ನಾಡು-ನುಡಿಗೆ ಕೊಡುಗೆ ನೀಡಿದಾಗ ಜನ್ಮ ಸಾರ್ಥಕ: ಎಸ್.ಆರ್.ಪಾಟೀಲ್

KannadaprabhaNewsNetwork |  
Published : Nov 28, 2024, 12:30 AM IST
27blg1 | Kannada Prabha

ಸಾರಾಂಶ

ಹಿರಿಯ ಸಹಕಾರಿ ಎಸ್.ಆರ್.ಪಾಟೀಲರು ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ಹೆಸರಿನಲ್ಲಿ ದತ್ತಿನಿಧಿ ಸ್ಥಾಪನೆ ಮಾಡುವ ಮೂಲಕ ವೈಶಿಷ್ಟತೆ ಮೆರೆದಿದ್ದಾರೆ

ಕನ್ನಡಪ್ರಭ ವಾರ್ತೆ ಬೀಳಗಿ

ಹುಟ್ಟು-ಸಾವುಗಳ ಮಧ್ಯ ನಾಡು, ನುಡಿ, ಸಮಾಜಕ್ಕೆ ನಮ್ಮಿಂದ ಏನಾದರೂ ಕೊಡುಗೆ ನೀಡಿದಾಗ ಮಾತ್ರ ನಮ್ಮ ಜನ್ಮ ಸಾರ್ಥಕವಾದಂತೆ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ್ ಹೇಳಿದರು.

ಇಲ್ಲಿನ ಶ್ರೀ ಕಲ್ಮಠದ ಆವರಣದಲ್ಲಿ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ದತ್ತಿನಿಧಿ ಸ್ಮರಣಾರ್ಥ ಹಾಗೂ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಏರ್ಪಡಿಸಿದ ಲೇಖಕ ವೀರೇಂದ್ರ ಶೀಲವಂತ ಅವರ ಉಮರ ಖಯ್ಯಾಮ್ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಉಮಾರ ಖಯ್ಯಾಮ್ ಒಂದು ಮೌಲಿಕ ಗ್ರಂಥ. ಲೇಖಕ ಶೀಲವಂತ ಖಯ್ಯಾಮ್ ಜೀವನದ ಕುರಿತು ನಿಜ ಸ್ವರೂಪ ತೆರೆದಿಟ್ಟಿದ್ದಾರೆ ಎಂದರು.

ಕರ್ನಾಟಕದ ಕಂದಗಲ್ ಹನುಮಂತರಾಯ, ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕ, ಶಹನಾಯಿ ಮಾಂತ್ರಿಕ ಸನಾದಿ ಅಪ್ಪಣ್ಣ, ಕಂಚಿನ ಕಂಠದ ಗಾಯಕಿ ಅಮೀರಬಾಯಿ ಕರ್ನಾಟಕಿ, ನೇತೃ ತಜ್ಞ ಎಂ.ಸಿ.ಮೋದಿ, ಕೃಷಿ ತಜ್ಞ ಎನ್.ಪಿ.ಪಾಟೀಲ್, ಪಶುವೈದ್ಯ ಸಿದ್ದಪ್ಪ ಬಿದರಿ, ಚಲನಚಿತ್ರ ನಟ ಮಧ್ವರಾಜ ಉಮರ್ಜಿ ಅವರಂತಹ ಶ್ರೇಷ್ಠ ದಿಗ್ಗಜರಿಗೆ ಜನ್ಮ ನೀಡಿದ ಪವಿತ್ರ ಭೂಮಿ ಈ ಬೀಳಗಿ ಎಂದು ಎಸ್.ಆರ್.ಪಾಟೀಲ್ ತಿಳಿಸಿದರು.

ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ವ್ಯಕ್ತಿಗಳ ಹೆಸರಿನ ಮೇಲೆ ದತ್ತಿನಿಧಿ ಸ್ಥಾಪಿಸುವುದು ವಾಡಿಕೆ. ಆದರೆ ಹಿರಿಯ ಸಹಕಾರಿ ಎಸ್.ಆರ್.ಪಾಟೀಲರು ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ಹೆಸರಿನಲ್ಲಿ ದತ್ತಿನಿಧಿ ಸ್ಥಾಪನೆ ಮಾಡುವ ಮೂಲಕ ವೈಶಿಷ್ಟತೆ ಮೆರೆದಿದ್ದಾರೆ ಎಂದರು. ಸಾನ್ನಿಧ್ಯ ವಹಿಸಿದ ಗುರುಪಾದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕನ್ನಡ ಸಾರಸತ್ವ ಲೋಕಕ್ಕೆ ಶೀಲವಂತ ಅವರ 16ನೇ ಕೃತಿ ಇಂದು ಲೋಕಾರ್ಪಣೆಗೊಂಡಿತು. ಈ ಕೃತಿ ಅವರ ಭಾವೈಕ್ಯತೆ ಭಾವಕ್ಕೆ ಸಾಕ್ಷಿಯಾಗಿದೆ ಎಂದರು.

ಕೃತಿ ಪರಿಚಯಿಸಿದ ಎಚ್.ಬಿ.ಧರ್ಮಣ್ಣವರ, ಶೀಲವಂತ ಅವರ ಕೃತಿಯಲ್ಲಿ ಕವಿತ್ವದ ಗುಣ ದೈವದತ್ತವಾದ ಪ್ರೇರಣೆ ಅರ್ಥಪೂರ್ಣವಾಗಿ ಚಿತ್ರಿತವಾಗಿದೆ. ಉಮರ ಖಯ್ಯಾಮ್ ಒಬ್ಬ ಲೇಖಕ, ಕವಿ, ದಾರ್ಶನಿಕ, ಖಗೋಳಶಾಸ್ತ್ರಜ್ಞ ನಾಗಿದ್ದನು. ಉದಬತ್ತಿ ಸುವಾಸನೆ ಕೃತಿಗೆ ಕಾರಣವಾಯಿತು ಎನ್ನುವುದನ್ನು ಅರ್ಥಪೂರ್ಣವಾಗಿ ಬಳಸಿದ ಹಿತ–ಮಿತವಾದ ಶಬ್ಧಗಳೇ ಕೃತಿಯ ಜೀವಾಳವಾಗಿವೆ ಎಂದು ತಿಳಿಸಿದರು.

ಕುಂದರಗಿ ಜೆಮ್ ಶುಗರ್ಸ್ ನಿರ್ದೇಶಕ ರಾಮನಗೌಡ ಜಕ್ಕನಗೌಡರ ಮಾತನಾಡಿದರು. ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್, ಉಪಾಧ್ಯಕ್ಷ ಸತ್ಯಪ್ಪ ಮೆಲ್ನಾಡ, ಪ್ರಧಾನ ವ್ಯವಸ್ಥಾಪಕ ಎಲ್.ಬಿ.ಕುರ್ತಕೋಟಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಕೆ ಎಸ್ ಸೋಮನಕಟ್ಟಿ ಇದ್ದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಗುರುರಾಜ ಲೂತಿ ಪ್ರಸ್ತಾವಿಕವಾಗಿ ಮಾತನಾಡಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ತಾಲೂಕು ಕಾರ್ಯದರ್ಶಿ ಚಿದಾನಂದ ಜಡಿಮಠ ಸ್ವಾಗತಿಸಿ, ಶಿಕ್ಷಕರಾದ ಎಂ.ಬಿ.ತಾಂಬೋಳಿ, ಬಿ.ಎಂ. ಕುಪ್ಪಸ್ತ ನಿರೂಪಿಸಿದರು. ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಗೌರವ ಕಾರ್ಯದರ್ಶಿ ಸೋಮಲಿಂಗ ಬೇಡರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲೆಯಾದ್ಯಂತ 21 ರಂದು ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ
ಸಾಲಿಗ್ರಾಮ: ಕಿಶೋರ ಯಕ್ಷಗಾನ ಸಂಭ್ರಮ ಉದ್ಘಾಟನೆ