ಭಟ್ಕಳ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಏರ್ಪಡಿಸಲಾದ ರಕ್ತದಾನ ಶಿಬಿರವನ್ನು ಅನಿವಾಸಿ ಭಾರತೀಯ ಉದ್ಯಮಿ ವಾಮನ ರಾಮನಾಥ ಶ್ಯಾನಭಾಗ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಭಟ್ಕಳ ತಾಲೂಕು ಆಸ್ಪತ್ರೆ ಸಾಕಷ್ಟು ಅಭಿವೃದ್ಧಿ ಕಂಡಿದೆ. ಇದಕ್ಕೆ ಪ್ರತಿದಿನ ಇಲ್ಲಿಗೆ ಬರುವ ರೋಗಿಗಳ ಸಂಖ್ಯೆಯೇ ಸಾಕ್ಷಿಯಾಗಿದೆ. ತಾಲೂಕಿನ ಜನತೆಗೆ ಅವಶ್ಯವಿರುವ 10 ಹಾಸಿಗೆಗಳ ತುರ್ತು ಚಿಕಿತ್ಸಾ ಘಟಕವನ್ನು ನಿರ್ಮಾಣ ಮಾಡಿಕೊಡಲು ನಿರ್ಧಾರ ಮಾಡಲಾಗಿದೆ. ಇದರಿಂದ ಈ ಭಾಗದ ಅನೇಕರಿಗೆ ಸಹಾಯಕವಾಗಲಿದೆ ಎಂದರು.
ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಮಾತನಾಡಿದರು. ಉಡುಪಿಯ ರಕ್ತನಿಧಿ ಕೇಂದ್ರದ ವೈಧ್ಯಾಧಿಕಾರಿ ಡಾ. ವೀಣಾ ಕುಮಾರಿ ಮಾತನಾಡಿ ರಕ್ತದಾನ ಮಹತ್ವವನ್ನು ತಿಳಿಸಿಕೊಟ್ಟರು.
ವೇದಿಕೆಯಲ್ಲಿ ತಂಜೀಂ ಪ್ರಧಾನ ಕಾರ್ಯದರ್ಶಿ ಅಬ್ದುರ್ ರಖೀಬ್ ಎಂ.ಜೆ., ಆನಂದ ಆಶ್ರಮ ಕಾನ್ವೆಂಟ್ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಲವಿನಾ ಜ್ಯೋತಿ ಡಿಸೊಜ ಉಪಸ್ಥಿತರಿದ್ದರು. ತಹಶಿಲ್ದಾರ ನಾಗೇಂದ್ರ ಕೋಳಶೆಟ್ಟಿ ಸ್ವತಃ ತಾವೇ ಮುಂದೆ ಬಂದು ಮೊದಲಿಗರಾಗಿ ರಕ್ತದಾನ ಮಾಡಿದ್ದು ವಿಶೇಷವಾಗಿತ್ತು. ಸಹಾಯಕ ಆಯುಕ್ತೆ ಕಾವ್ಯರಾಣಿ ಅವರು ಶಿಬಿರದ ಸಂದರ್ಭದಲ್ಲಿ ಆಗಮಿಸಿ ಶುಭ ಹಾರೈಸಿದರು.ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲಾಯಿತು.