ಕಾರ್ಮಿಕ ವಿರೋಧಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸ್ತೇವೆ

KannadaprabhaNewsNetwork | Published : Feb 19, 2024 1:31 AM

ಸಾರಾಂಶ

ಶಹಾಪುರ ನಗರದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ ಹಾಗೂ ಜೆಸಿಟಿಯು ಕಾರ್ಮಿಕ ಸಂಘಟನೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಶಹಾಪುರ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ ಹಾಗೂ ಜೆಸಿಟಿಯು ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ನಗರದ ಬಲಭೀಮೇಶ್ವರ ದೇವಸ್ಥಾನದಿಂದ ಬಸವೇಶ್ವರ ವೃತ್ತದಿಂದ ಪ್ರಮುಖ ಬೀದಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿ ಮುಂದೆ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿ ತಹಸಿಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.

ಮುಂಬರುವ ಲೋಕಸಭಾ ಚುನಾವಣೆ ಎಲ್ಲರ ದೃಷ್ಟಿಯಿಂದ ಮಹತ್ವವಾಗಿದ್ದು, ಈ ಜನವಿರೋಧಿ ನೀತಿಗಳಿಗೆ ಕಾರಣವಾಗಿರುವ ಕಾರ್ಪೊರೇಟ್ ಕಂಪನಿಗಳ ಪರವಾದ ಶಕ್ತಿಗಳು, ರಾಜಕೀಯ ಪಕ್ಷಗಳ ಧೋರಣೆಗಳನ್ನು ಉಗ್ರವಾಗಿ ಪ್ರತಿರೋಧಿಸಬೇಕಾಗಿದೆ. ಇದರ ಭಾಗವಾಗಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಕಾರ್ಪೊರೇಟ್-ಕೋಮುವಾದಿ ಅಕ್ರಮ ಮೈತ್ರಿಕೂಟವನ್ನು ನಿರ್ಣಾಯಕವಾಗಿ ಸೋಲಿಸಬೇಕಿದೆ. ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕಿದೆ. ರೈತರ hawgubಕಾರ್ಮಿಕ ವಿರೋಧಿ ಸರ್ಕಾರಕ್ಕೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಪ್ರತಿಭಟನಾಕಾರರು ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಈ ವೇಳೆ ಮಾತನಾಡಿದ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚೆನ್ನಪ್ಪ ಆನೆಗುಂದಿ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿ 7.6 ಕೋಟಿ ಕೂಲಿಕಾರರನ್ನು ಹೊರ ಹಾಕಲಾಗಿದೆ. ಕೇಂದ್ರ ಸರ್ಕಾರದ ತಪ್ಪು ನೀತಿಯಿಂದಾಗಿ ಯಾವುದೇ ಕೃಷಿ ಉತ್ಪಾನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗುತ್ತಿಲ್ಲ. ಸಾಲಬಾಧೆ ತೀವ್ರಗೊಂಡಿದೆ. ಹಸಿವು, ಆತ್ಮಹತ್ಯೆ, ವಲಸೆ ಅಘಾತಕಾರಿ ಪ್ರಮಾಣದಲ್ಲಿ ಹೆಚ್ಚಳಗೊಂಡಿದೆ ಎಂದರು.

ಕೇಂದ್ರ ಸರ್ಕಾರದ ಅಂಕಿ ಅಂಶಗಳ ಪ್ರಕಾರವೇ ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆ 80 ಕೋಟಿ ಇದೆ. ಅಧಿಕೃತ ಬೆಲೆ ಸೂಚ್ಯಂಕವು 2014 ಮೇ ತಿಂಗಳಿಗೆ ಹೋಲಿಸಿದರೆ 2023 ರಲ್ಲಿ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳು ಶೇಕಡಾ 30 ರಷ್ಟು ಹೆಚ್ಚಾಗಿವೆ ಎಂದರು.

ಅಡುಗೆ ಸಿಲಿಂಡರ್‌ನ ಸಬ್ಸಿಡಿ ಕಡಿತದ ನಂತರ 400 ರು. ಇದ್ದ ಸಿಲಿಂಡರ್ 1200 ರು. ಗಳು ವರೆಗೆ ಏರಿಕೆಯಾಗಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಹತ್ತು ವರ್ಷ ಕಳೆಯುತ್ತಾ ಬಂತು ರೈತರನ್ನು 2022ಕ್ಕೆ ಎರಡು ಪಟ್ಟು ಶ್ರೀಮಂತರನ್ನಾಗಿ ಮಾಡುತ್ತೇವೆ ಎಂದು ಹೇಳಿದ ಕನಸು ನನಸಾಗಲೇ ಇಲ್ಲ. ಸುಳ್ಳಿನ ಕೇಂದ್ರ ಸರಕಾರಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ರಾಮಲಿಂಗಪ್ಪ ಮತ್ತು ಸಿಐಟಿಯು ತಾಲೂಕು ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ ಮಾತನಾಡಿದರು.

ಅಂಗನವಾಡಿ ನೌಕರರ ಸಂಘದ ತಾಲೂಕಾಧ್ಯಕ್ಷೆ ಬಸಲಿಂಗಮ್ಮ ನಾಟೇಕಾರ, ರೈತ ಸಂಘದ ಜಿಲ್ಲಾಧ್ಯಕ್ಷ ಭೀಮನಗೌಡ ಕಟ್ಟಿಮನಿ, ಜಿಲ್ಲಾಧ್ಯಕ್ಷ ಶರಣು ಮಂದಾರವಾಡ, ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲೂಕಾಧ್ಯಕ್ಷೆ ರಂಗಮ್ಮ ಕಟ್ಟಿಮನಿ, ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಪ್ರದೀಪ್ ಅಣಬಿ, ಅಂಗನವಾಡಿ ನೌಕರರ ಸಂಘದ ವಡಗೇರಾ ತಾಲೂಕಾಧ್ಯಕ್ಷ ಇಂದಿರಾ ದೇವಿ ಕೊಂಕಲ್, ತಾಲೂಕು ಕಾರ್ಯದರ್ಶಿ ಯಮುನಮ್ಮ ದೋರನಹಳ್ಳಿ, ಚಂದಮ್ಮ ನಾಯ್ಕಲ್, ಅಕ್ಷರ ದಾಸೋಹ ನೌಕರರ ಸಂಘದ ಗೌರವಾಧ್ಯಕ್ಷ ಸುನಂದಾ ಹಿರೇಮಠ್, ಕಾರ್ಯದರ್ಶಿ ಈರಮ್ಮ ಹಯ್ಯಾಳ್ಕರ ಇತರರಿದ್ದರು.

Share this article