ಸಂವಿಧಾನ ಪೀಠಿಕೆ ಫಲಕಗಳ ಅನಾವರಣ ಕಾರ್ಯಕ್ರಮ
ಪ್ರಪಂಚದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಎಲ್ಲಾ ವಿಧಾನಗಳಿಂದಲೂ ಸಮಾನತೆಯನ್ನು ಸಾರುವ ಸರ್ವ ಶ್ರೇಷ್ಠ ಸಂವಿಧಾನವೆಂದರೆ ಭಾರತದ ಸಂವಿಧಾನ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ ಹೇಳಿದರು.
ತುಮಕೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪುರುಷ ಮತ್ತು ಮಹಿಳಾ ವಿದ್ಯಾರ್ಥಿನಿಲಯಗಳು ಗುರುವಾರ ಆಯೋಜಿಸಿದ್ದ ‘ಸಂವಿಧಾನ ಪೀಠಿಕೆ ಫಲಕಗಳ ಅನಾವರಣ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಅನ್ಯಾಯಕ್ಕೆ ಒಳಪಟ್ಟ ನಿಕೃಷ್ಠ ವರ್ಗಗಳಿಗೆ ಸಮಾನತೆ ಸಿಗಬೇಕು, ಸರ್ವರಿಗೂ ಸಮಾನವಾದ ನ್ಯಾಯವನ್ನು ಒದಗಿಸಿಕೊಡಬೇಕು ಎಂಬ ದೃಷ್ಟಿಯಿಂದ ಸಂವಿಧಾನ ರಚನೆಯಾಗಿದೆ. ಭಾರತದ ಸಂವಿಧಾನಕ್ಕೆ ಬಡವ ಮತ್ತು ಶ್ರೀಮಂತನೆಂಬ ಭೇದವಿಲ್ಲ ಎಂದು ಹೇಳಿದರು.
ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಕೆ. ಮಾತನಾಡಿ, ವೈವಿಧ್ಯತೆ ತುಂಬಿರುವ, ವಿಭಿನ್ನ ಜನಾಂಗ, ಧರ್ಮವಿರುವ ರಾಷ್ಟ್ರದಲ್ಲಿ ಎಲ್ಲರೂ ಸಮಾನರು ಎಂದು ಬೋಧಿಸುವ ಹಕ್ಕು ಸಂವಿಧಾನಕ್ಕೆ ಮಾತ್ರ ಇರುವುದು. ಶಾಂತಿ, ಶಿಸ್ತು, ಸುವ್ಯವಸ್ಥೆಯನ್ನು ಕಾಪಾಡಲು ಸಂವಿಧಾನವಿರಬೇಕು. ಸರ್ವರಲ್ಲೂ ಸಂವಿಧಾನದ ಅರಿವು ಮೂಡಬೇಕು ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕದ ನಿರ್ದೇಶಕ ಪ್ರೊ. ಬಸವರಾಜ ಜಿ., ಐಕ್ಯೂಎಸಿ ನಿರ್ದೇಶಕ ಪ್ರೊ.ರಮೇಶ್ ಬಿ, ಕಾರ್ಯಪಾಲಕ ಅಭಿಯಂತರ ಸುರೇಶ್ ಜಿ.ಆರ್. ಅಂಬೇಡ್ಕರ್ ಅಧ್ಯಯನ ಪೀಠದ ನಿರ್ದೇಶಕ ಪ್ರೊ. ಕೇಶವ, ಸ್ನಾತಕೋತ್ತರ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಪುರುಷ ವಿದ್ಯಾರ್ಥಿನಿಲಯದ ನಿಲಯಪಾಲಕ ಡಾ.ಕುಮಾರ್ ಬಿ., ಡಾ. ಲಕ್ಷೀರಂಗಯ್ಯ ಕೆ.ಎನ್., ಮಹಿಳಾ ವಿದ್ಯಾರ್ಥಿನಿಲಯದ ನಿಲಯ ಪಾಲಕಿ ಡಾ.ಅಶ್ವಿನಿ ಬಿ.ಜಾನೆ, ಪ್ರೊ. ಪರಶುರಾಮ ಕೆ.ಜಿ., ಡಾ. ದ್ವಾರಕಾನಾಥ್ ವಿ., ಡಾ.ನಾಗಭೂಷಣ ಬಗ್ಗನಡು ಇದ್ದರು.