ಪೊಲೀಸ್‌ ಭ್ರಷ್ಟಾಚಾರಕ್ಕೆ ಬೇಸತ್ತು ರಾಜೀನಾಮೆಗೆ ಮುಂದಾದ ಶಾಸಕ

KannadaprabhaNewsNetwork | Published : Jul 5, 2024 12:50 AM

ಸಾರಾಂಶ

MLA Sharanagouda kandakooru fedup of police curruption

- ಪೊಲೀಸ್‌ ಭ್ರಷ್ಟಾಚಾರಕ್ಕೆ ಬೇಸತ್ತು ರಾಜೀನಾಮೆಗೆ ಮುಂದಾದ ಶಾಸಕ। ಪೊಲೀಸ್‌ ಇಲಾಖೆಯಿಂದಲೇ ಅನ್ಯಾಯ-ಅಕ್ರಮ ಆರೋಪ

- ಖಾಕಿಪಡೆ ವಿರುದ್ಧ ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರು ಆಕ್ರೋಶ

- ರಾಜೀನಾಮೆ ಕೊಡುತ್ತೇನೆಂದು ಜನಸ್ಪಂದನದಲ್ಲಿ ಹೇಳಿದ ಕಂದಕೂರು

-----

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯಲ್ಲಿ ಅನ್ಯಾಯ-ಅಕ್ರಮಕ್ಕೆ ಪೊಲೀಸ್‌ ಇಲಾಖೆಯ ಕುಮ್ಮಕ್ಕು ನೀಡುತ್ತಿದ್ದಾರೆಂದು ಗಂಭೀರವಾಗಿ ಆರೋಪಿಸಿದ ಗುರುಮಠಕಲ್‌ ಶಾಸಕ, ಜೆಡಿಎಸ್‌ನ ಶರಣಗೌಡ ಕಂದಕೂರು, ಇದರಿಂದ ನೊಂದ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರು ಗುರುವಾರ ಜಿಲ್ಲೆಯ ಗುರುಮಠಕಲ್‌ನಲ್ಲಿ ನಡೆದ ಜನಸ್ಪಂದನದಲ್ಲಿ ಜಿಲ್ಲಾಧಿಕಾರಿ ಎಸ್ಪಿಯೆದುರೇ ಕಿಡಿ ಕಾರಿದ ಪ್ರಸಂಗ ನಡೆದಿದೆ.

ಜನಸ್ಪಂದನಾ ಕಾರ್ಯಕ್ರಮದಲ್ಲಿ ಶಾಸಕ ಶರಣಗೌಡ ಕಂದಕೂರು ರಾಜೀನಾಮೆ ಮಾತು ಕೆಲಕಾಲ ಅಧಿಕಾರಿಗಳ ದಂಗುಬಡಿಸಿತ್ತು. ಗುರುಮಠಕಲ್ ಕ್ಷೇತ್ರದಲ್ಲಿ ಪೊಲೀಸರ ಭ್ರಷ್ಟಾಚಾರ ಹೆಚ್ಚಾಗಿದೆ.

ಹೀಗಾಗಿ ಪೊಲೀಸ್ ಇಲಾಖೆಯ ಭೃಷ್ಟಚಾರಕ್ಕೆ ಬೇಸತ್ತು ರಾಜೀನಾಮೆ ಕೊಡಲು ರೆಡಿ ಇದ್ದೇನೆ ಎಂದ ಕಂದಕೂರು

ಬಡವರು ಪೊಲೀಸ್ ಠಾಣೆಗೆ ಹೋದರೆ ನ್ಯಾಯ ಕೊಡುತ್ತಿಲ್ಲ, ಪ್ರಭಾವಿಗಳ ಒತ್ತಡಕ್ಕೆ ಮಣಿದು ಕೇಸ್ ಹಾಕುತ್ತಾರೆ ಎಂದು ದೂರಿದ ಶಾಸಕ ಕಂದಕೂರ, ದೂರು ಕೊಡಲು ಹೋದವರ ವಿರುದ್ಧವೇ ಕೌಂಟರ್‌ ಕೇಸ್‌ ಹಾಕುವಂತೆ ಪೊಲೀಸ್‌ ಅಧಿಕಾರಿಗಳೇ ಆರೋಪಿಗಳಿಗೆ ಸಲಹೆ ನೀಡುತ್ತಿರುವುದು ನೋಡಿದರೆ, ಬಡವರಿಗೆ ನ್ಯಾಯ ಸಿಗಲು ಅಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರಿಗೆ ಅಕ್ರಮ ದಂಧೆ ಬಗ್ಗೆ ಫೋನಾಯಿಸಿದರೆ ಇದಕ್ಕೆ ಕ್ರಮವೇ ಇರುವುದಿಲ್ಲ. ಪೊಲೀಸರು ಬಡವರಿಗೆ ನ್ಯಾಯ ಒದಗಿಸಬೇಕು, ಬಡವರಿಗೆ ಅನ್ಯಾಯವಾದರೆ ಈ ಬಗ್ಗೆ ಕ್ರಮ ಜರುಗಿಸಬಾರದೇ ಎಂದು ಎಸ್ಪಿ ಸಂಗೀತಾ ಅವರನ್ನು ಪ್ರಶ್ನಿಸಿದ ಕಂದಕೂರು, ಪೊಲೀಸರು ಭ್ರಷ್ಟಚಾರಕ್ಕೆ ಕುಮ್ಮಕ್ಕು ಕೊಡಬೇಡಿ ಜನರಿಗೆ ಒಳ್ಳೆಯ ಕೆಲಸ ಮಾಡಿ ಎಂದರು.

ಪೊಲೀಸ್‌ ಇಲಾಖೆಯ ಇಂತಹ ಭ್ರಷ್ಟಾಚಾರಕ್ಕೆ ಬೇಸತ್ತು ನಾನು ನೇರವಾಗಿ ಯಾನಾಗುಂದಿ ಮಾಣಿಕೆಮ್ಮ ದೇಗುಲಕ್ಕೆ ತೆರಳಿ ರಾಜೀನಾಮೆ ನೀಡುವುದಾಗಿ ಕಂದಕೂರು ಅವರು ಜಿಲ್ಲಾಧಿಕಾರಿ ಡಾ. ಸುಶೀಲಾ ಹಾಗೂ ಎಸ್ಪಿ ಸಂಗೀತಾ ಅವರೆದುರು ತೀವ್ರ ಬೇಸರ ವ್ಯಕ್ತಪಡಿಸಿದರು.

-------

4ವೈಡಿಆರ್‌14 : ಗುರುಮಠಕಲ್‌ ಶಾಸಕ, ಜೆಡಿಎಸ್‌ನ ಶರಣಗೌಡ ಕಂದಕೂರು ಅವರು ಗುರುವಾರ ಗುರುಮಠಕಲ್‌ ನಲ್ಲಿ ನಡೆದ ಜನಸ್ಪಂದನದಲ್ಲಿ ಪೊಲೀಸ್‌ ಇಲಾಖೆಯ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು.

---------

4ವೈಡಿಆರ್‌15 : ಶರಣಗೌಡ ಕಂದಕೂರು, ಶಾಸಕರು, ಗುರುಮಠಕಲ್‌. ಯಾದಗಿರಿ ಜಿಲ್ಲೆ.

Share this article