಿರ್ಮಾಣ ಮಾಡುವ ಕಾರ್ಯದಲ್ಲಿ ಅನೇಕರು ನಿರಂತರ ಕೆಲಸ ಮಾಡುತ್ತಿದ್ದಾರೆ. ತಾಲೂಕಿನ ಪ್ರತಿಯೊಬ್ಬರಿಗೂ ನೂತನ ದತ್ತಮಂದಿರದ ಪ್ರತಿಷ್ಠಾ ಮಹೋತ್ಸವಕ್ಕೆ ಆಮಂತ್ರಿಸುವ ನೆಲೆಯಲ್ಲಿ ಈ ರಥೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಟ್ಟಡ ನಿರ್ಮಾಣ ಸಮಿತಿಯ ಉಪಾಧ್ಯಕ್ಷ, ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ತಿಳಿಸಿದರು.ನ. ೨೭ರಂದು ದತ್ತಮಂದಿರದ ಆವಾರದಲ್ಲಿ ಹಳ್ಳಿ ಹಳ್ಳಿಗೆ ಪ್ರಯಾಣಿಸಲಿರುವ ದತ್ತರಥಕ್ಕೆ ಚಾಲನೆ ನೀಡಿ ಮಾತನಾಡಿ, ಈ ಮಂದಿರದ ಕಾರ್ಯದಲ್ಲಿ ಮತ್ತು ಮುಂದಿನ ದಿನಗಳಲ್ಲಿ ಭಕ್ತರಿಗೂ ಮತ್ತು ಈ ಮಂದಿರಕ್ಕೂ ಸಾರ್ವಜನಿಕರನ್ನು ಬೆಸೆಯುವ ಹಿನ್ನೆಲೆ ಹಾಗೂ ತಾಲೂಕಿನ ಎಲ್ಲ ಪ್ರಸಿದ್ಧ ದೇವಾಲಯಗಳ ತೀರ್ಥ ತಂದು, ಪ್ರತಿಷ್ಠಾ ಮಹೋತ್ಸವದಲ್ಲಿ ದತ್ತಮಂದಿರಕ್ಕೆ ಎಲ್ಲ ಪವಿತ್ರ ಜಲವನ್ನು ಅರ್ಪಿಸಿ, ಭಾವನಾತ್ಮಕ ಸಂಬಂಧ ಬೆಳೆಸುವ ಮಹತ್ವದ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.ರಾಮಚಂದ್ರಾಪುರ ಮಠದ ಇಲ್ಲಿನ ಉಸ್ತುವಾರಿ ವಹಿಸಿಕೊಂಡ ಮಹೇಶ ಚಟ್ನಳ್ಳಿ ಮಾತನಾಡಿ, ತಾಲೂಕಿನ ಪ್ರತಿಯೊಬ್ಬರಿಗೂ ಡಿ. ೧೩, ೧೪, ೧೫ರಂದು ೩ ದಿನಗಳ ಕಾಲ ನಡೆಯುವ ಪ್ರತಿಷ್ಠಾ ಮಹೋತ್ಸವದ ಆಮಂತ್ರಣ ತಲುಪಿಸುವ ಉದ್ದೇಶದಿಂದ ಹಳ್ಳಿಹಳ್ಳಿಗೆ ಈ ರಥಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.ಈ ಸಂದರ್ಭದಲ್ಲಿ ಕಟ್ಟಡ ಸಮಿತಿಯ ಪ್ರಮುಖರಾದ ಶ್ರೀರಂಗ ಕಟ್ಟಿ, ನಾಗೇಶ ಯಲ್ಲಾಪುರಕರ, ಸಿ.ಜಿ. ಹೆಗಡೆ, ಕೆ.ಟಿ. ಭಟ್ಟ, ಶಾಂತಾರಾಮ ಹೆಗಡೆ, ಪ್ರಶಾಂತ ಹೆಗಡೆ, ಪ್ರಸಾದ ಹೆಗಡೆ, ವೇಣುಗೋಪಾಲ ಮದ್ಗುಣಿ, ನಾಗರಾಜ ಮದ್ಗುಣಿ, ರಮೇಶ ಹೆಗಡೆ, ಮಹೇಶ ಗೌಳಿ, ಕಿರಣ ಶೆಟ್ಟಿ, ನಾರಾಯಣ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.