ಕಡೂರಿಗೆ ಆಗಮಿಸಿದ ಸಂವಿಧಾನ ಜಾಗೃತ ಜಾಥಾ ರಥಯಾತ್ರೆಗೆ ಸ್ವಾಗತ: ಮಾಲಾರ್ಪಣೆ
ಕೃಷಿ ಕುಟುಂಬದಿಂದ ಬಂದ ಸಾಮಾನ್ಯ ರೈತನ ಮಗನೊಬ್ಬ ಶಾಸಕನಾಗಬಹುದು ಎಂಬುದಕ್ಕೆ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಕೊಡುಗೆ ಕಾರಣ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಕಡೂರಿಗೆ ಆಗಮಿಸಿದ ಸಂವಿಧಾನ ಜಾಗೃತ ಜಾಥಾ ರಥಯಾತ್ರೆಯನ್ನು ಕ್ಷೇತ್ರದ ಜನರ ಪರವಾಗಿ ಸ್ವಾಗತಿಸಿ, ಮರವಂಜಿ ವೃತ್ತದಲ್ಲಿ ವಿವಿಧ ಮುಖಂಡರೊಂದಿಗೆ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.ಸತತ ಅಧ್ಯಯನದ ಮೂಲಕ ಭಾರತದ ಪ್ರತಿಯೊಬ್ಬ ನಾಗರಿಕರಿಗೆ ಸಮಾನತೆ ನೀಡುವ ಸಂವಿಧಾನವನ್ನು ರಚಿಸಿದ ಅಂಬೇಡ್ಕರ್ ಪ್ರಾತಃ ಸ್ಮರಣೀಯರಾಗಿದ್ದಾರೆ. ಇಂದು ಭಾರತ ವಿಶ್ವಮಾನ್ಯತೆ ಪಡೆಯಲು ಹಾಗು ಮಹಿಳೆಯರಿಗೂ ಸಮಾನ ಹಕ್ಕು ಸಿಗಲು ಅಂಬೇಡ್ಕರ್ ರಚಿಸಿದ ಸಂವಿಧಾನವೇ ಕಾರಣವಾಗಿದೆ. ಪ್ರಸ್ತುತ ಕಾಲಮಾನದಲ್ಲಿ ನಡೆಯುತ್ತಿರುವ ಸಂವಿಧಾನ ವಿರೋಧಿಸುವ ಶಕ್ತಿಗಳ ವಿಕೃತ ಮನಸ್ಸುಗಳ ಅನಪೇಕ್ಷಿತ ವಿದ್ಯಮಾನಗಳಿಂದ ಜನರಲ್ಲಿ ಮೂಡಿರುವ ಅಭಧ್ರತೆ ಭಾವನೆ ದೂರವಾಗಬೇಕು. ಇದರ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಮೂಡಬೇಕು. ಪ್ರಸ್ತುತ ನಮ್ಮ ನಾಯಕರು ಹಾಗು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರ ನೇತೃತ್ವದ ರಾಜ್ಯ ಸರ್ಕಾರ ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳ ಅಡಿಯಲ್ಲೇ ನಡೆಯುತ್ತಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ದೇಶಕ್ಕೆ ಅರ್ಪಿಸಿದ ಸಂವಿಧಾನವನ್ನು ಡಾ. ಅಂಬೇಡ್ಕರ್ ಬರೆಯದೇ ಹೋಗಿದ್ದರೆ ನಾವುಗಳು ರಾಜಕಾರಣ ಕ್ಷೇತ್ರದಲ್ಲಿ ಬೆಳೆಯತ್ತಿರಲಿಲ್ಲ. ಅವರ ಆಶಯಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡಬೇಕಿದೆ ಎಂದರು.
ಕಡೂರು ಪಟ್ಟಣಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ರಥ ಯಾತ್ರೆ ಮೆರವಣಿಗೆಯಲ್ಲಿ ಮರವಂಜಿ ವೃತ್ತದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಶಾಸಕ ಕೆ ಎಸ್ ಆನಂದ್ ಮುಖಂಡರೊಂದಿಗೆ ಮಾಲಾರ್ಪಣೆ ಮಾಡಿದರು.