ಭಾರತದ ಸಂವಿಧಾನ ಜಗತ್ತಿನ ಶ್ರೇಷ್ಠ ಸಂವಿಧಾನ

KannadaprabhaNewsNetwork | Published : Feb 24, 2024 2:32 AM

ಸಾರಾಂಶ

ಭಾರತ ದೇಶ ವಿವಿಧ ಜಾತಿ, ಧರ್ಮ, ಜನಾಂಗ ಹೊಂದಿದ ವೈವಿಧ್ಯಮ ರಾಷ್ಟ್ರವಾಗಿದ್ದರೂ ಭಾರತ ದೇಶ ಏಕ ಸಂವಿಧಾನದಡಿ ಸಮಾನ ಹಕ್ಕುಗಳನ್ನು ಪ್ರತಿಪಾದಿಸುತ್ತ ಅಭಿವೃದ್ಧಿ ಕಡೆ ಸಾಗುತ್ತಿದೆ. ಪ್ರತಿ ವಿದ್ಯಾರ್ಥಿಗಳು ಸಂವಿಧಾನ ಪೀಠಿಕೆ ಕಂಠಪಾಠ ಮಾಡಬೇಕು ಹಾಗೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು

ಹಾವೇರಿ: ಸಾಮಾಜಿಕ ಸಮಾನತೆ, ಭ್ರಾತೃತ್ವ ಹಾಗೂ ಜ್ಯಾತೀತ ತತ್ವದ ಆಧಾರದ ಮೇಲೆ ಎಲ್ಲರನ್ನೂ ಒಳಗೊಂಡಿರುವ ಭಾರತದ ಸಂವಿಧಾನ ಜಗತ್ತಿನ ಶ್ರೇಷ್ಠ ಸಂವಿಧಾನವಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್ ಹೇಳಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಜರುಗಿದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಉದ್ಘಾಟಿಸಿ, ಸಂವಿಧಾನ ಪೀಠಿಕೆ ವಾಚಿಸಿ ಮಾತನಾಡಿದ ಅವರು, ಭಾರತದ ಸಂವಿಧಾನ ಆಶಯಗಳನ್ನು ಎಲ್ಲರಿಗೂ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಸಂವಿಧಾನ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯಲ್ಲಿ ಕಳೆದ ಜ. ೨೬ರಂದು ಆರಂಭಗೊಂಡ ಈ ಸಂವಿಧಾನ ಜಾಗೃತಿ ಜಾಥಾ ಜಿಲ್ಲೆಯ ೨೨೩ ಗ್ರಾಪಂ ಹಾಗೂ ೧೦ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಎರಡು ಮಾರ್ಗಗಳಲ್ಲಿ ಸಂಚರಿಸಿ, ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನದ ಆಶಯಗಳನ್ನು ಸಾಮಾನ್ಯ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಈ ಜಾಗೃತಿ ಜಾಥಾ ಮಾ. ೭ವರೆಗೆ ಕಾಲೇಜುಗಳಲ್ಲಿ ಜರುಗಲಿದೆ ಎಂದರು.

ಭಾರತ ದೇಶ ವಿವಿಧ ಜಾತಿ, ಧರ್ಮ, ಜನಾಂಗ ಹೊಂದಿದ ವೈವಿಧ್ಯಮ ರಾಷ್ಟ್ರವಾಗಿದ್ದರೂ ಭಾರತ ದೇಶ ಏಕ ಸಂವಿಧಾನದಡಿ ಸಮಾನ ಹಕ್ಕುಗಳನ್ನು ಪ್ರತಿಪಾದಿಸುತ್ತ ಅಭಿವೃದ್ಧಿ ಕಡೆ ಸಾಗುತ್ತಿದೆ. ಪ್ರತಿ ವಿದ್ಯಾರ್ಥಿಗಳು ಸಂವಿಧಾನ ಪೀಠಿಕೆ ಕಂಠಪಾಠ ಮಾಡಬೇಕು ಹಾಗೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಂವಿಧಾನದ ಆಶಯ ಎಲ್ಲರೂ ಕಾಪಾಡೋಣ ಎಂದು ಹೇಳಿದರು.

ಉಪನ್ಯಾಸಕಿ ಎಸ್.ಎಸ್. ಪವಾರ ಅವರು ಸಂವಿಧಾನ ಕುರಿತು ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಸಂವಿಧಾನ ಜಾಗೃತಿ ಜಾಥಾ ವಾಹನ ಚಾಲಕರು ಹಾಗೂ ಎಲ್.ಇ.ಡಿ. ಟೆಕ್ನಿಶಿಯನ್‌ರನ್ನು ಸನ್ಮಾನಿಸಲಾಯಿತು.

ಇದಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ರಥದ ಮೆರವಣಿಗೆ ಕಲಾ ತಂಡಗಳೊಂದಿಗೆ ನಡೆಸಲಾಯಿತು. ಶಾಲಾ ಮಕ್ಕಳು, ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಜಾಥಾದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್‌ ನಾಗರಾಜ, ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಅಮೃತಗೌಡ ಪಾಟೀಲ, ನಗರಸಭೆ ಪೌರಾಯುಕ್ತ ಪರಶುರಾಮ ಚಲವಾದಿ, ಪಶು ಸಂಗೋಪನೆ ಇಲಾಖೆ ಅಧಿಕಾರಿ ಪರಮೇಶ್ವರ ಹುಬ್ಬಳ್ಳಿ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜಾನಾಯ್ಕ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ತೇಜರಾಜ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ, ಬಸವರಾಜ ಹಾದಿಮನಿ, ರಮೇಶ ಆನವಟ್ಟಿ, ಸಂಜಯಗಾಂಧಿ, ಶಂಭು ಕಳಸದ, ನಾಗರಾಜ, ಮುತ್ತಪ್ಪ, ಸುಭಾಸ ಬೆಂಗಳೂರು, ಎನ್.ಪಿ. ಕಾಳೆ, ಭೀಮಣ್ಣ ಯಲ್ಲಪ್ಪನವರ, ಮುತ್ತುರಾಜ ಮಾದರ ಇತರರು ಉಪಸ್ಥಿತರಿದ್ದರು.

Share this article