ಮಕ್ಕಳ ಬೆಳವಣಿಗೆಗೆ ಪೋಷಕರ ಪಾತ್ರ ಹಿರಿದು:ಜಾಹ್ನವಿ

KannadaprabhaNewsNetwork | Published : Jul 5, 2024 12:51 AM

ಸಾರಾಂಶ

ಪ್ರಜಾಪ್ರಭುತ್ವದ ತತ್ವಗಳನ್ನು ಎತ್ತಿ ಹಿಡಿಯುವಲ್ಲಿ ಶಾಲೆಯ ಬದ್ಧತೆಯ ಬಗ್ಗೆ ಶ್ಲಾಘಿಸಿದರು. ದೇಶದಲ್ಲಿ ಮತದಾನಕ್ಕೆ ನಡೆಯುವ ಎಲ್ಲಾ ಕ್ರಮಗಳಂತೆ ಚುನಾವಣೆಯನ್ನು ಶಾಲೆಯಲ್ಲಿ ನಡೆಸಿದ್ದು, ಸಂತಸ ತಂದಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೋಷಕರ ಪಾತ್ರ ದೊಡ್ಡದು ಎಂದು ಡಿಸಿಪಿ ಎಸ್. ಜಾಹ್ನವಿ ಅಭಿಮತ ವ್ಯಕ್ತಪಡಿಸಿದರು.

ವಿಜಯ ವಿಠ್ಠಲ ವಿದ್ಯಾಶಾಲೆಯಲ್ಲಿ ಮಕ್ಕಳಿಗೆ ಚುನಾವಣೆಯ ಅರಿವು ಮೂಡಿಸುವ ದೃಷ್ಠಿಯಿಂದ ವಿದ್ಯಾರ್ಥಿ ಸಂಘದ ಚುನಾವಣೆಯನ್ನು ನಡೆಸಿ ಇಂದು ಗೆದ್ದಂತಹ ನೂತನ ನಾಯಕರ ಹಾಗೂ ವಿವಿಧ ಕ್ಲಬ್ ಗಳ ನಾಯಕರ ವಿದ್ಯಾರ್ಥಿಗಳಿಗೆ ಪದಗ್ರಹಣ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸು ಅವರು ಮಾತನಾಡಿದರು.

ಮಕ್ಕಳಲ್ಲಿ ನಾಯಕತ್ವದ ಗುಣಗಳು ಮತ್ತು ಜವಾಬ್ದಾರಿಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ನಿದರ್ಶನದ ಮೂಲಕ ತಿಳಿಸಿದರು. ಮತದಾನದಲ್ಲಿ ಗೆದ್ದವರು ಮಾತ್ರ ನಾಯಕರಾಗುವುದಿಲ್ಲ, ಸ್ಪರ್ಧೆ ಮಾಡಿದ ಎಲ್ಲರಲ್ಲೂ ನಾಯಕತ್ವ ಗುಣವಿರುತ್ತದೆ ಎಂದು ಮಕ್ಕಳನ್ನು ಪ್ರೇರೇಪಿಸಿದರು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೋಷಕರ ಪಾತ್ರ ದೊಡ್ಡದು. ಅವರಿಗೆ ಹೆಸರು ತರುವಂತ ಮಕ್ಕಳಾಗಬೇಕೆಂದು ಮಕ್ಕಳಿಗೆ ತಿಳಿ ಹೇಳಿದರು. ಮತದಾನದಲ್ಲಿ ಗೆದ್ದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿಜಯವಿಠಲ ವಿದ್ಯಾಸಂಸ್ಥೆಗಳ ಗೌರವ ಕಾರ್ಯದರ್ಶಿ ಆರ್. ವಾಸುದೇವ್ ಭಟ್ ಮಾತನಾಡಿ, ಪ್ರಜಾಪ್ರಭುತ್ವದ ತತ್ವಗಳನ್ನು ಎತ್ತಿ ಹಿಡಿಯುವಲ್ಲಿ ಶಾಲೆಯ ಬದ್ಧತೆಯ ಬಗ್ಗೆ ಶ್ಲಾಘಿಸಿದರು. ದೇಶದಲ್ಲಿ ಮತದಾನಕ್ಕೆ ನಡೆಯುವ ಎಲ್ಲಾ ಕ್ರಮಗಳಂತೆ ಚುನಾವಣೆಯನ್ನು ಶಾಲೆಯಲ್ಲಿ ನಡೆಸಿದ್ದು, ಸಂತಸ ತಂದಿದೆ ಎಂದು ತಿಳಿಸಿದರು. ಸ್ಕೌಟ್ಸ್ ಮತ್ತು ಎನ್.ಸಿ.ಸಿ ವಿದ್ಯಾರ್ಥಿ ತಂಡಗಳು ತಮ್ಮ ತಮ್ಮ ಜವಾಬ್ದಾರಿಗಳನ್ನು ಹೇಗೆ ನಿರ್ವಹಿಸಬೇಕೆಂಬುದನ್ನ ತಿಳಿಸಿದರು. ಹಾಗೂ ಶಾಲೆಯಲ್ಲಿ ಏರ್ ಫೋರ್ಸ್ ಪರಿಚಯಿಸುತ್ತಿರುವ ವಿಷಯವನ್ನು ಮಕ್ಕಳಿಗೆ ತಿಳಿಸಿದರು. ಮತದಾನದಲ್ಲಿ ಆಯ್ಕೆಯಾದ ನೂತನ ನಾಯಕರನ್ನು ಹಾಗೂ ವಿವಿಧ ಕ್ಲಬ್ ಗಳ ನಾಯಕರನ್ನು ಅಭಿನಂದಿಸಿದರು.

ಚುನಾವಣೆಯಲ್ಲಿ ಗೆದ್ದಂತಹ ವಿದ್ಯಾರ್ಥಿಗಳಿಗೆ ಗಣ್ಯರು ಬ್ಯಾಡ್ಜ್ ನೀಡುವ ಮೂಲಕ ಮಕ್ಕಳನ್ನು ಅಭಿನಂದಿಸಿದರು. ನಂತರ ಮಕ್ಕಳೆಲ್ಲರೂ ಪ್ರತಿಜ್ಞಾ ವಿಧಿಯನ್ನು ಹೇಳಿ, ತಮ್ಮ ಮುಂದಿನ ಜವಾಬ್ದಾರಿಯನ್ನು ತಿಳಿಸಿದರು.

ವಿಜಯ ವಿಠಲ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್‌, ವಿಜಯವಿಠಲ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಎಸ್‌.ಎ. ವೀಣಾ, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಸೌಮ್ಯಾ, ವಿವಿಧ ವಿಭಾಗದ ಮುಖ್ಯಸ್ಥರು, ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಇದ್ದರು.

Share this article