ಗಣರಾಜ್ಯ ಸಂಭ್ರಮ । ದೇಶದ 76ನೇ ಗಣತಂತ್ರದ ಹಬ್ಬ, ಧ್ವಜಾರೋಹಣ । ಸರ್ಕಾರಿ ನೌಕರರಿಗೆ ಪುರಸ್ಕಾರ
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ|| ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ದೇಶವಾಸಿಗಳಿಗೆ ಸಮಾನತೆಯನ್ನು ಕಲ್ಪಿಸಿದ್ದು, ದೇಶದಲ್ಲಿ ಸಂವಿಧಾನ ಜಾರಿಯಾದ ದಿನವನ್ನು ಗಣರಾಜ್ಯೋತ್ಸವ ಎಂದು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದು ತಹಸೀಲ್ದಾರ್ ಮಂಜುಳಾ ಹೆಗಡಾಳ್ ನುಡಿದರು.
ಭಾನುವಾರ ಪಟ್ಟಣದ ಡಾ.ರಾಜ್ ರಂಗಮಂದಿರ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ, ವಿವಿಧ ಇಲಾಖೆಗಳು ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ೭೬ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಸಂವಿಧಾನ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳನ್ನು ಕಲ್ಪಿಸಿದ್ದು, ಅಂತೆಯೇ ಕರ್ತವ್ಯಗಳನ್ನು ಪಾಲಿಸಿವುದು ಎಲ್ಲರ ಹೊಣೆಯಾಗಿದೆ. ಗಣರಾಜ್ಯೋತ್ಸವವು ಪ್ರತಿಯೊಬ್ಬ ಭಾರತೀಯರೂ ಒಗ್ಗೂಡಿ ಆಚರಿಸುವ ಹಬ್ಬವಾಗಿದೆ ಎಂದರು.
ಗಣರಾಜ್ಯೋತ್ಸವದ ಸಂಭ್ರಮದ ಆಚರಣೆಯ ಜೊತೆಗೆ ದೇಶದ ಸ್ವಾತಂತ್ರ್ಯ ಮತ್ತು ದೇಶ ಕಟ್ಟುವಲ್ಲಿ ಹಿರಿಯರು ನೀಡಿದ ಕೊಡುಗೆಗಳನ್ನು ಸ್ಮರಿಸುವ ಸುದಿನವಾಗಿದೆ. ಸ್ವಾತಂತ್ರ್ಯ ನಂತರದಲ್ಲಿ ದೇಶವು ಹಲವು ಪ್ರಾಂತ್ಯಗಳಾಗಿ ಹಂಚಿಹೋಗಿತ್ತು. ಸಂವಿಧಾನವು ಜಾರಿಯಾದ ತರುವಾಯ ಇಡೀ ದೇಶ ಒಂದೇ, ದೇಶವಾಸಿಗಳು ಎಲ್ಲರೂ ಸಮಾನರು ಎನ್ನುವ ಭಾವನೆ ಮೂಡಿತು. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಲು ಸಂವಿಧಾನದಿಂದ ಮಾತ್ರ ಸಾಧ್ಯ. ಜಾತಿ, ಮತಗಳ ಭೇದವನ್ನು ಮರೆತು ಒಗ್ಗೂಡಿದಾಗ ದೇಶ ಬಲಿಷ್ಠವಾಗುತ್ತದೆ ಎಂದರು.
ವಿವಿಧ ಇಲಾಖೆಯಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಸರ್ಕಾರಿ ನೌಕರರಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು. ನಂತರ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಪಥ ಸಂಚಲನ, ಸಾಂಸ್ಕೃತಿಕ ನೃತ್ಯ ರೂಪಕ ಕಾರ್ಯಕ್ರಮಗಳು ಜರುಗಿದವು.