ಪ್ರವಾಸೋದ್ಯಮ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಮಾಹಿತಿ
ಗದಗ: 1973 ಹಾಗೂ 2023ರ ವರೆಗಿನ ಐತಿಹಾಸಿಕ ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ಸಂಭ್ರಮ-50 ರ ಸವಿನೆಪಿಗಾಗಿ ಗದಗ ನಗರದಲ್ಲಿ 31 ಅಡಿ ಎತ್ತರದ ಸ್ತೂಪ ನಿರ್ಮಾಣ ಮಾಡಲಾಗುತ್ತಿದ್ದು, ಇದು ಸಂಭ್ರಮವನ್ನು ಶಾಶ್ವತವಾಗಿ ನೆನಪಿನಲ್ಲಿ ಉಳಿಸುತ್ತದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು. ಅವರು ಸೋಮವಾರ ರಾತ್ರಿ ಗದಗ ಭೂಮರಡ್ಡಿ ವೃತ್ತದ ಪಕ್ಕದಲ್ಲಿ ನಿರ್ಮಾಣ ಮಾಡುತ್ತಿರುವ ಸ್ತೂಪವನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ಸ್ತೂಪ ನಿರ್ಮಾಣ ಮಾಡಬೇಕು ಎನ್ನುವ ಕಲ್ಪನೆ ಹಿಂದಿನ ಕಾಲದಿಂದ ಇದ್ದರೂ, ಅನಾವರಣಗೊಳಿಸಲು ಸಾಧ್ಯವಾಗಿರಲಿಲ್ಲ. ಸ್ತೂಪದಲ್ಲಿ 1973 ಹಾಗೂ 2023ರ ಐತಿಹಾಸಿಕ ಘಟನೆಗಳನ್ನು ಹಾಗೂ ಇತರೆ ಪ್ರಮುಖ ಮಾಹಿತಿಗಳನ್ನು ದಾಖಲಾಗಿರುತ್ತದೆ. ನವೆಂಬರ್ 3ರಂದು ಸಿಎಂ ಸಿದ್ದರಾಮಯ್ಯ ಅವರು ಈ ಸ್ತೂಪವನ್ನು ಅನಾವರಣಗೊಳಿಸಲಿದ್ದಾರೆ ಎಂದರು.
ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ನಾಮಕರಣ ಮಾಡಬೇಕು ಎಂಬ ದಿಸೆಯಲ್ಲಿ ಗದಗ ಭಾಗದವರು ವಿಶೇಷ ಪ್ರಯತ್ನ ಮಾಡಿದ್ದಾರೆ. ಕುಮಾರವ್ಯಾಸ ಅವರು ತಮ್ಮ ಕಾವ್ಯಕ್ಕೆ ಕರ್ನಾಟಕ ಭಾರತ ಕಥಾಮಂಜರಿ ಹೆಸರು ನೀಡಿದ್ದರೆ, ದುರ್ಗಸಿಂಹ ಹಾಗೂ ಅಲೂರು ವೆಂಕಟರಾಯರು ಕರ್ನಾಟಕ ಹೆಸರನ್ನು ಉಲ್ಲೇಖಿಸಿದ್ದಾರೆ. ಜಿಲ್ಲೆಯ ಅಂದಿನ ಪ್ರಮುಖರಾದ ಅಂದಾನಪ್ಪ ದೊಡ್ಡಮೇಟಿ, ಕೆ.ಎಚ್. ಪಾಟೀಲ, ಎಂ.ಎಂ. ಕಣವಿ ಸೇರಿ ಹಲವರು ಕರ್ನಾಟಕ ಹೆಸರು ನಾಮಕರಣವಾಗಲು ಶ್ರಮಿಸಿದ್ದಾರೆ. ಅಲ್ಲದೇ, ಇಂದಿರಾ ಗಾಂಧಿ, ರಾಜೀವ ಗಾಂಧಿ ಹಾಗೂ ಸಾಯಿ ಬಾಬಾ ಅವರು ಸಾಕ್ಷಿಯಾಗಿರುವಂತಹ ಸತ್ವಯುತ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಕಾರ್ಯಕ್ರಮ ನಡೆಯುತ್ತಿದೆ ಎಂದರು.ರಾಜ್ಯದ ಒಂದು ಕೋಟಿಗೂ ಅಧಿಕ ಬಡ ಕುಟುಂಬಗಳನ್ನು ಬಡತನ ರೇಖೆಗಿಂತ ಮೇಲೆತ್ತುವ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ ನಂತರ ಪ್ರಥಮ ಬಾರಿಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಜಿಲ್ಲೆಗೆ ಕನ್ನಡ ಜಾತ್ರೆಗಾಗಿ ಆಗಮಿಸಲಿದ್ದಾರೆ. ಕರ್ನಾಟಕ ಸಂಭ್ರಮ-50 ಕಾರ್ಯಕ್ರಮದ ನಂತರ 450 ಹಾಸಿಗೆಯುಳ್ಳ ಜಿಮ್ಸ್ ಕಟ್ಟಡ, ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆಪರೇಷನ್ ಥಿಯೇಟರ್ ಉದ್ಘಾಟನೆ, ಆರ್‌ಡಿಪಿಆರ್ ವಿಶ್ವವಿದ್ಯಾಲಯಕ್ಕೆ ಭೇಟಿ, ನಂತರ ಸಾರ್ವಜನಿಕರ ಅಹವಾಲು ಸ್ವೀಕರಿಸುವರು ಎಂದರು.
ಸ್ಮಾರಕಗಳ ದತ್ತು ಸ್ವೀಕಾರ: ನಾಡಿನ ಸಂಸ್ಕೃತಿ ಇತಿಹಾಸ ಸಾರುವ 25 ಸಾವಿರ ಸ್ಮಾರಕಗಳು ರಾಜ್ಯದಲ್ಲಿವೆ. 500ಕ್ಕೂ ಹೆಚ್ಚು ಸ್ಮಾರಕಗಳನ್ನು ಸರ್ಕಾರ ಘೋಷಿಸಿದ್ದು. 300 ಸ್ಮಾರಕಗಳ ರಕ್ಷಣೆಗೆ ನಿಗಾ ಇರಿಸಲಾಗಿದೆ. 200ಕ್ಕೂ ಹೆಚ್ಚು ಸ್ಮಾರಕಗಳ ರಕ್ಷಣೆ ಆಗಬೇಕಾಗಿದೆ. ಇಂತಹ ಇತಿಹಾಸಿಕ 250 ಸ್ಮಾರಕಗಳನ್ನು ನವೆಂಬರ್‌ನಲ್ಲಿ ಘೋಷಣೆ ಮಾಡಲಿದ್ದೇವೆ. ಈಗಾಗಲೇ ಸ್ಮಾರಕ ದತ್ತು ಸ್ವೀಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಸಾರ್ವಜನಿಕರು ಹೆಚ್ಚಿನ ಆಸಕ್ತಿಯಿಂದ ಮುಂದೆ ಬರಬೇಕು. ಅಮೆರಿಕಾದಲ್ಲಿರುವ 25ಕ್ಕೂ ಹೆಚ್ಚು ಪ್ರಮುಖರನ್ನು ಸಂಪರ್ಕಿಸಿದ್ದು ಅವರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದರು.ಸ್ಮಾರಕ ಸಂರಕ್ಷಣೆಗಾಗಿ ಪ್ರವಾಸ: ನ. 6ರಿಂದ ನಮ್ಮ ಸ್ಮಾರಕ ದರ್ಶನ ಹಾಗೂ ಅವುಗಳ ಸಂರಕ್ಷಣೆಗಾಗಿ ಬಸವಕಲ್ಯಾಣದಿಂದ ಪ್ರವಾಸ ಆರಂಭಿಸುತ್ತೇನೆ, ಬಸವಕಲ್ಯಾಣ, ಭಾಲ್ಕಿ, ಬೀದರ್, ಕಲಬುರಗಿಯ ನಾಗಾವಿಯಲ್ಲಿ 10ನೇ ಶತಮಾನದ ವಿಶ್ವವಿದ್ಯಾಲಯವಿದ್ದು, ಅಲ್ಲಿನ ಘಟಿಕೋತ್ಸವ ಸಭಾಂಗಣದ ದರ್ಶನ, ಸ್ವಚ್ಛತೆಯ ಜೊತೆಗೆ ದತ್ತು ಪಡೆಯುವ ಯೋಜನೆ ಹೀಗೆ 3 ದಿನಗಳ ತಮ್ಮ ಪ್ರವಾಸದ ವಿವರವನ್ನು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.ಗಡಿ ವಿಚಾರಣೆ ಮುಂದೂಡಿಕೆ: ಸುಪ್ರೀಂ ಕೋರ್ಟ್‌ನಲ್ಲಿ ನವೆಂಬರ್ 1ರಂದು ನಡೆಯಬೇಕಿದ್ದ ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ ಪ್ರಕರಣದ ವಿಚಾರಣೆಯನ್ನು 2024ರ ಜನವರಿ ತಿಂಗಳಿನಲ್ಲಿ ಮುಂದೂಡಿರುವ ಮಾಹಿತಿ ಲಭ್ಯವಾಗಿದೆ. ಗಡಿ ವಿಚಾರವಾಗಿ ಶಿವರಾಜ ಪಾಟೀಲ ಅವರ ನೇತೃತ್ವದ ಸಮಿತಿ ಇದ್ದು, ಅವರೊಟ್ಟಿಗೂ ನಾನು ಈಗಾಗಲೇ ಮಾತನಾಡಿದ್ದೇನೆ, ನಮ್ಮ ನಿಲುವುಗಳನ್ನು ತೆಗೆದುಕೊಳ್ಳಲು, ಸ್ಪಷ್ಟಪಡಿಸಲು ಸಮಯಾವಕಾಶ ದೊರೆತಂತಾಗಿದೆ. ಕನ್ನಡಪರ ಹೋರಾಟಗಾರರು, ವಿಶೇಷ ಆಸಕ್ತಿಯುವಳ್ಳವರು ಹಾಗೂ ಜ್ಞಾನವನ್ನು ಹೊಂದಿರುವವರ ಸರ್ಕಾರ ಚರ್ಚಿಸಿ ದಿಟ್ಟ ನಿಲುವನ್ನು ತೆಗೆದುಕೊಳ್ಳಲಿದೆ ಎಂದು ಎಚ್.ಕೆ. ಪಾಟೀಲ ವಿಶ್ವಾಸ ವ್ಯಕ್ತ ಪಡಿಸಿದರು. ರೋಣ ಶಾಸಕ ಜಿ.ಎಸ್. ಪಾಟೀಲ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಮಾಜಿ ಸಂಸದ ಆಯ್.ಜಿ. ಸನದಿ, ಸಿದ್ದು ಪಾಟೀಲ, ಅಶೋಕ ಮಂದಾಲಿ ಮುಂತಾದವರು ಹಾಜರಿದ್ದರು.